ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರಾಹುಲ್ ಗಾಂಧಿ ವಿಚಾರಣೆ ಖಂಡಿಸಿ ಪ್ರತಿಭಟನೆ

ಬಿಜೆಪಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ; ಕಾಂಗ್ರೆಸ್ ಆರೋಪ
Last Updated 17 ಜೂನ್ 2022, 14:57 IST
ಅಕ್ಷರ ಗಾತ್ರ

ಕಲಬುರಗಿ: ಕೇಂದ್ರದ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯವನ್ನು (ಇ.ಡಿ) ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡುತ್ತಿದ್ದು, ಈ ವಿಚಾರದಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ರಾಜಕೀಯ ಎದುರಾಳಿಗಳನ್ನು ಹಣಿಯಲು ಬಿಜೆಪಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇ.ಡಿ, ಸಿಬಿಐಗಳನ್ನು ಬಳಸಿಕೊಳ್ಳುತ್ತಿದೆ‌’ ಎಂದು ಅವರು ಆರೋಪಿಸಿದರು.

ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ‘‌ದೇಶದಾದ್ಯಂತ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಜಾರಿ ನಿರ್ದೇಶನಾಲಯವು ಸೇಡಿನ ರಾಜಕಾರಣ ಮಾಡುತ್ತಿದೆ. ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ರಾಹುಲ್ ಗಾಂಧಿ ಮೇಲೆ ಸುಳ್ಳು ಆರೋಪ ಹೊರಿಸಿ ತನಿಖೆ ನಡೆಸಲಾಗುತ್ತಿದೆ. ಕಾನೂನು ಪ್ರಕಾರ ತನಿಖೆಯಾಗಬೇಕಾದರೆ ಮೊದಲು ಎಫ್‌ಐಆರ್ ಮಾಡಬೇಕು’ ಎಂದರು.

‘ನಾಲ್ಕು–ಐದು ದಿನ ಸತತ ವಿಚಾರಣೆ ನಡೆಸಬೇಕಾದರೆ ಕೆಲ ಕಾನೂನು ಚೌಕಟ್ಟುಗಳಿವೆ. ಈ ತನಿಖೆಯನ್ನು ಒಂದು ಗಂಟೆಯಲ್ಲಿ ಮುಗಿಸಬಹುದಿತ್ತು. ಆರೋಪ ಹೊರಿಸಿ, ಮಾನಸಿಕ ವೇದನೆ ನೀಡಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಇ.ಡಿ. ವಿಚಾರಣೆಗೆ ಒಳಪಡಿಸಿದೆ. ಖರ್ಗೆ ಅವರ ವಿರುದ್ಧ ಇಲ್ಲಿಯವರೆಗೂ ಒಂದು ಕಪ್ಪು ಚುಕ್ಕೆಯೂ ಇಲ್ಲ’ಎಂದರು.

‘ದೆಹಲಿ ಪೊಲೀಸರು ಕಾಂಗ್ರೆಸ್ ಕಚೇರಿಗೆ ತೆರಳಿ ಗಲಾಟೆ ಮಾಡಿದ್ದಾರೆ. ಪಕ್ಷದ ಕಚೇರಿಗೆ ನುಗ್ಗಲು ಅವರಿಗೆ ಯಾವ ಅಧಿಕಾರವೂ ಇಲ್ಲ. ಸಂಸದ ಡಿ.ಕೆ. ಸುರೇಶ್ ಅವರನ್ನೂ ತಳ್ಳಿ ಅವಮಾನಿಸಲಾಗಿದೆ. ನಾವು ಎಲ್ಲ ತನಿಖೆಗೆ ಸಿದ್ಧರಾಗಿದ್ದೇವೆ. ನೀವೂ ಮುಖಾಮುಖಿಯಾಗಿರಿ’ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯು ಸಂವಿಧಾನದತ್ತ ಸಂಸ್ಥೆಗಳನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಿತ್ತು. ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ತೊಲಗಬೇಕು’ ಎಂದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚೇತನ ಗೋನಾಯಕ ಮಾತನಾಡಿ, ‘ರಾಹುಲ್ ಗಾಂಧಿ ಅವರ ವಿರುದ್ಧ ಸೇಡಿನ ರಾಜಕಾರಣಕ್ಕೆ ಮುಂದಾಗಿರುವ ಬಿಜೆಪಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಿಸಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಮುಖ್ಯಮಂತ್ರಿ, ಸಚಿವರು, ಸಂಸದರು ಎಂಬುದನ್ನೂ ನೋಡದೇ ಪೊಲೀಸರು ತಳ್ಳುವ ಮೂಲಕ ಅವಮಾನಿಸಿದರು. ಪೊಲೀಸ್ ಬಲವನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕುತಂತ್ರವನ್ನು ಬಿಜೆಪಿ ಕೈಬಿಡಬೇಕು’ ಎಂದರು.

ಶಾಸಕಿ ಕನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ್ ರಾಠೋಡ, ಮಜರ್ ಖಾನ್, ಶಿವಾನಂದ ಹೊನಗುಂಟಿ, ಲಿಂಗರಾಜ ತಾರಫೈಲ್, ರೇಣುಕಾ ಸಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT