ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ ಗಲಭೆ: ಪ್ರಮುಖ ಆರೋಪಿ ಗಡಿಪಾರು

ಬೆಳಗಾವಿ ಜೈಲಿಗೆ ಮಹಮದ್‌ ಫಿರ್ದೋಸ್‌ ಆರೀಫ್‌ ಅನ್ಸಾರಿ
Last Updated 28 ಮೇ 2022, 2:58 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದಲ್ಲಿ ಶಿವರಾತ್ರಿ ವೇಳೆ ನಡೆದ ಗಲಭೆಯ ಪ್ರಮುಖ ಆರೋಪಿ, ಆಳಂದ ಪುರಸಭೆ ಸದಸ್ಯ ಮಹಮ್ಮದ್ ಫಿರ್ದೊಸ್ ಆರೀಫ್‌ ಅನ್ಸಾರಿಗೆ (42) ಗಡಿಪಾರು ಮಾಡಲಾಗಿದೆ.

ಗಲಭೆ ಆರೋಪ ಹೊತ್ತು ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿದ್ದ ಅನ್ಸಾರಿಗೆ ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಗಡಿಪಾರು ಮಾಡಲಾಗಿದೆ.

ಆಳಂದದ ಲಾಡ್ಲೆ ಮಶಾಕ್‌ ದರ್ಗಾ ಆವರಣದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಕೆಲ ಕಿಡಿಗೇಡಿಗಳು ಅವಮಾನ ಮಾಡಿದ್ದರು. ಈ ಶಿವಲಿಂಗ ಶುದ್ಧೀಕರಣ ಮಾಡಬೇಕು ಎಂದು ಬಿಜೆಪಿ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಮಹಾಶಿವರಾತ್ರಿ (ಏಪ್ರಿಲ್‌ 25) ದಿನ ಬೃಹತ್‌ ಮೆರವಣಿಗೆ ನಡೆಸಿದ್ದರು. ಆಗ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿತ್ತು. ಹಲವರು ಗಾಯಗೊಂಡು, ಅಧಿಕಾರಿಗಳ ವಾಹನಗಳೂ ಜಖಂಗೊಂಡಿದ್ದವು. ಮತ್ತೆ ಕೆಲವರು ಖಡ್ಗ ಪ‍್ರದರ್ಶಿಸಿ, ಬೆದರಿಕೆ ಒಡ್ಡಿದ್ದರು. ಈ ಘಟನೆಯ ಹಿಂದೆ ಮಹಮ್ಮದ್ ಫಿರ್ದೊಸ್ ಆರೀಫ್‌ ಅನ್ಸಾರಿ ಪ್ರಮುಖ‍ಪಾತ್ರ ವಹಿಸಿದ್ದ ಎಂಬ ಆರೋಪದಡಿ ಬಂಧಿಸಲಾಗಿತ್ತು.

‘ಮುಂದಿನ ದಿನಗಳಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಒಂದು ವರ್ಷದವರೆಗೆ ಅನ್ಸಾರಿ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿಯೇ ಇರಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

‘ಘಟನೆಯ ನಂತರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ಅವರ ಮೇಲೆ ಫಿರ್ದೊಸ್ ಬೆಂಬಲಿಗರು ಹಲ್ಲೆ ಮಾಡಲು ಯತ್ನಿಸಿದ್ದರು. ಅವರ ವಾಹನ ಕೂಡ ಜಖಂಗೊಳಿಸಿದ್ದರು. ಹರ್ಷಾನಂದ ಮೇಲೆ ಫಿರ್ದೋಸ್‌ ದ್ವೇಷ ಸಾಧಿಸುತ್ತಿರುವ ಕಾರಣ ಅವರಿಗೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು
ತಿಳಿಸಿವೆ.

ಹಿನ್ನೆಲೆ ಏನು?: ಕಾಂಗ್ರೆಸ್‌ನಿಂದ ಆಳಂದ ಪುರಸಭೆ ಸದಸ್ಯರಾಗಿ ಆಯ್ಕೆಯಾದ ಫಿರ್ದೊಸ್ ಆರೀಫ್‌ ಅನ್ಸಾರಿ ಮೇಲೆ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. ದೊಂಬಿ, ಕಳ್ಳಬಟ್ಟಿ ತಯಾರಿಕೆ, ಔಷಧ ಅಪರಾಧ, ಜೂಜು, ಅನೈತಿಕ ವ್ಯವಹಾರ, ಕೊಳಚೆ ಪ್ರದೇಶದ ಅತಿಕ್ರಮಣ, ವಿಡಿಯೊ– ಆಡಿಯೊ ಪೈರಸಿ ಚಟುವಟಿಕೆಗಳ ತಡೆ ಅಧಿನಿಯಮ 1985ರ ಅಡಿಯಲ್ಲಿ ಈ ವ್ಯಕ್ತಿ ಆರೋಪ ಎದುರಿಸುತ್ತಿದ್ದಾರೆ.

ಗಡಿಪಾರು ಆದೇಶದಲ್ಲಿ ಸ್ವತಃ ಜಿಲ್ಲಾಧಿಕಾರಿ ‘ರೂಢಿಗತ ಅಪರಾಧಿ’ ಎಂದು ಉಲ್ಲೇಖ ಮಾಡಿದ್ದಾರೆ.

2012ರಲ್ಲಿ ರೌಡಿಶೀಟರ್‌ ಆಗಿದ್ದು, ಅನ್ಸಾರಿ ಮೇಲೆ ಆಳಂದ ಪೊಲೀಸ್‌ ಠಾಣೆಯಲ್ಲಿ ಈವರೆಗೆ 17 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 9 ನ್ಯಾಯಾಲಯದ ವಿಚಾರಣೆ ಹಂತದಲ್ಲಿದ್ದು, 8 ತನಿಖಾ ಹಂತದಲ್ಲಿವೆ.

ಸಮಾಜದಲ್ಲಿ ದೊಂಬಿ, ಒಳಸಂಚು, ಪಡ್ಡೆಗಳ ತಂಡ ಕಟ್ಟಿಕೊಂಡು ಗೂಂಡಾಗಿರಿ, ಕೊಲೆ ಯತ್ನ, ಹಲ್ಲೆ, ಜಾತಿ ನಿಂದನೆ, ಕೋಮುಗಲಭೆಗೆ ಪ್ರಚೋದನೆ ಸೇರಿದಂತೆ ವಿವಿಧ ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT