ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದ ಅಭಿವೃದ್ಧಿಗೆ ಅನುದಾನ ಸದ್ಬಳಕೆ: ಶಾಸಕ ಬಿ.ಆರ್.ಪಾಟೀಲ

₹ 63 ಕೋಟಿ ವೆಚ್ಚದ ಅಮೃತ ಯೋಜನೆಗೆ 13ರಂದು ಚಾಲನೆ
Published 4 ಜುಲೈ 2024, 5:56 IST
Last Updated 4 ಜುಲೈ 2024, 5:56 IST
ಅಕ್ಷರ ಗಾತ್ರ

ಆಳಂದ: ಪಟ್ಟಣದ ಸ್ವಚ್ಛತೆ, ಚರಂಡಿ ನಿರ್ಮಾಣ, ಸೌಂದರ್ಯ ಹೆಚ್ಚಿಸಲು ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಪುರಸಭೆಯಲ್ಲಿನ ಅನುದಾನ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಪಟ್ಟಣದಲ್ಲಿ ಕುಡಿಯುವ ನೀರು ವಾರಕೊಮ್ಮೆ ಪೂರೈಕೆಯಾಗುತ್ತಿದೆ. ಸಾರ್ವಜನಿಕರ ಸಮಸ್ಯೆಯನ್ನು ತಪ್ಪಿಸಲು ಅಮೃತ ಯೋಜನೆಯ ₹ 63 ಕೋಟಿ ವೆಚ್ಚದ ಅನುದಾನದಲ್ಲಿ ನಿರಂತರ ನೀರು ಪೂರೈಕೆ ಕೈಗೊಳ್ಳಲಾಗುವುದು, ಇದೇ 13 ರಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.

‘ರಸ್ತೆ ಅಗಲೀಕರಣ, ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಮತ್ತಿತರ ಮೂಲಭೂತ ಸೌಲಭ್ಯಗಳು ಒದಗಿಸಲು ನಗರೋತ್ಥಾನ ಯೋಜನೆಯ ₹ 11 ಕೋಟಿ, ಎಸ್‌ಎಫ್‌ಸಿ ಯೋಜನೆಯ ₹ 11 ಕೋಟಿ ಹಾಗೂ ವಿಶೇಷ ಅಭಿವೃದ್ಧಿ ಅನುದಾನ ₹ 6.25 ಕೋಟಿ ಅನುದಾನವು ಬಳಸಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪುರಸಭೆ ಸದಸ್ಯರಾದ ಅಬ್ದುಲ್‌ ವಹೀದ್‌ ಜರ್ದಿ, ಮೃತ್ಯುಂಜಯ ಆಲೂರೆ, ಲಕ್ಷ್ಮಣ ಝಳಕಿ, ಫಿರ್ದೋಸಿ ಅನ್ಸಾರಿ ಮಾತನಾಡಿ,‘ಪಟ್ಟಣದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳು ಬಳಕೆ ಆಗುತ್ತಿಲ್ಲ, ಮಹಿಳೆಯರಿಗೆ ನಿರಂತರ ತೊಂದರೆ ಹೆಚ್ಚುತ್ತಿದೆ. ತಕ್ಷಣ ಎಲ್ಲ ಶೌಚಾಲಯಗಳಿಗೂ ವಿದ್ಯುತ್‌, ನೀರು ಮತ್ತಿತರ ಮೂಲಭೂತ ಸೌಕರ್ಯ ಕಲ್ಪಿಸಬೇಕು’ ಎಂದು ‌ಒತ್ತಾಯಿಸಿದರು.

ಸದಸ್ಯರಾದ ಅಮಜ್ದಲಿ ಕರ್ಜಗಿ, ಅಸ್ಮಿತಾ ಚಿಟ್ಟಗುಪ್ಪಕರ್‌, ದೊಂಡಿಬಾ, ಸೋಮಶೇಖರ ಹತ್ತರಕಿ, ಅಬ್ದುಲ್‌ ಚೌಸ್‌, ರಾಜಕುಮಾರ್‌, ಸಂಜಯ ನಾಯಕ, ತೈಬಲಿ ಶೇಖ, ಅಧಿಕಾರಿಗಳಾದ ರಾಘವೇಂದ್ರ, ಮಲ್ಲಿಕಾರ್ಜುನ, ಜೆಇ ಜಗದೀಶ, ರವಿಕಾಂತ ಮಿಸ್ಕೀನ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT