ಶಿವಾನಂದ ಹಸರಗುಂಡಗಿ
ಭೀಮಾನದಿ ಬತ್ತಿ ಹೋಗಿದ ಪರಿಣಾಮ ನದಿ ದಡದ ಗ್ರಾಮಗಳ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕುಡಿಯುವ ನೀರಿಗಾಗಿ ಇಲಾಖೆಯವರು ಕೊರೆಯುತ್ತಿರುವ ಕೊಳವೆ ಬಾವಿಗಳಲ್ಲಿಯೂ ನೀರು ಸಿಗುತ್ತಿಲ್ಲ. ಇನ್ನೊಂದೆಡೆ ದಿನದಿಂದ ದಿನಕ್ಕೆ ಬಿಸಿಲು ಗಾಳಿ ಹೆಚ್ಚಾಗುತ್ತಿದ್ದು, ಕುಡಿಯುವ ನೀರಿಗೆ ಮತ್ತು ಕೃಷಿಗೆ ಗಂಡಾಂತರ ಎದುರಾಗಿದೆ.
ಅಫಜಲಪುರ: ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಮಳೆಯಾಗದ ಕಾರಣ ಮುಂಗಾರು ಬಿತ್ತನೆ ಕುಂಠಿತವಾಗಿದೆ. ಇನ್ನೊಂದೆಡೆ ಕೊಳವೆ ಬಾವಿ, ತೆರೆದ ಬಾವಿ ಮತ್ತು ಭೀಮಾನದಿ ಬತ್ತಿ ಹೋಗಿದ್ದರಿಂದ ಬೇಸಿಗೆ ಬೆಳೆಗಳು ಒಣಗುತ್ತಿವೆ. ಭೀಮಾನದಿ ದಡದ ಗ್ರಾಮಗಳ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕುಡಿಯುವ ನೀರಿಗಾಗಿ ಇಲಾಖೆಯವರು ಕೊರೆಯುತ್ತಿರುವ ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಇನ್ನೊಂದೆಡೆ ದಿನದಿಂಧ ದಿನಕ್ಕೆ ಬಿಸಿಲು ಗಾಳಿ ಹೆಚ್ಚಾಗುತ್ತಿದ್ದು, ಕುಡಿಯುವ ನೀರಿಗೆ ಮತ್ತು ಕೃಷಿಗೆ ಗಂಡಾಂತರ ಎದುರಾಗಿದೆ.
ರೈತರು ಮುಂಗಾರು ಬಿತ್ತನೆಗಾಗಿ ಭೂಮಿಯನ್ನು ಹದ ಮಾಡಿ ಗೊಬ್ಬರ, ಬೀಜ ಖರೀದಿ ಮಾಡಲು ಮುಂದಾಗಿದ್ದಾರೆ. ಆದರೆ ಮಳೆ ಬರುತ್ತಿಲ್ಲ. ಮುಂಗಾರು ಮಳೆ ವಿಳಂಬವಾಗುತ್ತಿರುವುದರಿಂದ ಲಘು, ವಾಣಿಜ್ಯ ಬೆಳೆಗಳಾದ ಅಲಸಂಧಿ, ಎಳ್ಳು, ಸೂರ್ಯಕಾಂತಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇವೆಲ್ಲಾ 90 ದಿನಗಳ ಬೆಳೆಯಾಗಿದ್ದು, ಮತ್ತೆ ಹಿಂಗಾರಿಯಲ್ಲಿ ಜೋಳ ಬಿತ್ತನೆ ಮಾಡಿ ವರ್ಷದಲ್ಲಿ 2 ಬೆಳೆ ಬೆಳೆಯುವ ಕನಸು ಭಗ್ನವಾಗಿದೆ ಎಂದು ಹೇಳುತ್ತಾರೆ ರೈತರು.
ಭೀಮಾನದಿ ಬತ್ತಿ ಕುಡಿಯುವ ನೀರು ಮತ್ತು ಕೃಷಿಗೆ ಸಮಸ್ಯೆಯಾಗಿದೆ. ಮಹಾರಾಷ್ಟ್ರದ ಉಜನಿ ಜಲಾಶಯದ ಮೂಲಕ ಭೀಮಾನದಿಗೆ ನೀರು ಬಿಡಲು ನೀರಾವರಿ ಸಚಿವರೊಂದಿಗೆ ಮಾತನಾಡಿದ್ದೇನೆ.ಎಂ.ವೈ.ಪಾಟೀಲ್, ಶಾಸಕ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ರೂಭಿಕರ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿ, ತಾಲ್ಲೂಕಿನ 25 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈಗಾಗಲೇ 10 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆದಿದ್ದೇವೆ. ಆದರೆ ಇವು ವಿಫಲವಾಗಿವೆ. ಕೊರೆದಿರುವ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಬಿಸಿಲು ಹೆಚ್ಚಾದಂತೆ ಮತ್ತು ಮುಂಗಾರು ಮಳೆ ವಿಳಂಬವಾದಂತೆ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಹಳ್ಳಿಗಳ ಅಭಾವ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ರೈತ ಮುಖಂಡರಾದ ಶಂಕರ ಬಾದನಳ್ಳಿ, ಚಂದ್ರಾಮ ಬಳಗುಂಡೆ ಮಾಹಿತಿ ನೀಡಿ, ಮಳೆಯಿಲ್ಲದೇ ಬೇಸಿಗೆ ಬೆಳೆಗಳು ಬತ್ತಿ ಹೋಗುತ್ತಿವೆ. ಭೀಮಾನದಿಯಲ್ಲೂ ನೀರಿಲ್ಲ. ಸೊನ್ನ, ಭೀಮಾ ಬ್ಯಾರೇಜ್ ಕಾಲುವೆಗಳಿಗೂ ನೀರಿಲ್ಲ. ಹೀಗಾಗಿ ನಮ್ಮ ಜಾನುವಾರುಗಳಿಗೆ ಕುಡಿಯಲು ನೀರು ದೊರೆಯುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಜಾನುವಾರುಗಳನ್ನು ಮಾರಿ ಹೊಟ್ಟೆ ಪಾಡಿಗಾಗಿ ಗುಳೆ ಹೋಗಬೇಕಾಗುತ್ತದೆ. ಜನಪ್ರತಿನಿಧಿಗಳು ಭೀಮಾನದಿಗೆ ಮಹಾರಾಷ್ಟ್ರದ ಜಲಾಶಯದಿಂದ ನೀರು ಬಿಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಸ್ತುತ ವರ್ಷ ಅಕಾಲಿಕ ಮಳೆಗಳು ಬರಲೇ ಇಲ್ಲ. ಮೇಲಾಗಿ ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರು ಮಳೆ ಬರುತ್ತಿಲ್ಲ. ಹೀಗಾಗಿ ಬೇಸಿಗೆ ಬೆಳೆಗಳು ಒಣಗಿ ಹೋಗಿವೆ ಮತ್ತು ಮುಂಗಾರು ಬಿತ್ತನೆ ಕುಂಠಿತವಾಗಿದೆ.ಲತೀಫ್ ಪಟೇಲ್ ಭೋಗನಹಳ್ಳಿ, ಸಾವಯವ ಕೃಷಿ ತಜ್ಞ
ಬಂದರವಾಡ ಗ್ರಾಮದ ಪ್ರಾಂತ ರೈತ ಸಂಘದ ಮುಖಂಡರಾದ ಲಕ್ಷ್ಮಣ್ ಕಟ್ಟಿಮನಿ ಮಾಹಿತಿ ನೀಡಿ, ’ನಮ್ಮ ಬಂದರವಾಡ ವಲಯದಲ್ಲಿ ಸುಮಾರು ಹತ್ತು ಸಾವಿರ ಎಕರೆ ಕಬ್ಬುನಾಟಿ ಮಾಡಿದ್ದೇವೆ‘ ಭೀಮಾನದಿಯಲ್ಲಿ ನೀರು ಕಡಿಮೆಯಾಗುತ್ತಿದೆ. ಇನ್ನೊಂದು ವಾರ ಮಳೆ ಬರದಿದ್ದರೆ ಬೆಳೆಗಳು ಒಣಗಿ ಹೋಗುತ್ತವೆ. ಜಾನುವಾರುಗಳಿಗೆ ಕುಡಿಯಲು ನೀರು ದೊರೆಯುವುದಿಲ್ಲ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಸ್.ಗಡಗಿಮನಿ ಮಾತನಾಡಿ, ’ಹವಾಮಾನ ಇಲಾಖೆ ಪ್ರಕಾರ ಇನ್ನೂ ಮುಂಗಾರು ಮಳೆ ವಿಳಂಬವಾಗಲಿದೆ, ರೈತರು ಸಂಪೂರ್ಣವಾಗಿ ಭೂಮಿ ತೇವಾಂಶವಾಗುವವರೆಗೆ ಬಿತ್ತನೆ ಮಾಡಬಾರದು‘. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಾದ ಕರಜಗಿ, ಅಫಜಲಪುರ, ಅತನೂರಗಳಲ್ಲಿ ಸಹಾಯ ಧನದಲ್ಲಿ ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ, ಮೆಕ್ಕೆ ಜೋಳ ಬೀಜ ಲಭ್ಯವಿದ್ದು, ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.