ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗೆ ಕಾರಣ ಗೊತ್ತಾಗುತ್ತಿಲ್ಲ: ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸುಭಾಷ ರಾಠೋಡ

ಪ್ರಜಾವಾಣಿ ಸಂದರ್ಶನ
Last Updated 24 ಮೇ 2019, 19:55 IST
ಅಕ್ಷರ ಗಾತ್ರ

ಕಲಬುರ್ಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಗೃಹ ಸಚಿವ ಎಂ.ಬಿ. ಪಾಟೀಲ ಹೀಗೆ ಕಾಂಗ್ರೆಸ್–ಜೆಡಿಎಸ್‌ನ ಘಟಾನುಘಟಿ ನಾಯಕರೇ ಚಿಂಚೋಳಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪ್ರಚಾರ ಮಾಡಿದರೂ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಅವರು ಗೆಲುವಿನ ದಡ ತಲುಪಲಿಲ್ಲ.

ಸೋಲಿಗೆ ಕಾರಣಗಳೇನು? ಅವರ ಮುಂದಿನ ಸೈದ್ಧಾಂತಿಕ ಹೋರಾಟದ ರೂಪು–ರೇಷೆಗಳೇನು? ಸೋಲಿನ ಪರಾಮರ್ಶೆಯನ್ನು ಹೇಗೆ ಮಾಡಿಕೊಳ್ಳಲಿದ್ದಾರೆ ಎಂಬುದರ ಕುರಿತು ‘ಪ್ರಜಾವಾಣಿ’ಯೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

*ನಿಮ್ಮ ಸೋಲಿಗೆ ಪ್ರಮುಖ ಕಾರಣಗಳೇನು?

–ಸ್ವಷ್ಪ ಕಾರಣ ಏನೆಂಬುದು ಗೊತ್ತಾಗುತ್ತಿಲ್ಲ. ಸಂಸದ ಮಲ್ಲಿಕಾರ್ಜುನ ಖರ್ಗೆ ಸೇರಿ ಸಮ್ಮಿಶ್ರ ಸರ್ಕಾರದ ಬಹುತೇಕ ಸಚಿವರು, ಸಂಸದರು ಚಿಂಚೋಳಿಗೆ ಬಂದು ನನ್ನ ಪರ ಸಾಕಷ್ಟು ಪ್ರಚಾರ ಮಾಡಿದ್ದರು. 45 ಡಿಗ್ರಿ ಸೆಲ್ಸಿಯಸ್‌ಸುಡುಬಿಸಿಲನ್ನೂ ಲೆಕ್ಕಿಸದೆ ಮತಯಾಚಿಸಿದ್ದರು.ನಾನೂ ಸಾಕಷ್ಟು ಸಂಚರಿಸಿಸಂಘಟನೆ ಮಾಡಿದ್ದೇನೆ. ಸಾಮಾಜಿಕ ಕಾರ್ಯಗಳಲ್ಲೂ ಕ್ರಿಯಾಶೀಲನಾಗಿದ್ದೇನೆ. ಜನರಿಗೆ ಅತ್ಯಂತ ಪರಿಚಿತ ವ್ಯಕ್ತಿತ್ವ ನನ್ನದು. ಆದಾಗ್ಯೂ, ಸೋಲು ಅನುಭವಿಸಿದೆ. ಸೋಲಿಗೆ ಕಾರಣವೇನು? ಎಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಮೇ 24 (ಶನಿವಾರ)ರಂದು ಚಿಂಚೋಳಿಯಲ್ಲಿ ಪಕ್ಷದ ಕಾರ್ಯಕರ್ತರ ಆತ್ಮಾವಲೋಕನ ಸಭೆ ಕರೆದಿದ್ದೇನೆ. ಅಲ್ಲಿ ಸುದೀರ್ಘವಾಗಿ ಈ ಬಗ್ಗೆ ಚರ್ಚಿಸುತ್ತೇವೆ.

*ನಿಮ್ಮ ಮುಂದಿನ ನಡೆ ಏನು?

–ಚಿಂಚೋಳಿ ತಾಲ್ಲೂಕಿನಾದ್ಯಂತ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುತ್ತೇನೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸುವ ಸಂಕಲ್ಪ ಮಾಡುತ್ತೇನೆ. ಸೋತರೂ ಧೈರ್ಯಗುಂದದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಡಾ.ಉಮೇಶ ಜಾಧವ ಹಾಗೂ ಡಾ.ಅವಿನಾಶ ಜಾಧವ ಅವರು ವೈಯಕ್ತಿಕವಾಗಿ ಅವಹೇಳನ ಮಾಡಿದ್ದಾರೆ. ಇದನ್ನೂ ಪ್ರಶ್ನಿಸಲಿದ್ದೇನೆ.

* 6 ತಿಂಗಳಲ್ಲಿ ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿಡಾ.ಉಮೇಶ ಜಾಧವ ಭರವಸೆ ನೀಡಿದ್ದರು. ಇದು ಸಾಧ್ಯವೇ?

–ನಾನು ಅಭಿವೃದ್ಧಿ ವಿರೋಧಿಯಲ್ಲ. ತಂದೆ–ಮಗ ಇಬ್ಬರೂ ಗೆಲುವು ಸಾಧಿಸಿದ್ದಾರೆ. ಭರವಸೆ ನೀಡಿದಂತೆ, ಅವುಗಳನ್ನು ಈಡೇರಿಸುವತ್ತಲೂ ಗಮನ ಹರಿಸಬೇಕು. ನಾನು ಒಂದಷ್ಟು ದಿನ ಕಾದು ನೋಡುತ್ತೇನೆ. ಭರವಸೆ ಹುಸಿಯಾದರೆ ಜನರೊಂದಿಗೆ ಸೇರಿ ಹೋರಾಟ ಆರಂಭಿಸುತ್ತೇನೆ. ನಾನು ಈ ಮುಂಚೆಯ ಸಂದರ್ಶನದಲ್ಲಿ ತಿಳಿಸಿದಂತೆ ಬಿಜೆಪಿಯವರು ಕೆಲವು ಸಾಧ್ಯವಾಗದ ಭರವಸೆಗಳನ್ನೂ ನೀಡಿದ್ದಾರೆ. ಡಾ.ಅವಿನಾಶ ಏನು ಕೆಲಸ ಮಾಡುತ್ತಾರೋ ಎಲ್ಲವೂ ಗಮನಿಸುತ್ತೇನೆ.ಆ ಮೇಲೆ ಅಪ್ಪ–ಮಕ್ಕಳ ಹುಸಿ ಭರವಸೆಗಳನ್ನು ಜನರ ಮುಂದಿಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT