ರಫೆಲ್ ಹಗರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

7

ರಫೆಲ್ ಹಗರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Published:
Updated:
Deccan Herald

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಫೆಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಹಗರಣ ಎಸಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಯುಪಿಎ ಸರ್ಕಾರವು ಫ್ರಾನ್ಸ್‌ನೊಂದಿಗೆ ₹526 ಕೋಟಿಗೆ ಒಂದು ವಿಮಾನ ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು. ಅದರಲ್ಲಿ 16 ಪೂರ್ಣ ಪ್ರಮಾಣದ ವಿಮಾನಗಳನ್ನು ಖರೀದಿಸಿ, ಉಳಿದಂತೆ 108 ವಿಮಾನಗಳ ಬಿಡಿ ಭಾಗಗಳನ್ನು ಮತ್ತು ತಂತ್ರಜ್ಞಾನವನ್ನು ಎಚ್‌ಎಎಲ್‌ ವಿಮಾನ ಕಾರ್ಖಾನೆಗೆ ನೀಡುವ ಮೂಲಕ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಸುವ ಪ್ರಯತ್ನ ಮಾಡಿತ್ತು. ಆದರೆ, ಮೋದಿ ಅವರು ಉದ್ಯಮಿ ಅನಿಲ್ ಅಂಬಾನಿಯನ್ನು ಮಧ್ಯವರ್ತಿಯಾಗಿ ಇಟ್ಟುಕೊಂಡು ₹1,670 ಕೋಟಿಗೆ ಒಂದು ವಿಮಾನದಂತೆ 36 ವಿಮಾನಗಳನ್ನು ಮಾತ್ರ ಖರೀದಿಸಿ ದೇಶಕ್ಕೆ ₹41 ಕೋಟಿ ನಷ್ಟ ಉಂಟುಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಚುನಾವಣಾ ಪೂರ್ವದಲ್ಲಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, 52 ತಿಂಗಳು ಕಳೆದರೂ 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ವಿದೇಶಿ ಬ್ಯಾಂಕುಗಳಲ್ಲಿನ ಕಪ್ಪು ಹಣವನ್ನು ವಾಪಸು ತರುತ್ತೇನೆ ಎಂದು ಹೇಳಿದ್ದರು. ಆ ಬೇಡಿಕೆಯೂ ಈಡೇರಿಲ್ಲ. ಮೋದಿ ಸುಳ್ಳಿನ ಸಾಧನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಜಿಎಸ್‌ಟಿ ಜಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ನೋಟು ರದ್ದತಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ತೈಲ ಬೆಲೆ ಮತ್ತು ಅಡುಗೆ ಅನಿಲ ದರ ಹೆಚ್ಚಳವಾಗಿವೆ. ಇದರಿಂದಾಗಿ ಜನಸಾಮಾನ್ಯರು ಬವಣೆ ಪಡುವಂತಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಡಾ. ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ, ಇಲಿಯಾಸ್ ಭಾಗವಾನ್, ಅರುಣಕುಮಾರ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !