ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಾಳ: ಮತ್ತೆ ಕಿತ್ತು ಹೋದ ಸಿಮೆಂಟ್ ಕಾಂಕ್ರೀಟ್ ಬೆಡ್

Last Updated 19 ಅಕ್ಟೋಬರ್ 2020, 3:18 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ್ ಜಲಾಶಯದ ವೇಸ್ಟ್ ವೇಯರ್ ಗೇಟಿನ ಮುಂಭಾಗದ ಸಿಮೆಂಟ್ ಕಾಂಕ್ರೀಟ್ ಬೆಡ್ ಕಿತ್ತುಹೋಗಿದೆ.

ಗೇಟಿನ ಮುಂಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಡ್ ಕಿತ್ತುಹೋಗಿದೆ. ಇದರ ರಭಸ ತಾಳದೆ ಕಳೆದ ವರ್ಷ ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ (ಜಲಾಶಯ ಪುನರ್ ಬಲವರ್ಧನೆ ಕಾರ್ಯಕ್ರಮ) ಯೋಜನೆ ಅಡಿಯಲ್ಲಿ ನಿರ್ಮಿಸಿದ ಸಿಮೆಂಟ್ ಕಾಂಕ್ರೀಟ್ ಬೆಡ್ ಕಿತ್ತು ಬಿದ್ದಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.

ಅಂದಾಜು ₹ 34 ಕೋಟಿ ವೆಚ್ಚದಲ್ಲಿ ಜಲಾಶಯ ಬಲವರ್ಧನೆ ಕಾಮಗಾರಿ ಕೈಗೊಳ್ಳಲಾಗಿತ್ತು. ಜಲಾಶಯ ನಿರ್ಮಾಣದ ಸಮಯದಲ್ಲಿ ನಿರ್ಮಿಸಿದ ಬೆಡ್ ದುರ್ಬಲವಾಗಿ ಪದರು ಪದರಾಗಿ ಕಿತ್ತಿದೆ. ಇದರ ಒತ್ತಡ ಸಹಿಸದೆ ಈಚೆಗೆ ಡ್ರಿಪ್ ಯೋಜನೆ ಅಡಿಯಲ್ಲಿ ನಿರ್ಮಿಸಿದ ಬೆಡ್ ಕಿತ್ತು ಹೋಗಿದೆ. ಸುಮಾರು 13 ಬ್ಲಾಕ್‌ಗಳಲ್ಲಿ ಇದು ಕಿತ್ತು ಹೋಗಿ ₹ 3 ಕೋಟಿ ಹಾನಿಯಾಗಿದೆ. ಜಲಾಶಯದಿಂದ ಭಾರಿ ಪ್ರಮಾಣಲ್ಲಿ ನದಿಗೆ ನೀರು ಬಿಟ್ಟಿದ್ದರಿಂದ ಬೆಡ್ ಕಿತ್ತು ಬಂಡೆಗಳಂತೆ ಮುಂದಕ್ಕೆ ಹೋಗಿ ಬಿದ್ದಿವೆ ಎಂದು ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಸೂರ್ಯಕಾಂತ ಮಾಲೆ ತಿಳಿಸಿದರು.

ಈ ಕುರಿತು ಈಗಾಗಲೇ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರು ಮತ್ತು ಮುಖ್ಯ ಎಂಜಿನಿಯರ್ ಸಹಿತ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಈಗಾಗಲೇ ವರದಿ ಸಲ್ಲಿಸಲಾಗಿದೆ ಎಂದರು.

ಜು.15ರಂದು ಭಾರಿ ಪ್ರಮಾಣದ ನೀರು ಬಿಟ್ಟಾಗ ಜಲಾಶಯದ ಮುಂಭಾಗದಲ್ಲಿ ಅಲ್ಪ ಪ್ರಮಾಣದ ಬೆಡ್ ಕಿತ್ತುಹೋಗಿತ್ತು. ಆದರೆ ಮಂಗಳವಾರ ಸುರಿದ ಭಾರಿ ಮಳೆಯಿಂದ ಒಳ ಹರಿವು ಹೆಚ್ಚಿದಾಗ ನದಿಗೆ ಬಿಟ್ಟಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಿತ್ತು ಹೋಗಿದೆ. ಇದನ್ನು ಸಾಧ್ಯವಾದಷ್ಟು ಬೇಗ ದುರಸ್ತಿ ಮಾಡಬೇಕು. ಜಲಾಶಯದ ಎದುರುಗಡೆ 20 ವರ್ಷಗಳ ಹಿಂದೆ ನಿರ್ಮಿಸಿದ ಬೆಡ್ ಅನ್ನು ಸಂಪೂರ್ಣ ಕಿತ್ತು ಮರು ನಿರ್ಮಿಸಬೇಕು. ಇದಕ್ಕೆ ವಿಳಂಬ ಮಾಡಿದರೆ ಜಲಾಶಯದ ಎದುರು ಧರಣಿ ನಡೆಸುವುದಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೋರಾಟ ನಡೆಸುತ್ತಿರುವ ಭೀಮಶೆಟ್ಟಿ ಮುಕ್ಕಾ ಎಚ್ಚರಿಕೆ ನೀಡಿದ್ದಾರೆ.

2018ರ ವಿಧಾನ ಸಬಾ ಚುನಾವಣೆಯ ಪ್ರಚಾರಕ್ಕೆ ಚಿಂಚೋಳಿಗೆ ಬಂದಿದ್ದ ಅಂದಿನ ಕೇಂದ್ರ ಸಚಿವ ದಿವಂಗತ ಅನಂತಕುಮಾರ ಅವರು ಕಲ್ಲು ಬಂಡೆಗಳ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕಿ ಕಳಪೆ ಕೆಲಸ ನಡೆಸಿ ಹಣ ಲಪಟಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈಗ ಬೆಡ್ ಕಿತ್ತು ಹೋಗಿರುರುವುದನ್ನು ನೋಡಿದರೆ ಅನಂತಕುಮಾರ ಆರೋಪ ಅಲ್ಲಗಳೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT