ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಸಮಾವೇಶ; ಹರಿದುಬಂದ ಜನಸಾಗರ

Last Updated 31 ಅಕ್ಟೋಬರ್ 2022, 6:39 IST
ಅಕ್ಷರ ಗಾತ್ರ

ಕಲಬುರಗಿ: ಬಿಜೆಪಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ(ಒಬಿಸಿ) ವಿರಾಟ್ ಸಮಾವೇಶಕ್ಕೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರು.

ದೂರದ ಮೈಸೂರು, ಮಂಡ್ಯ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿಯ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಒಳಗೊಂಡು ಇತರೆ ಜಿಲ್ಲೆಗಳು ಹಾಗೂ ನೆರೆಯ ಬೀದರ್, ವಿಜಯಪುರ, ಯಾದಗಿರಿ, ರಾಯಚೂರು ಸೇರಿದಂತೆ ಕಲಬುರಗಿ ಗ್ರಾಮೀಣ ಭಾಗದಿಂದಲೂ ಜನರು ತಂಡೋಪ ತಂಡವಾಗಿ ಆಗಮಿಸಿದರು.

ಸಮಾವೇಶಕ್ಕೆ ಜನರನ್ನು ಕರೆ ತಂದ ವಾಹನಗಳನ್ನು ಸಂಚಾರದ ದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಪೊಲೀಸರು ದೂರದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಬಸ್, ಕ್ರೂಸರ್, ಕಾರು ಹಾಗೂ ಬೈಕ್‌ಗಳು ನಿಗದಿತ ಸ್ಥಳಗಳಲ್ಲಿ ನಿಂತವು. ಇದರಿಂದ ಜನರು ಸಮಾವೇಶದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಬಂದು, ವಾಪಸಾದರು.

ಪ್ರತ್ಯೇಕ ಮಾರ್ಗ: ವಿಜಯಪುರ, ಜೇವರ್ಗಿ, ಶಹಾಪುರ ಮಾರ್ಗ; ಯಾದಗಿರಿ, ಶಹಾಬಾದ್, ಚಿತ್ತಾಪುರ ಮಾರ್ಗ; ಬೀದರ್, ಹುಮನಾಬಾದ್, ಕಮಲಾಪುರ ಮಾರ್ಗ; ಅಫಜಲಪುರ, ಆಳಂದ ಮಾರ್ಗಗಳನ್ನು ವಿಭಾಗಿಸಿ, ಅವರಿಗೆ ನಿಗದಿತ ರಸ್ತೆಗಳ ಮೂಲಕ ಸಮಾವೇಶ ತಲುಪಿಸುವ ವ್ಯವಸ್ಥೆಯನ್ನು ಪೊಲೀಸರು ಅಚ್ಚುಕಟ್ಟಾಗಿ ಮಾಡಿದರು. ಇದರಿಂದ ಸಮಾವೇಶದ ಸುತ್ತಲಿನ ರಸ್ತೆಗಳಲ್ಲಿ ಜನದಟ್ಟಣೆ ಹೊರತುಪಡಿಸಿ, ವಾಹನ ದಟ್ಟಣೆ ಕಂಡುಬರಲಿಲ್ಲ.

ಸ್ಥಳೀಯ ನಾಯಕರ ಭಾಷಣದ ನಡುವೆ ಬೆಳಿಗ್ಗೆ 11ಕ್ಕೆ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ನೇರ ಪ್ರಸಾರ ವೀಕ್ಷಣೆ ಮಾಡಿಸಲಾಯಿತು. ಸಮಾವೇಶದ ಮೊತ್ತೊಂದು ವೇದಿಕೆಯಲ್ಲಿ ಐಶ್ವರ್ಯ ತಂಡವು ಸಾರ್ವಕರ್ ಜೀವನ ಚರಿತ್ರೆಯ ನೃತ್ಯ ರೂಪಕ, ಬಸವಕಲಾ ತಂಡ ಮತ್ತು ಮುಕ್ತರಾಜ ಗವಾಯಿಗಳ ತಂಡ ಡೊಳ್ಳು ಮತ್ತು ಗಾಯನ ಪ್ರದರ್ಶನ ನಡೆಸಿಕೊಟ್ಟಿತು.

ಅಚ್ಚುಕಟ್ಟಾದ ಊಟದ ವ್ಯವಸ್ಥೆ:ಸಮಾ ವೇಶಕ್ಕೆ ಬಂದಿದ್ದ ಜನರಿಗೆ ಊಟ, ಉಪಾಹಾರಕ್ಕಾಗಿ ಮಾತೆ ಮಾಣಿಕೇಶ್ವರಿ ಸಭಾಂಗಣ ನಿರ್ಮಾಣ ಮಾಡಲಾಗಿತ್ತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ನೇತೃತ್ವದಲ್ಲಿ ಸುಮಾರು 400 ಕಾರ್ಯಕರ್ತರು ಊಟದ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡರು. ಬೆಳಿಗ್ಗೆ 10.30ರ ವೇಳೆಗೆ 25 ಸಾವಿರ ಜನರಿಗೆ ಬಿಸಿ ಬೇಳೆಬಾತ್ ಉಪಾಹಾರ ನೀಡಲಾಯಿತು.

ಕಪ್ಪು ಬಟ್ಟೆ ಧರಿಸಿ ಬಂದವರಿಗೆ ತಡೆ

ಕಪ್ಪು ಬಟ್ಟೆ ಧರಿಸಿ ಬಂದವರಿಗೆ ವೇದಿಕೆಯ ಸಭಾಂಗಣದೊಳಗೆ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದರು.

ಕಪ್ಪು ಅಂಗಿ ಧರಿಸಿ ಬಂದಿದ್ದ ನೂರಾರು ಮಂದಿಯನ್ನು ಪ್ರವೇಶ ದ್ವಾರದಲ್ಲೇ ತಡೆದರು. ಕೆಲವರು ವಾಹನಗಳತ್ತ ತೆರಳಿ ಬೇರೆ ಅಂಗಿ ಧರಿಸಿ ಮತ್ತೆ ಸಭಾಂಗಣ ಪ್ರವೇಶಿಸಿದರು. ಕಪ್ಪು ಬಣ್ಣದ ಟೋಪಿ, ಕರ್ಚೀಫ್‌ ಇತರೆ ಬಟ್ಟೆಗಳನ್ನು ಹೊರಗಡೆ ಎಸೆದೇ ವೇದಿಕೆಯ ಸಭಾಂಗಣ ಪ್ರವೇಶಿಸಿದರು.

ಗಮನಸೆಳೆದ ಮಹನೀಯರ ಭಾವಚಿತ್ರಗಳು

ಒಬಿಸಿ ಸಮಾವೇಶದ ವೇದಿಕೆಗೆ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಸಂಭಾಗಣಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಸಭಾಭವನ ಎಂದು ಹೆಸರಿಡಲಾಗಿತ್ತು. ಸಭಾಂಗಣದ ಬಲ ಭಾಗದಲ್ಲಿ ಗೌಳಿ, ಅಂಬಿಗ, ಮಾಳಿ, ಭಾವಸಾರ ಕ್ಷತ್ರಿಯ, ಸವಿತಾ, ಉಪ್ಪಾರ, ವಿಶ್ವಕರ್ಮ, ನೇಕಾರ, ಕುಂಬಾರ, ಕುರುಬ, ಬೆಸ್ತ, ಗಾಣಿಗ, ಶಿವಶಿಂಪಿ, ಹೂಗಾರ, ಅಲೆಮಾರಿ, ಗೋಂಧಳಿ, ಈಡಿಗ, ಮಡಿವಾಳ ಸೇರಿದಂತೆ ಇತರೆ ಸಮುದಾಯಗಳ ಕಾಯಕ ಹಾಗೂ ಮಹನೀಯರ ಭಾವಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಿದ್ದು ಗಮನಸೆಳೆಯಿತು.

ಸಮಾವೇಶದಲ್ಲಿ ಕಳ್ಳರ ಕೈಚಳಕ

ಜಾತ್ರೆ, ಸಂತೆ, ಸಭೆ ಸಮಾವೇಶಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಒಬಿಸಿ ಸಮಾವೇಶದಲ್ಲೂ ಕಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿದರು.

ಸಮಾವೇಶದಲ್ಲಿ ಮೊಬೈಲ್, ಹಣ, ಪರ್ಸ್ ಕಳುವಾದ ಪ್ರಕರಣ ಕೇಳಿಬಂದವು. ದೂರದ ಊರಿನಿಂದ ಬಂದಿದ್ದ ಸಾವಿರಾರು ಜನರ ಮಧ್ಯೆ ಬೇಗನೆ ಊಟ ತಿಂದು ವೇದಿಕೆಯ ಸಭಾಂಗಣ ಪ್ರವೇಶಿಸುವ ಧಾವಂತದಲ್ಲಿ ಇದ್ದರು. ತಮ್ಮಲ್ಲಿನ ಮೊಬೈಲ್, ಪರ್ಸ್, ಹಣದತ್ತ ಗಮನ ಹರಿಸಲಿಲ್ಲ. ಇದರ ಲಾಭ ಪಡೆದ ಕಳ್ಳರು ಅವುಗಳನ್ನು ಕದ್ದು, ಜನರ ಮಧ್ಯಯೇ ಓಡಾಡಿದರು.

‘ದೂರದ ಮಂಡ್ಯದಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಬಂದಿದ್ದೆ. ಊಟಕ್ಕೆ ಹೋಗಿದ್ದಾರೆ ಮೊಬೈಲ್ ಕದ್ದು ಹೊಯ್ದರು. ಈಗ ಯಾರಿಗೆ ಕೇಳಬೇಕು?’ ಎಂದು ಮೊಬೈಲ್ ಕಳೆದುಕೊಂಡು ಸುರೇಶ ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬರು ಪರ್ಸ್ ಕಳೆದಿದೆ ಎಂದು ಗೊಣಗುತ್ತ ತಮ್ಮ ಊರಿನತ್ತ ಹೆಜ್ಜೆಹಾಕಿದರು.

ಅಚ್ಚುಕಟ್ಟಾದ ಉಪಹಾರ, ಊಟದ ವ್ಯವಸ್ಥೆ

ಒಬಿಸಿ ಸಮಾವೇಶಕ್ಕೆ ಬಂದಿದ್ದ ಜನರ ಹಸಿವು ತಣಿಸಲು ಸಭಾಂಗಣ ಮುಂಭಾಗದ ಮಾತೆ ಮಾಣಿಕೇಶ್ವರಿ ಸಭಾಂಗಣ ನಿರ್ಮಾಣ ಮಾಡಲಾಗಿತ್ತು. ಸಮಾವೇಶಕ್ಕೆ ಬಂದಿವರೆಲ್ಲರಿಗೂ ಉಪಾಹಾರ ಮತ್ತು ಊಟ ಬಡಿಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ನೇತೃತ್ವದಲ್ಲಿ ಸುಮಾರು 400 ಕಾರ್ಯಕರ್ತರು ಊಟದ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡರು.

ಊಟದ ಸ್ಥಳದಲ್ಲಿ ಎಲೆಗಳ ತಟ್ಟೆ ಮತ್ತು ನೀರಿನ ಬಾಟಲಿ ಸಂಗ್ರಹಿಸಲು ಮಹಾನಗರ ಪಾಲಿಕೆ ಕಸದ ತೊಟ್ಟಿಗಳ ಟ್ರ್ಯಾಕ್ಟರ್ ಟ್ರಾಲಿಗಳನ್ನು ನಿಲ್ಲಿಸಲಾಗಿತ್ತು. ಅಲ್ಲಲ್ಲಿ ಬಿದ್ದ ತಟ್ಟೆ, ಬಾಟಲಿಗಳನ್ನು ಪಾಲಿಕೆ ಸಿಬ್ಬಂದಿ ತೆಗೆದು ಸ್ವಚ್ಛತೆ ಕಾಪಾಡಿದರು. ಕಾರ್ಯಕರ್ತರು ಸಹ ಸ್ವಚ್ಛತೆ ಕಾಪಾಡುವಂತೆ ಧ್ವನಿವರ್ಧಕದಲ್ಲಿ ಮನವಿ ಮಾಡಿದರು.

ಜಿಲ್ಲೆಯ ದೇವರುಗಳ ನಾಮಸ್ಮರಣೆ

ಸಮಾವೇಶದ ಭಾಷಣಕ್ಕೂ ಮುನ್ನ ಸಿ.ಟಿ. ರವಿ, ನೆ.ಲ ನರೇಂದ್ರಬಾಬು, ಕೆ.ಎಸ್ ಈಶ್ವರಪ್ಪ ಸೇರಿದಂತೆ ಇತರ ನಾಯಕರು ಜಿಲ್ಲೆಯ ಘತ್ತರಗಿ ಭಾಗ್ಯವಂತಿ ದೇವಿ, ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಿ, ಸನ್ನತಿಯ ಚಂದ್ರಲಾಂಬೆ ದೇವಿ, ಗಾಣಗಾಪುರದ ದತ್ತಾತ್ರೇಯ, ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಸೇರಿದಂತೆ ಇತರೆ ದೇವರುಗಳ ನಾಮಸ್ಮರಣೆ ಮಾಡಿ ಮಾತು ಆರಂಭಿಸಿದರು. ಈ ಮೂಲಕ ಆಯಾ ಸಮುದಾಯದವರನ್ನು ಮೆಚ್ಚಿಸುವ ಪ್ರಯತ್ನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT