ಕಲಬುರ್ಗಿ ವಿವಿಯಲ್ಲಿ ಯುವಕನ ಕೊಲೆ: ಹಣಕ್ಕಾಗಿ ಕುರಿಗಾಹಿಗಳು ಮಾಡಿದ ಕೃತ್ಯ!

7

ಕಲಬುರ್ಗಿ ವಿವಿಯಲ್ಲಿ ಯುವಕನ ಕೊಲೆ: ಹಣಕ್ಕಾಗಿ ಕುರಿಗಾಹಿಗಳು ಮಾಡಿದ ಕೃತ್ಯ!

Published:
Updated:

ಕಲಬುರ್ಗಿ: ಆಳಂದ ತಾಲ್ಲೂಕು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ನಡೆದಿದ್ದ ಯುವಕನ ಕೊಲೆಯು ಹಣಕ್ಕಾಗಿ ಕುರಿಗಾಹಿಗಳು ಮಾಡಿದ ಕೃತ್ಯ ಎಂಬುದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

‘ಪ್ರಕರಣ ಸಂಬಂಧ ಕಡಗಂಚಿ ಗ್ರಾಮದ ಗಣೇಶ ಬಸವರಾಜ ಅಲ್ದಿ (18), ಶಾಂತಪ್ಪ ಧರ್ಮಣ್ಣ ದಂಡಗೂಲೆ ಎಂಬವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೀದರ್‌ ಜಿಲ್ಲೆ ಬ್ಯಾಲಹಳ್ಳಿ (ಡಬ್ಲ್ಯೂ) ಗ್ರಾಮದ ಪ್ರಸಾದ್‌ (22) ಎಂಬ ಯುವಕನ ಕೊಲೆ ಸೆಪ್ಟೆಂಬರ್‌ 22ರಂದು ಸಂಜೆ ಸಿಯುಕೆ ಆವರಣದಲ್ಲಿ ನಡೆದಿತ್ತು.

‘ಕೇಂದ್ರೀಯ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನೇಹಿತೆ ಹಾಗೂ ಪ್ರಸಾದ್‌ ಇಬ್ಬರೂ ಭಾಲ್ಕಿ ತಾಲ್ಲೂಕಿನವರು ಹಾಗೂ ಸ್ನೇಹಿತರು. ಹೈದರಾಬಾದ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್‌, ಅಂದು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಆಕೆಯ ಭೇಟಿಗೆ ಬಂದಿದ್ದ. ಅಲ್ಲಿಯ ಹೊಸ ಕಟ್ಟಡದ ಮೇಲೆ ಸ್ನೇಹಿತೆ ಹಾಗೂ ಆಕೆಯ ಗೆಳತಿಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಆ ನಂತರ ಸ್ನೇಹಿತೆ ಹಾಗೂ ಪ್ರಸಾದ್‌ ಇಬ್ಬರೇ ಮಾತನಾಡುತ್ತ ಅಲ್ಲಿ ಕುಳಿತಿದ್ದರು. ಆಗ (ಸಂಜೆ 6ರಿಂದ 7 ಗಂಟೆಯ ಅವಧಿಯಲ್ಲಿ)ಕೊಲೆ ನಡೆದಿತ್ತು’ ಎಂದು ಎಸ್‌ಪಿ ಹೇಳಿದರು.

‘ನಮ್ಮ ಅಣ್ಣನ ಸ್ನೇಹಿತೆಯೇ ತಮ್ಮವರನ್ನು ಕರೆಯಿಸಿ ಈ ಕೊಲೆ ಮಾಡಿಸಿದ್ದಾಳೆ’ ಎಂದು ಕೊಲೆಯಾದ ಪ್ರಸಾದ್‌ನ ತಮ್ಮ ದೂರು ನೀಡಿದ್ದ. ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿತ್ತು’ ಎಂದರು.

ಪ್ರೇಮಿಗಳನ್ನು ಬೆದರಿಸುವುದೇ ಕಾಯಕ
‘ವಿಶ್ವವಿದ್ಯಾಲಯದ ಆವರಣಗೋಡೆ ನಾಲ್ಕಾರು ಕಡೆ ಓಪನ್‌ ಇದೆ. ಕುರಿ–ದನ ಕಾಯುವವರು ಹಾಗೂ ಕೆಲ ಯುವಕರು ಸಂಜೆ ಹೊತ್ತಿನಲ್ಲಿ ಬೈಕ್‌ನಲ್ಲಿ ವಿವಿ ಆವರಣದೊಳಗೆ ಸುತ್ತುವುದು ಸಾಮಾನ್ಯವಾಗಿದೆ’ ಎಂದು ಎಸ್‌ಪಿ ಹೇಳಿದರು.

‘ಹುಡುಗ–ಹುಡುಗಿ ಮಾತನಾಡುತ್ತ ಕುಳಿತಿದ್ದರೆ ಅವರ ಬಳಿ ಹೋಗಿ ಬೆದರಿಸಿ ಹಣ, ಚಿನ್ನಾಭರಣ ಕಿತ್ತುಕೊಳ್ಳುವ ಕೃತ್ಯದಲ್ಲಿ ಈ ಆರೋಪಿಗಳು ತೊಡಗಿದ್ದರು. ಹಿಂದೆಯೂ 2–3 ಬಾರಿ ಇಂತಹ ಕೃತ್ಯವೆಸಗಿದ್ದರು. ಮರ್ಯಾದೆಗೆ ಹೆದರಿ ಯಾರೂ ದೂರು ನೀಡಿರಲಿಲ್ಲ. ಈ ಬಾರಿಯೂ ಹಣ ಕೀಳಲು ಅವರು ಬಂದಿದ್ದರು. ಆದರೆ, ಪ್ರಸಾದ್‌ ಪ್ರತಿರೋಧ ತೋರಿದ್ದರಿಂದ ಆತನನ್ನು ಕೊಲೆ ಮಾಡಿದರು. ಯುವತಿ ಅರಚಿದ್ದರಿಂದ ಹೆದರಿ ಆಕೆಯನ್ನು ಬಿಟ್ಟು ಓಡಿಹೋದರು. ಇಲ್ಲದಿದ್ದರೆ ಆಕೆಯನ್ನೂ ಅವರು ಕೊಲೆಮಾಡುವ ಸಾಧ್ಯತೆ ಇತ್ತು’ ಎಂದರು.

‘ಕೃತ್ಯ ನಡೆದದ್ದು ವಿವಿ ಆವರಣದಲ್ಲಿರುವ ಎರಡು ಮಹಡಿಯ ಹೊಸ ಕಟ್ಟಡದಲ್ಲಿ. ಆ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಅಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಆದರೆ, ಕೊಠಡಿಗಳ ಬಾಗಿಲು ತೆರೆದಿರುತ್ತವೆ ಎಂದು ಅಲ್ಲಿಯ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ’ ಎಂದು ಅವರು ಹೇಳಿದರು.

ಮೊಬೈಲ್‌ ನೀಡಿದ ಸುಳಿವು
ಆರೋಪಿಗಳು ವಿದ್ಯಾರ್ಥಿನಿಯ ಮೊಬೈಲ್‌ ಕಿತ್ತುಕೊಂಡಿದ್ದರು. ಪ್ರಸಾದ್‌ನ ಬ್ಯಾಗ್‌ ಹಾಗೂ ಆತನ ಬಳಿ ಇದ್ದ ಹಣವನ್ನೂ ದೋಚಿದ್ದರು.

‘ಕಡಗಂಚಿ ಗ್ರಾಮದ ಲಕ್ಷ್ಮಣ ಎಂಬ ಯುವಕ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ಊರಿಗೆ ಬಂದಾಗ ಆರೋಪಿಗಳು ಆತನಿಗೆ ದಾರಿಯಲ್ಲಿ ಈ ಮೊಬೈಲ್‌ ಸಿಕ್ಕಿದೆ ಎಂದು ₹1 ಸಾವಿರಕ್ಕೆ ಆತನಿಗೆ ಮಾರಾಟ ಮಾಡಿದ್ದರು. ಮೊಬೈಲ್‌ ಐಎಂಇಐ ಸಂಖ್ಯೆ ಆಧರಿಸಿ ತನಿಖೆ ನಡೆಸಿ, ಆ ಮೊಬೈಲ್‌ ಬಳಸುತ್ತಿದ್ದ ಲಕ್ಷ್ಮಣನನ್ನು ವಶಕ್ಕೆ ಪಡೆಯಲಾಯಿತು. ಆತ ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಎಸ್ಪಿ ಹೇಳಿದರು.

ವಿದ್ಯಾರ್ಥಿನಿ ವಿರುದ್ಧ ಪಾಲಕರ ದೂರು
‘ಅಂದು ಪ್ರಸಾದ್‌ನ ಹುಟ್ಟು ಹಬ್ಬ ಇರಲಿಲ್ಲ. ಆದರೂ, ಆಕೆ ಆತನನ್ನು ಕರೆಯಿಸಿಕೊಂಡು ಕೊಲೆ ಮಾಡಿಸಿದ್ದಾಳೆ. ಪ್ರಸಾದ್‌ ಮತ್ತು ಆಕೆಯದ್ದು ಬೇರೆ ಬೇರೆ ಜಾತಿ. ಈ ಕಾರಣಕ್ಕೆ ಮದುವೆಗೆ ಮನೆಯವರು ಒಪ್ಪಲಿಕ್ಕಿಲ್ಲ ಎಂದು ಆಕೆ ಈ ಕೃತ್ಯವೆಸಗಿದ್ದಾಳೆ ಎಂದು ಪ್ರಸಾದ್‌ನ ಮನೆಯವರು ದೂರು ನೀಡಿದ್ದರು. ಅವರ ದೂರು ದಾಖಲಿಸಿಕೊಳ್ಳಲಾಗಿತ್ತು. ಈಗ ವಿದ್ಯಾರ್ಥಿನಿಯ ಹೇಳಿಕೆಯನ್ನೂ ತನಿಖೆಯಲ್ಲಿ ಅಳವಡಿಸಿಕೊಳ್ಳುತ್ತೇವೆ’ ಎಂದು ಎಸ್ಪಿ ಹೇಳಿದರು.

‘ನಾವು ಪ್ರೇಮಿಗಳಲ್ಲ’
‘ನಾವು ಪ್ರೇಮಿಗಳಲ್ಲ. ಸ್ನೇಹಿತರಷ್ಟೇ. ವಿವಾಹ ವಿಷಯದ ಬಗ್ಗೆ ನಾವೆಂದೂ ಮಾತನಾಡಿರಲಿಲ್ಲ. ಪ್ರಸಾದ್‌ ತಮ್ಮ ಮನೆಯಲ್ಲಿ ನನ್ನ ವಿಷಯವಾಗಿ ಏನು ಹೇಳಿದ್ದ ಎಂಬುದು ಗೊತ್ತಿಲ್ಲ’ ಎಂದು ಎಸ್‌ಪಿ ಕಚೇರಿಗೆ ಬಂದಿದ್ದ ಕೇಂದ್ರೀಯ ವಿವಿಯ ವಿದ್ಯಾರ್ಥಿನಿ ಹೇಳಿದರು.

‘ಪ್ರಸಾದ್‌ನ ಹುಟ್ಟುಹಬ್ಬ ರಾಖಿ ಹಬ್ಬದ ದಿನ ಇತ್ತು. ನನ್ನ ಭೇಟಿಗೆ ಬಂದ ದಿನ ಆತನ ಹುಟ್ಟುಹಬ್ಬ ಇರಲಿಲ್ಲ. ತಡವಾಗಿ ಆತ ಹುಟ್ಟುಹಬ್ಬ ಆಚರಿಸಿಕೊಂಡ’ ಎಂದು ಆಕೆ ಹೇಳಿದರು.

‘ ಪೊಲೀಸ್‌ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ನಿಜ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದ ಆಕೆ, ‘ಆರೋಪಿಗಳು ನನಗೆ ಲೈಂಗಿಕ ಕಿರುಕುಳ ನೀಡಿಲ್ಲ’ ಎಂದೂ ಹೇಳಿದರು.

ಸಿಯುಕೆಯಲ್ಲಿ ರಕ್ಷಣೆಯೇ ಇಲ್ಲ!
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 22 ರಾಜ್ಯಗಳ 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಅವರು ತಮಗೆ ರಕ್ಷಣೆಯೇ ಇಲ್ಲ ಎಂದು ದೂರಿ ಈಚೆಗೆ ಇಡೀ ದಿನ ಪ್ರತಿಭಟನೆ ನಡೆಸಿದರು.

‘ಸಂಜೆಯ ನಂತರ ಕಲಬುರ್ಗಿಯಿಂದ ವಿವಿಗೆ ಹೋಗಲು ಬಸ್‌ ಇಲ್ಲ. ಲಾರಿ, ಟಂಟಂಗಳಲ್ಲಿ ಹೋಗಬೇಕಾಗುತ್ತದೆ. ಮುಖ್ಯದ್ವಾರದಿಂದ ಹಾಸ್ಟೆಲ್‌ಗಳು 3–4 ಕಿ.ಮೀ. ಅಂತರದಲ್ಲಿದ್ದು, ನಡೆದು ಹೋಗಬೇಕು. ಅಲ್ಲಿಯೂ ಭದ್ರತೆ ಇರಲ್ಲ. ಕೆಲವೇ ಕೆಲವು ಭದ್ರತಾ ಸಿಬ್ಬಂದಿ ಇದ್ದು, ಅವರು ಆಡಳಿತ ಕಟ್ಟಡ, ಕುಲಪತಿ ನಿವಾಸದ ಸುತ್ತ ಇರುತ್ತಾರೆ. ಹಾಸ್ಟೆಲ್‌ಗಳಿಗೆ ಸೂಕ್ತ ಭದ್ರತೆ ಇಲ್ಲ ಎಂದು ಅಂದು ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು’ ಎಂದು ಎಸ್‌ಪಿ ಹೇಳಿದರು.

‘ಅಲ್ಲಲ್ಲಿ ಒಡೆದಿರುವ ಆವರಣಗೋಡೆಯನ್ನು ಮುಚ್ಚಿ, ಗೋಡೆಯ ಮೇಲೆ ತಂತಿ ಬೇಲಿ ಹಾಕಬೇಕು. ವಿವಿ ಆವರಣದಲ್ಲಿರುವ ದೇವಸ್ಥಾನಕ್ಕೆ ಬರುವವರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಬೇಕು ಮತ್ತು ಅವರು ವಿವಿ ಆವರಣದೊಳಗೆ ಪ್ರವೇಶಿಸದಂತೆ ಆವರಣಗೋಡೆ ನಿರ್ಮಿಸಬೇಕು. ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಪ್ರತ್ಯೇಕ ಭದ್ರತೆ ಒದಗಿಸಬೇಕು. ಆವರಣದಲ್ಲಿ ನಿರಂತರ ಗಸ್ತು ವ್ಯವಸ್ಥೆ ಮಾಡಬೇಕು ಎಂಬ ಶಿಫಾರಸನ್ನು ಇನ್ನೆರಡು ದಿನಗಳಲ್ಲಿ ವಿವಿ ಆಡಳಿತ ಮಂಡಳಿಗೆ ಸಲ್ಲಿಸುತ್ತೇವೆ. ವಿಶ್ವವಿದ್ಯಾಲಯ ಅದನ್ನು ಅನುಷ್ಠಾನ ಮಾಡಬೇಕು’ ಎಂದು ಎಸ್‌ಪಿ ಶಶಿಕುಮಾರ್‌ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !