ಬುಧವಾರ, ಅಕ್ಟೋಬರ್ 20, 2021
29 °C
ಉಚ್ಚಾಟಿತ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ

‘ಅನ್ಯಾಯ ಪ್ರಶ್ನಿಸಿದ್ದಕ್ಕೆ ಉಚ್ಚಾಟನೆ ಶಿಕ್ಷೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬಿಜೆಪಿ ಸೇರಲೆಂದು ಇದ್ದ ವಿಟಿಯು ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಬಂದಿದ್ದೇನೆ. ಈ ಭಾಗದ ಅನ್ಯಾಯವನ್ನು ಮುಂದೆಯೂ ಪ್ರಶ್ನಿಸುತ್ತೇನೆ. ನನ್ನ ಉಚ್ಚಾಟನೆ ಮಾಡುವ ಮುನ್ನ ಅಗತ್ಯ ನಿಯಮಾವಳಿಗಳನ್ನು ಪಾಲಿಸಿಲ್ಲ. ಹೀಗಾಗಿ ನಾನು ಈಗಲೂ ಬಿಜೆಪಿ  ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನಾಗಿಯೇ ಮುಂದುವರಿಯಲಿದ್ದೇನೆ’ ಎಂದು ಡಾ.ರಾಘವೇಂದ್ರ ಚಿಂಚನಸೂರ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ನಿಲುವುಗಳನ್ನು ಪ್ರಶ್ನಿಸಿದ್ದಕ್ಕಾಗಿ ನನ್ನನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಆದರೆ, ಇದುವರೆಗೆ ನನಗೆ ಈ ಸಂಬಂಧ ಯಾವುದೇ ನೋಟಿಸ್ ಬಂದಿಲ್ಲ. ಉಚ್ಚಾಟನೆ ಮಾಡಿದ ಪತ್ರವೂ ಬಂದಿಲ್ಲ. ಈಗಲೂ ನನ್ನ ಮಾತುಗಳಿಗೆ ಬದ್ಧವಾಗಿದ್ದೇನೆ. ಪಕ್ಷದ ಒಳಗಡೆ ನಡೆಯುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತೇನೆ. ಬಿಜೆಪಿಗೆ ತನ್ನದೇ ಆದ ಸಂವಿಧಾನವಿದೆ. ಈ ಸಂವಿಧಾನದ ಪ್ರಕಾರ ನನಗೆ ನೋಟಿಸ್ ಕೊಡಬೇಕು. ನನ್ನ ಉತ್ತರ ನೋಡಿಕೊಂಡು ಜಿಲ್ಲಾ ಘಟಕದ ಅಧ್ಯಕ್ಷರು ನನ್ನನ್ನು ಹುದ್ದೆಯಿಂದ ಉಚ್ಚಾಟಿಸುವ ಆದೇಶವನ್ನು ಲಿಖಿತ ರೂಪದಲ್ಲಿ ಹೊರಡಿಸಬಹುದು. ಈ ನಿಯಮಗಳು ಪಾಲನೆಯಾಗಿಲ್ಲ’ ಎಂದರು.

‘ಪಕ್ಷಕ್ಕೆ ನಿಸ್ವಾರ್ಥದಿಂದ ದುಡಿಯುವವರು ಬೇಕಾಗಿಲ್ಲ. ನಾನು ಹೋದರೆ ಇನ್ನೊಬ್ಬ ಬರುತ್ತಾನೆ ಎಂಬ ಧೋರಣೆಯನ್ನು ಹೊಂದಿದ್ದಾರೆ. ಪಕ್ಷಕ್ಕೆ ಸೇರಿ 11 ವರ್ಷಗಳಾಗಿದ್ದು, ಪಕ್ಷದ ಕೆಲಸಗಳಿಗಾಗಿ ನಾನು ಪಕ್ಷದಿಂದ ದುಡ್ಡು ಪಡೆದಿಲ್ಲ. ಕೈಯಿಂದ ಖರ್ಚು ಮಾಡಿಕೊಂಡು ಪಕ್ಷ ಸಂಘಟನೆ ಮಾಡಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರ ಜಾತ್ಯತೀತ ಪರಿಕಲ್ಪನೆಯನ್ನು ನಂಬಿಕೊಂಡಿದ್ದೆ. ಆದರೆ, ಪಕ್ಷ ಆ ರೀತಿ ಉಳಿದಿಲ್ಲ’ ಎಂದು ಹೇಳಿದರು.

‘ಪಕ್ಷದಲ್ಲಿ ಮುಂದುವರಿಯುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಹಾಗಾಗಿ, ಪಕ್ಷದ ನಿಲುವುಗಳನ್ನು ಪ್ರಶ್ನಿಸುತ್ತೇನೆ. ಎಲ್ಲವೂ ಸರಿ ಕಾಣದಿದ್ದರೆ ಬಿಜೆಪಿಗೆ ಮತ ಹಾಕಬೇಡಿ’ ಎಂದೂ ಬಹಿರಂಗವಾಗಿ ಹೇಳುತ್ತೇನೆ’ ಎಂದರು.

ಪಕ್ಷದ ಯುವ ಮೋರ್ಚಾ ಮುಖಂಡ ಶರಣಬಸಪ್ಪ ಅಂಬೆಸಿಂಗೆ ಮಾತನಾಡಿ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಡಾ. ಉಮೇಶ ಜಾಧವ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಜಿಲ್ಲಾಡಳಿತ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪಕ್ಷಕ್ಕಾಗಿ ಕೆಲಸ ಮಾಡುವಾಗ ಪ್ರಕರಣ ದಾಖಲಾಗಿದ್ದರೂ ಇಲ್ಲಿಯವರೆಗೆ ಪಕ್ಷದ ಮುಖಂಡರು ಪ್ರಕರಣ ನಡೆಸಲು ಮುಂದೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು