ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಮುಖ್ಯ ಶಿಕ್ಷಕನತ್ತ ಬೊಟ್ಟು ಮಾಡಿದ ದಿವ್ಯಾ ಹಾಗರಗಿ

ಇಡೀ ದಿನ ವಿಚಾರಣೆ, ಸಿಐಡಿ ಅಧಿಕಾರಿಗಳಿಗೆ ಸಿಗದ ಸೂಕ್ತ ಮಾಹಿತಿ
Last Updated 1 ಮೇ 2022, 4:40 IST
ಅಕ್ಷರ ಗಾತ್ರ

ಕಲಬುರಗಿ: ‘ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ಪಾಸ್‌ ಮಾಡಿಸಲು ಏನೇನು ‘ಪ್ಲ್ಯಾನ್‌’ ಮಾಡಿದ್ದೇವೆ ಎಂದು ಮುಖ್ಯ ಶಿಕ್ಷಕ ಕಾಶಿನಾಥ ಮುಂಚೆಯೇ ಹೇಳಿದ್ದ...’

ಹಗರಣ ನಡೆದ ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರು ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಇದು.

ಇದೇ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿರುವ ಕಾಶಿನಾಥ ಈ ಅಕ್ರಮದಲ್ಲಿ ಎಲ್ಲರಿಗೂ ಸಂಪರ್ಕ ಕೊಂಡಿಯಾಗಿದ್ದರು. ಒಂದೆಡೆ ದಿವ್ಯಾ ಹಾಗರಗಿ, ಇನ್ನೊಂದೆಡೆ ರುದ್ರಗೌಡ ಪಾಟೀಲ ಮತ್ತೊಂದೆಡೆ ಮಂಜುನಾಥ ಮೇಳಕುಂದಿ ಹಾಗೂ ಅಭ್ಯರ್ಥಿಗಳಿಗೆ ಸಂಪರ್ಕ ಸೇತುವೆ ಆಗಿದ್ದರು ಎನ್ನುವುದು ದಿವ್ಯಾ ಅವರು ನೀಡಿದ ಹೇಳಿಕೆಯಿಂದ ಗೊತ್ತಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಅಕ್ರಮದ ಕುರಿತು ದಿವ್ಯಾ ಅವರಿಂದ ನಿರೀಕ್ಷಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಿಚಾರಣೆ ಮುಂದುವರಿದಿದೆ. ಶನಿವಾರ ಇಡೀ ದಿನ ಒಂದೇ ಸ್ಥಳದಲ್ಲಿದ್ದು ಆರೋಪಿಗಳಿಂದ ಮಾಹಿತಿ ಪಡೆದಿದ್ದೇವೆ ಎನ್ನುವುದು ಸಿಐಡಿ ಅಧಿಕಾರಿಗಳ ಮಾತು.

ಚೆಳ್ಳೆಹಣ್ಣು ತಿನ್ನಿಸಿ ಎಲ್ಲಿಗೆ ಹೋಗಿದ್ದರು?: ಅಕ್ರಮದ ಸುದ್ದಿ ಹೊರಬೀಳುತ್ತಿದ್ದಂತೆಯೇ ಪರಾರಿಯಾಗಿದ್ದ ದಿವ್ಯಾ 18 ದಿನ ಎಲ್ಲಿದ್ದರು ಎಂಬ ಪ್ರಶ್ನೆಗೆಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸೊಲ್ಲಾಪುರ, ಪುಣೆ, ಗುಜರಾತ್‌ನಲ್ಲಿ ತಲೆಮರೆಸಿಕೊಂಡು ಓಡಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.

ಅಕ್ರಮಕ್ಕೆ ಸಂಬಂಧಿಸಿದಂತೆ ಏ 9ರಂದು ನಗರದ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಸಿಐಡಿ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದರು.ಏ 10ಕ್ಕೆ ಕಲಬುರಗಿಗೆ ಬಂದ ಸಿಐಡಿ ಅಧಿಕಾರಿಗಳ ತಂಡ ಮೊದಲು ವೀರೇಶ ಅವರನ್ನು ಬಂಧಿಸಿತು. ಅದೇ ದಿನ ಕಾಶಿನಾಥ ಕೆಲವು ದಾಖಲೆಗಳನ್ನು ಎತ್ತಿಕೊಂಡುಪರಾರಿಯಾದರು.

ಎರಡು ದಿನಗಳ ನಂತರ ದಿವ್ಯಾ ಹಾಗರಗಿ ಅವರನ್ನು ಇಲ್ಲಿನ ಐವಾನ್‌ ಇ ಶಾಹಿ ಅತಿಥಿಗೃಹಕ್ಕೆ ಕರೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ತನಿಖೆಗೆ ಸಂಪೂರ್ಣ ಸಹಕರಿವುಸುವುದಾಗಿ ತಿಳಿಸಿದ್ದ ದಿವ್ಯಾ, ಏ. 14ರಂದು ತಲೆಮರೆಸಿಕೊಂಡಿದ್ದರು. ಈಗ ಬಂಧನವಾದ ಮೇಲೆ ‘ನನ್ನದೇನೂ ತಪ್ಪಿಲ್ಲ’ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಕಣ್ಣೀರಿಟ್ಟ ದಿವ್ಯಾ:ಶುಕ್ರವಾರ ಇಲ್ಲಿನ 3ನೇ ಜೆಎಂಎಫ್‌ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದ ದಿವ್ಯಾ ಹಾಗರಗಿ ಗಳಗಳನೇ ಕಣ್ಣೀರಿಟ್ಟರು.

ದಿವ್ಯಾ ಸೇರಿ ಆರು ಮಂದಿ ಆರೋಪಿಗಳನ್ನು 11 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದ್ದಾಗಿ ನ್ಯಾಯಾಧೀಶರು ಹೇಳುತ್ತಿದ್ದಂತೆಯೇ ದಿವ್ಯಾ ದುಃಖಿತರಾದರು.

*

‘ತನಿಖೆಗೆ ಹಾಜರಾಗುವೆ’

ನಿರ್ಜಲೀಕರಣದ ಕಾರಣ ಅನಾರೋಗ್ಯಕ್ಕೆ ಒಳಗಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಆರೋಗ್ಯ ಈಗ ಸುಧಾರಿಸಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಅವರನ್ನು ನೋಡಲು ಹೋಗಿದ್ದ ಸಿಐಡಿ ಅಧಿಕಾರಿಗಳ ಮುಂದೆ ‘ನಾನು ಅರಾಮಾಗಿದ್ದೇನೆ, ಭಾನುವಾರ ಬಂದು ನಿಮ್ಮ ಮುಂದೆ ಹಾಜರಾಗುತ್ತೇನೆ’ ಎಂದು ಸ್ವತಃ ರುದ್ರಗೌಡ ಪ್ರತಿಕ್ರಿಯಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT