ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದರ ಏರಿಕೆ ಜನವಿರೋಧಿ ನೀತಿ: ಸಾತಿ ಸುಂದರೇಶ

Published 30 ಜೂನ್ 2024, 13:12 IST
Last Updated 30 ಜೂನ್ 2024, 13:12 IST
ಅಕ್ಷರ ಗಾತ್ರ

ಕಲಬುರಗಿ: ‘ಪೆಟ್ರೋಲ್‌, ಡೀಸೆಲ್, ಹಾಲಿನದ ದರ ಏರಿಕೆ ಜನವಿರೋಧಿ ನೀತಿಯಾಗಿದ್ದು, ಇದನ್ನು ಸಿಪಿಐ ಖಂಡಿಸುತ್ತದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಕೂಡಲೇ ದರ ಏರಿಕೆ ಹಿಂಪಡೆಯಬೇಕು’ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ(ಸಿಪಿಐ) ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಒಂದೆಡೆ ದರ ಏರಿಕೆ ಮಾಡುತ್ತಿದೆ, ಮತ್ತೊಂದೆಡೆ ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಸೂರಿಲ್ಲದವರಿಗೆ ಸೂರು ನೀಡುವ ಭರವಸೆ ನೀಡಿದ್ದರು. ಒಂದು ಅಂದಾಜಿನ ಪ್ರಕಾರ ರಾಜ್ಯದ 50 ಲಕ್ಷ ಮಂದಿಗೆ ಸ್ವಂತ ಮನೆಗಳಿಲ್ಲ. ಈ ಸಂಬಂಧ ಕೂಡಲೇ ನಿಖರವಾದ ಸಮೀಕ್ಷೆ ನಡೆಸಬೇಕು. ಮನೆ–ನಿವೇಶನ ವಿಷಯವು ವಸತಿ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಈ ಮೂರು ಇಲಾಖೆಗಳ ನಡುವೆ ಸಮನ್ವಯ ಸಮಿತಿ ರಚಿಸಿ, ಸೂರು ಒದಗಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್‌ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೂ ಬಿಜೆಪಿ ಇನ್ನೂ ಸಂವಿಧಾನ ವಿರೋಧಿ ನಿಲುವಿನಿಂದ ಹೊರಬಂದಿಲ್ಲ. ಇತ್ತೀಚೆಗೆ ಲೋಕಸಭೆಯಲ್ಲಿ ಸಂವಿಧಾನಕ್ಕೆ ಜೈಕಾರ ಕೂಗಿದ್ದಕ್ಕೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದು ಅದಕ್ಕೆ ನಿದರ್ಶನ. ಹೀಗಾಗಿ ಚುನಾವಣಾ ಪೂರ್ವದಲ್ಲಿ ಮೈತ್ರಿಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋರಾಡಿದಂತೆ ಕಾಂಗ್ರೆಸ್‌ ಈಗಲೂ ಬಿಜೆಪಿ ವಿರುದ್ಧ ದೇಶದಾದ್ಯಂತ ಹೋರಾಟ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಿಪಿಐ ಕಲಬುರಗಿ ಜಿಲ್ಲಾ ಸಹ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ, ಪದ್ಮಾವತಿ ಮಾಲಿಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT