ಶನಿವಾರ, ಡಿಸೆಂಬರ್ 5, 2020
21 °C

ಮತ್ತಿಮೂಡ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ಮತ್ತಿಮೂಡ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ. ರಾಮಕೃಷ್ಣ ಎಚ್ಚರಿಕೆ ನೀಡಿದರು.

‘ಇಲ್ಲಿನ ಮಹಾತ್ಮ ಬಸವೇಶ್ವರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಮನೆಯೊಂದರಲ್ಲಿನ ಬೆಟ್ಟಿಂಗ್ ಅಡ್ಡೆ ಮೇಲೆ ಮಹಾರಾಷ್ಟ್ರದ ಸೊಲ್ಲಾಪುರದ ಸಿಸಿಬಿ ಪೊಲೀಸರು ದಾಳಿ ಮಾಡಿ, ಶಾಸಕ ಪತ್ನಿ ಹೆಸರಲ್ಲಿರುವ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಶಾಸಕರ ಪತ್ನಿಯ ಸಹೋದರ ಕೂಡ ಭಾಗಿ ಆಗಿರುವ ಶಂಕೆ ಇದೆ. ಇದರ ಕುರಿತು ಸಂಪೂರ್ಣ ತನಿಖೆ ಆಗಬೇಕು’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸೊಲ್ಲಾಪುರದ ಪೊಲೀಸರು ನಗರಕ್ಕೆ ಬಂದು ಶಾಸಕರ ಪತ್ನಿ ಕಾರು ಸೇರಿದಂತೆ ಇತರ ಇನ್ನೆರಡು ಕಾರ್‌, ನಾಲ್ಕು ಲ್ಯಾಪ್‌ಟಾಪ್‍, ಸ್ಕೂಟರ್ ಹಾಗೂ ಟಿ.ವಿ ಜಪ್ತಿ ಮಾಡಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆದರೂ, ಸ್ಥಳೀಯ ಪೊಲೀಸರಿಗೆ ಇಂತಹ ದೊಡ್ಡ ಮಟ್ಟದ ಬೆಟ್ಟಿಂಗ್‌ ದಂಧೆ ಗಮನಕ್ಕೆ ಬಂದಿಲ್ಲ. ಸ್ಥಳೀಯ ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಅನುಮಾನ ಮೂಡುತ್ತಿದೆ’ ಎಂದೂ ಅವರು ದೂರಿದರು.

‘ಶಾಸಕರ ವಿರುದ್ಧ ಬೆಟ್ಟಿಂಗ್ ಆರೋಪ ಹೊಸದಲ್ಲ. ಈ ಹಿಂದೆ ಸೇಡಂ ತಾಲ್ಲೂಕಿನ ಅಡಕಿ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ  ಸದಸ್ಯರಾಗಿದ್ದಾಗ, ಅದಕ್ಕೂ ಮುನ್ನ ಸಹ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದರ ಬಗ್ಗೆ ಆರೋಪವಿದೆ’ ಎಂದು ಅವರು ದೂರಿದರು.

‘15 ದಿನಗಳ ಹಿಂದೆ ನಾವೇ ಬೆಟ್ಟಿಂಗ್ ಪ್ರಕರಣ ಪತ್ತೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಈ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಪಾಟೀಲ, ಮುಖಂಡರಾದ ವೈಜನಾಥ ತಡಕಲ್, ಶರಣಬಸಪ್ಪ ಹಾಗರಗಿ, ನಿರ್ಮಲಾ ಬರಗಾಲಿ, ವಿಠಲ್ ಹೊಡೆಲ್ ಇದ್ದರು.

‘ಬೆಟ್ಟಿಂಗ್‌ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ’

ಕಲಬುರ್ಗಿ: ‌‘ನಗರದಲ್ಲಿ ನಡೆದಿದೆ ಎಂದು ಹೇಳುತ್ತಿರುವ ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಕ್ಕೂ ನನಗೂ ಏನೂ ಸಂಬಂಧವಿಲ್ಲ. ನನ್ನ ಕುಟುಂಬದ ಯಾವ ಸದಸ್ಯರಿಗೂ ಇದು ಸಂಬಂಧಿಸಿಲ್ಲ. ನನ್ನ ಬೆಳವಣಿಗೆ ಕಂಡು ಆಗದವರು ಈ ರೀತಿ ಉದ್ದೇಶ ಪೂರ್ವಕ ಸುದ್ದಿ ಹರಡುತ್ತಿದ್ದಾರೆ’ ಎಂದು ಶಾಸಕ ಬಸವರಾಜ ಮತ್ತಿಮೂಡ ಪ್ರತಿಕ್ರಿಯಿಸಿದರು.

‘ನನ್ನ ಪತ್ನಿಯ ತಂದೆ ಹಬ್ಬಕ್ಕೆ ಊರಿಗೆ ಬಂದಿದ್ದರು. ಪತ್ನಿ, ಅವರ ಸಹೋದರ ಹಾಗೂ ತಂದೆ ಸೇರಿಕೊಂಡು ಪತ್ನಿಯ ಕಾರಿನಲ್ಲಿ ಹೊರಗೆ ಸಂಚರಿಸಿ ಮನೆ ಮುಂದೆ ನಿಲ್ಲಿಸಿದ ಸಂದರ್ಭದಲ್ಲಿ, ಸೊಲ್ಲಾಪುರ ಪೊಲೀಸರು ಬಂದು ಕಾರ್‌ನ್ನು ಒಯ್ದಿದ್ದಾರೆ. ಆದರೆ, ಅದು ಬೆಟ್ಟಿಂಗ್‌ ಜಾಗದಲ್ಲಿ ಸಿಕ್ಕಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ’ ಎಂದರು.

‘ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಕೂಡ ವಿರೋಧಿಗಳು ಇಂಥ ಪ್ರಯತ್ನ ಮಾಡಿದ್ದಾರೆ. ನನ್ನ ಮೇಲೆ 12 ಪ್ರಕರಣ ದಾಖಲಿಸಿದ್ದರು. ಆದರೆ, ಎಲ್ಲವೂ ಹೈಕೋರ್ಟ್‌ನಲ್ಲಿ ಖುಲಾಸೆ ಆದವು. ಈಗ ನನ್ನ ಬೆಳವಣಿಗೆ ಸಹಿಸದೇ ಮತ್ತೆ ಇಂಥ ಪಿತೂರಿ ನಡೆಸಿದ್ದಾರೆ’ ಎಂದೂ ಅವರು ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.