ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಭಿವೃದ್ಧಿ, ಬಿಎಸ್‌ವೈ ಕೆಲಸ ನೋಡಿ ಮತ ಕೊಡಿ: ಉಮೇಶ ಜಾಧವ

ಬಿಜೆಪಿ ಅಭ್ಯರ್ಥಿ
Last Updated 25 ಏಪ್ರಿಲ್ 2019, 9:27 IST
ಅಕ್ಷರ ಗಾತ್ರ

ಕಲಬುರ್ಗಿ:ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು, ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಮಾಡಿರುವ ಕೆಲಸ ನೋಡಿ ನನಗೊಂದು ಅವಕಾಶ ಕೊಡಿ... -ಹೀಗೆಂದು ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಮತದಾರರ ಬಳಿ ಮನವಿ ಮಾಡುತ್ತಿದ್ದಾರೆ. ‘ಪ್ರಜಾವಾಣಿ’ ಸಂದರ್ಶನದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

* ನೀವು ನಿಮಗೆ ಮೋದಿಯೇ ಎಲ್ಲ ಅನ್ನುತ್ತೀರಲ್ಲ...

–ಮೋದಿ ತಮ್ಮ ಕಾರ್ಯ, ಜಾಣ್ಮೆ, ರಾಜನೀತಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದೇನೆ. ಮೇಲ್ವರ್ಗದವರಿಗೆ ಮೋದಿ ಶೇಕಡ 10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರಿಗೆ ಏಕೆ ಮೇಲ್ವರ್ಗದಲ್ಲಿರುವ ಬಡವರು ಕಾಣಿಸಲಿಲ್ಲ? ಮೋದಿ ಅಂದರೆ ಶಕ್ತಿ, ಬಲ. ಹೀಗಾಗಿ, ನಾನು ಮೋದಿ ಎನ್ನುತ್ತೇನೆ.

* ನಿಮ್ಮನ್ನೇ ಏಕೆ ಗೆಲ್ಲಿಸಬೇಕು?

–ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 48 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಸಮಾಧಾನಕರವಾಗಿಲ್ಲ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿಲ್ಲ. ಕಾರ್ಖಾನೆಗಳನ್ನು ತಂದಿಲ್ಲ. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಜಿಲ್ಲೆಯ ಕೆಲವು ಸಿಮೆಂಟ್ ಕಾರ್ಖಾನೆಗಳು ಬಂದ್ ಆಗಿವೆ. ಇದರಿಂದ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನೀರಾವರಿ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಬೆಣ್ಣೆತೊರಾಗೆ ₹150 ಕೋಟಿ ಮಂಜೂರಾದರೂ ಕಾಮಗಾರಿ ಅಪೂರ್ಣವಾಗಿದೆ. ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ಕೆಲಸವಾಗಿಲ್ಲ. ಖರ್ಗೆ ಅವರು ಒಂಬತ್ತು ಖಾತೆಗಳ ಸಚಿವರಾಗಿದ್ದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ. 371 (ಜೆ) ಜಾರಿಯಾದರೂ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಖರ್ಗೆ ಅವರು ಓಣಿ, ಓಣಿ ಸುತ್ತಿ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನನಗೆ ಮತ ನೀಡಬೇಕು.

* ನಿಮಗೆ ಅನುಕೂಲಕರ ಅಂಶಗಳೇನು?

–ಯುವ ಸಮೂಹ ಸೇರಿದಂತೆ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಜಾಧವ ಗೆದ್ದರೆ ಒಳ್ಳೆಯದಾಗುತ್ತದೆ ಎಂದು ಜಿಲ್ಲೆಯ ಜನರಿಗೆ ಮನವರಿಕೆ ಆಗಿದೆ. ಎಷ್ಟೋ ಜನರು ನನ್ನನ್ನು ಸ್ವಾಮೀಜಿಗಳ ಬಳಿ ಕರೆದೊಯ್ದು ದರ್ಶನ ಮಾಡಿಸುತ್ತಿದ್ದಾರೆ. ಉರಿ ಬಿಸಿಲನ್ನೂ ಲೆಕ್ಕಿಸದೇ ಜನರು, ಅಭಿಮಾನಿಗಳು, ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಗೆಲುವಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರ ವಾತಾವರಣವಿದೆ.

* ನೀವು ಮಾರಾಟವಾಗಿದ್ದೀರಿ ಎಂದು ಆರೋಪಿಸುತ್ತಾರಲ್ಲ...?

–ಪಕ್ಷ ಬಿಟ್ಟವರೆಲ್ಲ ಮಾರಾಟವಾಗಿದ್ದಾರಾ? ಸಿದ್ದರಾಮಯ್ಯ ಕೂಡ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಹಾಗಾದರೆ ಅವರೂ ಮಾರಾಟವಾಗಿದ್ದಾರಾ? ಕಾಂಗ್ರೆಸ್‌ನವರಿಗೆ ನನ್ನ ಬಗ್ಗೆ ಆರೋಪ ಮಾಡೋಕೆ ಏನೂ ಇಲ್ಲ. ಹೀಗಾಗಿ ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಖರ್ಗೆ ಅವರು ದೇವರಾಜ ಅರಸು ಕಾಂಗ್ರೆಸ್‌ಗೆ ಹೋಗಿ ಮತ್ತೆ ವಾಪಸ್‌ ಇಂದಿರಾ ಕಾಂಗ್ರೆಸ್‌ಗೆ ಮರಳಿದರು. ಡಾ.ಬಿ.ಆರ್.ಅಂಬೇಡ್ಕರ್ ಕೂಡ ಕಾಂಗ್ರೆಸ್ ಬಿಟ್ಟಿದ್ದರು. ವಾತಾವರಣ ಸರಿ ಇಲ್ಲದ್ದರಿಂದ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾಂತರ ಮಾಡಿದ್ದೇನೆ. ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದಾಗ ಪ್ರಿಯಾಂಕ್ ಖರ್ಗೆ ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಸರ್ಕಾರಿ ಖರ್ಚಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಅವರನ್ನು ಪಕ್ಷದಿಂದ ಅಮಾನತು ಮಾಡಿದರೆ ಕಾಂಗ್ರೆಸ್‌ನಲ್ಲೇ ಉಳಿಯುತ್ತೇನೆ ಎಂದು ವರಿಷ್ಠರಿಗೆ ಹೇಳಿದ್ದೆ. ಆದರೆ, ಅವರು ಮಾಡಲಿಲ್ಲ. ಹೀಗಾಗಿ, ಕಾಂಗ್ರೆಸ್ ತೊರೆದಿದ್ದೇನೆಯೇ ಹೊರತು ಮಾರಾಟವಾಗಿಲ್ಲ.

* ಕೆಲವು ಬಂಜಾರ ನಾಯಕರು ಕಾಂಗ್ರೆಸ್ ಸೇರಿದ್ದಾರಲ್ಲ...

–ಬಾಬುರಾವ ಚವ್ಹಾಣ, ಸುಭಾಸ ರಾಠೋಡಗೆ ಪಕ್ಷಾಂತರ ಹೊಸದೇನಲ್ಲ. ಇದು ಅವರಿಬ್ಬರ ಹಳೆ ಚಾಳಿ. ಚವಾಣ ಈ ಹಿಂದೆ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದರು. ಖುದ್ದು ಖರ್ಗೆಯೇ ಅಮಾನತು ಮಾಡಿಸಿದ್ದರು. ಚಿಂಚೋಳಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇವರಿಬ್ಬರೂ ಚಿಂಚೋಳಿ ಮತಕ್ಷೇತ್ರದ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಒಂದು ವೇಳೆ ಟಿಕೆಟ್ ಕೊಡದಿದ್ದರೆ ಕಾಂಗ್ರೆಸ್ ತ್ಯಜಿಸುತ್ತಾರೆ. ಅವರಿಬ್ಬರಿಗೂ ಅಧಿಕಾರದ ಹಪಾಹಪಿ ಇದೆ. ಅವರು ಬಿಜೆಪಿ ತೊರೆದ ಬಳಿಕ ಬಿಜೆಪಿ ಬೆಂಬಲಿಗರು ಹೆಚ್ಚು ಒಗ್ಗಟ್ಟಾಗಿದ್ದಾರೆ.

* ನೀವು ಬಂಜಾರ ಕುಲಗುರುವಿನ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ ಎಂದು ನಿಮ್ಮವರೇ ಆರೋಪಿಸುತ್ತಿದ್ದಾರೆ?

–ನನ್ನನ್ನು ಶಾಸಕ ಮಾಡಿದ್ದೇ ನನ್ನ ಕುಲಗುರು. ಕೇಂದ್ರ ಸರ್ಕಾರದ ನೌಕರಿ ಬಿಡಿಸಿ ರಾಜಕೀಯಕ್ಕೆ ತಂದರು. ಕುಲಗುರುವಿನ ಸಹೋದರರ ಮಗ ನನ್ನ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು. ಇಡೀ ಭಾರತ ದೇಶದಲ್ಲಿ ಬಂಜಾರ ಸಮುದಾಯದ ಸಂಸದರು ಯಾರೂ ಇಲ್ಲ. ಬಂಜಾರ ಸಮುದಾಯದ ಧ್ವಜ ಸಂಸತ್ತಿನ ಮೇಲೆ ಹಾರಬೇಕು ಎಂಬುದು ನಮ್ಮ ಗುರುವಿನ ಉದ್ದೇಶವಾಗಿದೆ.

* ನಾವು ಹುಟ್ಟಿಸಿದ ಕೂಸನ್ನು ಬಿಜೆಪಿಯವರು ಎತ್ತಿಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ...

–ದಿವಂಗತ ಎನ್. ಧರ್ಮಸಿಂಗ್ ಅವರು ಅವಕಾಶ ಕೊಟ್ಟರು. ಚಿಂಚೋಳಿ ಮತಕ್ಷೇತ್ರದ ಜನತೆ ಆಶೀರ್ವಾದ ಮಾಡಿದರು. ಹೀಗಾಗಿ ನಾನು ಚಿಂಚೋಳಿ ಕ್ಷೇತ್ರದ ಮತದಾರರು ಹುಟ್ಟಿಸಿದ ಕೂಸು. ಚಿಂಚೋಳಿ ಮತಕ್ಷೇತ್ರದ ಮತದಾರರ ಅಭಿಪ್ರಾಯ ತೆಗೆದುಕೊಂಡು ನಾನು ಬಿಜೆಪಿ ಸೇರಿದ್ದೇನೆ. ನಾನು ಕಾಂಗ್ರೆಸ್ ಕೂಸಾಗಿದ್ದರೆ ಅವರೇಕೆ ನನ್ನನ್ನು ಎತ್ತರಕ್ಕೆ ಬೆಳೆಸಲಿಲ್ಲ. ಅಭಿವೃದ್ಧಿಗೆ ಏಕೆ ಸಹಕರಿಸಲಿಲ್ಲ?

* ಇದು ಬಂಜಾರ– ದಲಿತರ ಮಧ್ಯದ ಚುನಾವಣೆ ಎಂಬಂತೆ ಬಿಂಬಿಸಲಾಗುತ್ತಿದೆ. ನೀವೇನು ಹೇಳುತ್ತೀರಿ?

–ಬಂಜಾರರು ಕೂಡ ದಲಿತರೇ.ಬಂಜಾರ ಬೇರೆ ಅಲ್ಲ, ದಲಿತರು ಬೇರೆ ಅಲ್ಲ.

* ನಿಮ್ಮ ಎದುರಾಳಿಗೆ ಕೇಳಲೇಬೇಕಾದ ಮೂರು ಪ್ರಶ್ನೆಗಳು ಯಾವವು?

-ಖರ್ಗೆ ಅವರೇ ಪುತ್ರ ವ್ಯಾಮೋಹದಿಂದ ತಮ್ಮ ಮಗನಿಗೆ ಸಚಿವ ಸ್ಥಾನ ಕೊಡಿಸಿದ್ದೀರಿ.ಡಾ.ಎ.ಬಿ.ಮಾಲಕರಡ್ಡಿ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಡಾ.ಅಜಯಸಿಂಗ್ ಸೇರಿದಂತೆ ಎಲ್ಲರಿಗೂ ಮೋಸ ಮಾಡಿದ್ದೀರಿ. ಇದಕ್ಕೆ ಉತ್ತರ ಕೊಡಿ...

* ಜಿಲ್ಲೆಯಲ್ಲಿರುವ ಸಿಮೆಂಟ್, ದಾಲ್‌ಮಿಲ್ ಕಾರ್ಖಾನೆಗಳು ಬಂದ್ ಆದರೂ ಕ್ರಮ ಕೈಗೊಂಡಿಲ್ಲ, ಏಕೆ?

-ನೀರಿನ ಸಮಸ್ಯೆ ಏಕೆ ಬಗೆಹರಿಸಿಲ್ಲ? ಕೆರೆ ತುಂಬುವ ಯೋಜನೆ ಕೈಗೊಂಡಿಲ್ಲ. ಗುರುಮಠಕಲ್ ಇಂದಿದೂ ಹಿಂದುಳಿದಿದ್ದು, ಈ ಬಗ್ಗೆ ಏಕೆ ನಿಗಾ ವಹಿಸಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT