ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಕಿಡಿ ಹೊತ್ತಿಸಿದ ‘ಮಹಾಡ್‌ ಸತ್ಯಾಗ್ರಹ’

ದಲಿತ, ದಮನಿತರ ಮೊದಲ ಬಂಡಾಯದ ಕಂಪನ ಒಂದು ಚಿಂತನೆ’ಯಲ್ಲಿ ಶಿವಸುಂದರ್‌ ವಿಶ್ಲೇಷಣೆ
Last Updated 21 ಮಾರ್ಚ್ 2022, 5:12 IST
ಅಕ್ಷರ ಗಾತ್ರ

ಕಲಬುರಗಿ: ‘ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸುವಲ್ಲಿ ಮಹಾಡ್‌ ಚಳವಳಿ ವಿಫಲವಾದರೂ ದೇಶದ ದಮನಿತರಲ್ಲಿ ಮೊದಲ ಬಾರಿಗೆ ಅರಿವಿನ ಕಿಡಿ ಹೊತ್ತಿಸುವಲ್ಲಿ ಯಶಸ್ವಿಯಾಯಿತು. ಆದರೆ, ಅರಿವಿನ ಭ್ರಷ್ಟತೆಯಿಂದ ನಾವು ಇಂದು ಹೋರಾಟದ ಹಾದಿಯಿಂದ ವಿಮುಖರಾಗಿದ್ದೇವೆ’ ಎಂದು ಚಿಂತಕ ಶಿವಸುಂದರ್‌ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜಿಲ್ಲಾ ಘಟಕವು ಭಾನುವಾರ ಆಯೋಜಿಸಿದ್ದ ‘ಮಹಾಡ್‌ ಸತ್ಯಾಗ್ರಹ’ ದಲಿತ, ದಮನಿತರ ಮೊದಲ ಬಂಡಾಯದ ಕಂಪನಗಳ ಒಂದು ಚಿಂತನೆ’ ಕುರಿತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘1923ರಲ್ಲಿ ಕೆರೆ ನೀರನ್ನು ಕುಡಿಯುವುದಕ್ಕಾಗಿ ಬ್ರಿಟಿಷ್‌ ಸರ್ಕಾರವು ಕಾಯ್ದೆ ರೂಪಿಸಿ, ದಲಿತರಿಗೆ ಹಕ್ಕು ನೀಡುತ್ತದೆ. ಈ ದೇಶದಲ್ಲಿ ಕೆರೆಯ ನೀರನ್ನು ಕುಡಿಯುವುದಕ್ಕೂ ಒಂದು ಕಾಯ್ದೆ ರೂಪಿಸಬೇಕಾದಂಥ ಅನಿವಾರ್ಯತೆ ಬಂತಲ್ಲ; ಅದಕ್ಕಿಂತ ಅಮಾನವೀಯ ಇನ್ನೇನು ಇರಲು ಸಾಧ್ಯ?’ ಎಂದರು.

‘ಮಹಾರಾಷ್ಟ್ರದ ಮಹಾಡ್‌ ಎಂಬಲ್ಲಿ ಕೆರೆಯ ನೀರನ್ನು ದಲಿತರು ಕುಡಿಯುವಂತಿರಲಿಲ್ಲ. ಆ ನೀರು ಕುಡಿಯುವ ಹಕ್ಕು ಪ್ರತಿಪಾದಿಸಲು ಮೋರೆ ಎಂಬ ಯುವಕನ ನೇತೃತ್ವದಲ್ಲಿ ಸಮಾವೇಶ ನಡೆಯಿತು. 1927ರ ಮಾರ್ಚ್‌ 20ರಂದು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಕಾಂತಿಕಾರಿ ಹೆಜ್ಜೆ ಇಟ್ಟು, ಸಾಮೂಹಿಕವಾಗಿ ಜನರು ಮಹಾಡ್‌ನ ‘ಚೌದಾರ್‌ ಕೆರೆ’ಯ ನೀರು ಕುಡಿದರು. ಈ ವಿಷಯವಾಗಿ ಸವರ್ಣಿಯರು ಗೂಂಡಾಗಳನ್ನು ಬಿಟ್ಟು ಚಳವಳಿಕಾರರ ಮೇಲೆ ಹಲ್ಲೆ ಮಾಡಿಸಿದರು’ ಎಂದು ಅವರು ವಿವರಿಸಿದರು.

‘1927ರ ಡಿಸೆಂಬರ್‌ 25ರಂದು ಅಂಬೇಡ್ಕರ್‌ ಅವರು ಮತ್ತದೇ ಮಹಾಡ್‌ನಲ್ಲಿ 16 ಸಾವಿರ ಜನರನ್ನು ಸೇರಿಸಿ ಚಳವಳಿಗೆ ಮುಂದಾಗುತ್ತಾರೆ. ಇದನ್ನು ತಾಳದೇ ಸವರ್ಣಿಯರು ಮಹಾಡ್‌ನಲ್ಲಿರುವುದು ‘ಚೌದಾರ್‌’ ಕೆರೆಯಲ್ಲ ‘ಚೌಧರಿ’ ಕೆರೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಅದು ಖಾಸಗಿ ಕೆರೆ ಎಂದು ಬಿಂಬಿಸಿ, ನೀರು ಕುಡಿಯದಂತೆ ಮಾಡುತ್ತಾರೆ. ಮುಂದೆ 1936ರಲ್ಲಿ ಹೈಕೋರ್ಟ್‌ ಅದನ್ನು ಸಾರ್ವಜನಿಕ ಕೆರೆ ಎಂದು ತೀರ್ಪು ನೀಡುತ್ತದೆ. ಆದರೆ, ಸವರ್ಣಿಯರ ವ್ಯವಸ್ಥಿತ ಹುನ್ನಾರ ಹಾಗೂ ಬ್ರಿಟಿಷ್‌ ಸರ್ಕಾರದ ಕುಮ್ಮಕ್ಕಿನ ಕಾರಣ ಆ ಚಳವಳಿಗೆ ಸೋಲಾಗುತ್ತದೆ.ಇಂಥ ಕ್ರಾಂತಿ ಕಿಡಿ ಹೊತ್ತಿಸಿದ ಚಳವಳಿಯನ್ನು ದಲಿತ ಯುವಜನರ ಅಧ್ಯಯನ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ಅಂಬೇಡ್ಕರ್‌ ಅವರು ಕೆರೆ ನೀರು ಕುಡಿಯುವ, ದೇವಸ್ಥಾನಗಳ ಪ್ರವೇಶ ಮಾಡುವಂಥ ಚಳವಳಿ ನಡೆಸಿದ್ದು ದೇವರನ್ನು ಕಾಣಬೇಕು ಎಂದಲ್ಲ.ಸವರ್ಣಿಯರಲ್ಲಿ ಸ್ವಲ್ಪವಾದರೂ ಮಾನವೀಯತೆಯನ್ನು ಜಾಗ್ರತಗೊಳಿಸಬೇಕು ಎಂಬ ಉದ್ದೇಶದಿಂದ. ವಿಚಿತ್ರವೆಂದರೆ ಈ ದೇಶದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಷ್ಯತೆಗಳು ಸಹಜ ಎಂಬಷ್ಟರ ಮಟ್ಟಿಗೆ ಎಲ್ಲರೂ ಹಗುರವಾಗಿ ಪರಿಗಣಿಸಿದ್ದಾರೆ. ತಾರತಮ್ಯ ಅಪರಾಧವೇ ಅಲ್ಲ ಎನ್ನುವ ಮನಸ್ಥಿತಿಗಳ ಮಧ್ಯೆ ಸತ್ಯಾಗ್ರಹ ಹೇಗೆ ಗೆಲುವು ಸಾಧಿಸಲು ಸಾಧ್ಯ? ಬ್ರಾಹ್ಮಣಶಾಹಿಗಳು ನಮ್ಮನ್ನು ಕೂಡ ಅಷ್ಟು ಆಳವಾಗಿ ಒಪ್ಪಿಸಿಬಿಟ್ಟಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದಾಗ ಅಂಬೇಡ್ಕರ್‌ ಒಂದು ಎಚ್ಚರಿಕೆ ಮಾತು ಹೇಳಿದ್ದರು; ನಾವು ರಾಜಕೀಯ ಹಕ್ಕು ಪಡೆದ ತಕ್ಷಣ ವಿಮೋಚನೆ ಸಾಧ್ಯವಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಬಂದಾಗ ಮಾತ್ರ ಅದು ಸಾಧ್ಯ. ಹಾಗಾಗಿ, ಸ್ವತಂತ್ರ ಭಾರತವು ಎಷ್ಟು ಬೇಗ ಈ ಎರಡನ್ನೂ ಸಾಧಿಸುತ್ತದೆಯೋ ಅಷ್ಟು ಬೇಗ ಸ್ವಾವಲಂಬನೆ ಸಾಧ್ಯ. ಇಲ್ಲದಿದ್ದರೆ ಇಲ್ಲ’ ಎಂದಿದ್ದರು. ಅವರ ಮಾತುಗಳು ಇಂದಿಗೂ ಸತ್ಯವಾಗಿವೆ. ಬ್ರಾಹ್ಮಣಶಾಹಿ ಹಾಗೂ ಬಂಡವಾಳ ಶಾಹಿ ಹಿಡಿತದಲ್ಲೇ ದೇಶ ಇನ್ನೂ ಮುಂದುವರಿದಿದೆ. ಸಮಾನತೆ, ವಿಮೋಚನೆಯ ಚಳವಳಿ ಕೇವಲ ಸಾಂಕೇತಿಕವಾಗಿ ಉಳಿದಿವೆ’ ಎಂದು ಖೇದ ವ್ಯಕ್ತಪಡಿಸಿದರು.

ಸಿಯುಕೆ ಪ್ರಾಧ್ಯಾಪಕ ಕಿರಣ್‌ ಗಾಜನೂರು, ಚಿಂತಕ ಪ್ರೊ.ಆರ್‌.ಕೆ. ಹುಡಗಿ, ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಇಂದುಮತಿ ಪಾಟೀಲ, ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿದರು. ಸಾಹಿತಿ ದತ್ತಾತ್ರೇಯ ಇಕ್ಕಳಕಿ ಅವರನ್ನು ಸನ್ಮಾನಿಸಲಾಯಿತು.

ಸಮಿತಿ ಸಂಚಾಲಕ ಅರ್ಜುನ ಭದ್ರೆ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ ಸ್ವಾಗತಿಸಿದರು. ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ ನಿರೂಪಿಸಿದರು. ಜೇವರ್ಗಿ ತಾಲ್ಲೂಕು ಘಟಕದ ಸಂಚಾಲಕ ಮಹೇಶ ಕೋಕಿಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT