ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಅಸಮಾತೋಲನ ನಿವಾರಣೆಗೆ ಬದ್ಧ: ಯಡಿಯೂರಪ್ಪ

ವರ್ಚುವೆಲ್ ವೇದಿಕೆಯಿಂದ ಕಲ್ಯಾಣ ಕರ್ನಾಟಕ ಜನರಿಗೆ ಭರವಸೆ ನೀಡಿದ ಯಡಿಯೂರಪ್ಪ
Last Updated 27 ಜುಲೈ 2020, 15:20 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಶಕ್ತಿಮೀರಿ ಶ್ರಮಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಲಾದ ಸಾಧನಾ ಸಮಾರಂಭ ಮತ್ತು ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವರ್ಚುವೆಲ್ ವೇದಿಕೆ (ಆನ್‍ಲೈನ್) ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆಯನ್ನು ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.

‘ಕಲ್ಯಾಣ ಕರ್ನಾಟಕ ಜನರ ಭಾವನೆಗೆ ಬೆಲೆಕೊಟ್ಟು ಹೈದ್ರಾಬಾದ್‌ ಕರ್ನಾಟಕ ಎಂಬ ದಾಸ್ಯ ಸೂಚಕ ಪದವನ್ನು ತೆಗೆದು ‘ಕಲ್ಯಾಣ ಕರ್ನಾಟಕ’ ಎಂಬ ವಿಶಾಲ ಅರ್ಥ ಬಳಕೆಗೆ ತಂದಿದ್ದೇವೆ. ಕೇವಲ ಮರುನಾಮಕರಣ ಮಾಡಿದೇ, ಅಭಿವೃದ್ಧಿಗಾಗಿ ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸಲಾಗಿದೆ. ಇದಕ್ಕಾಗಿ ₹ 500 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದರು.

‘ರಾಜ್ಯದಲ್ಲಿ ಪ್ರಾದೇಶಿಕ ಅಸಮಾತೋಲನ ನಿವಾರಣೆಗೆ ನಾನು ಕಟಿಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಡಾ.ನಂಜುಂಡಪ್ಪ ಸಮಿತಿಯ ವರದಿಯಂತೆ ಎಲ್ಲಾ ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ಧಿ ಮಾಡಲಾಗುವುದು’ ಎಂದೂ ಮುಖ್ಯಮಂತ್ರಿ ಹೇಳಿದರು.

ಬಾಗಲಕೋಟೆ ಜಿಲ್ಲೆಯಿಂದ ಆನ್‍ಲೈನ್‍ನಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಮಾತನಾಡಿ, ‘ಕಲಬುರ್ಗಿ ಒಳಗೊಂಡಂತೆ ಕಲ್ಯಾಣ ಕರ್ನಾಟಕ ಸೂಫಿ– ಸಂತರ ನಾಡು ಹಾಗೂ ಶರಣರ ಬೀಡಾಗಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅವರು ಲಿಂಗ, ಜಾತಿ ಭೇದವಿಲ್ಲದೆ, ಸರ್ವಜನಾಂಗದ ಸಮಾನತೆಗೆ ಶ್ರಮಿಸಿದ್ದಾರೆ. ಇದೇ ಹಾದಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಸಾಗಿದೆ’ ಎಂದು ಗುಣಗಾನ ಮಾಡಿದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಜ ರದ್ದೆವಾಡಗಿ, ಉಪ ವಿಭಾಗಾಧಿಕಾರಿ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಶರತ್ ಬಿ., ನಗರ ಪೊಲೀಸ್ ಆಯುಕ್ತ ಎನ್. ಸತೀಷಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪಿ.ರಾಜಾ, ಡಿಸಿಪಿ ಕಿಶೋರ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ, ಐ.ಎ.ಎಸ್. ಪ್ರೊಬೇಷನರ್ ಅಧಿಕಾರಿ ಆಕಾಶ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಫಲಾನುಭವಿಗಳು ಇದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸ್ವಾಗತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ವಂದಿಸಿದರು.

ಪ್ರಗತಿ ಹೊತ್ತಿಗೆ ಬಿಡುಗಡೆ

ಸರ್ಕಾರದ ಒಂದು ವರ್ಷದ ಸಾಧನೆಯ ಅಂಕಿ– ಅಂಶಗಳ ಒಳಗೊಂಡ ‘ಸವಾಲುಗಳ ಒಂದು ವರ್ಷ- ಪರಿಹಾರದ ಸ್ಪರ್ಶ’ ಪ್ರಗತಿ ಹೊತ್ತಿಗೆಯನ್ನು ಕಲಬುರ್ಗಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಬಿಡುಗಡೆಗೊಳಿಸಿದರು.

ಇದಲ್ಲದೇ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ಜನಪದ’ ಮತ್ತು ‘ಮಾರ್ಚ್ ಆಫ್ ಕರ್ನಾಟಕ’ ಮಾಸಿಕ ಸಂಚಿಕೆಯನ್ನು ಸಹ ಜನಪ್ರತಿನಿಧಿಗಳು ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT