ಗುರುವಾರ , ಆಗಸ್ಟ್ 18, 2022
26 °C
ಸಿಯುಕೆ ಆಡಳಿತ ಕಚೇರಿ ಬಳಿ ಮೂರು ಗಂಟೆ ಪ್ರತಿಭಟನೆ

ಕಲಬುರಗಿ: ವಸತಿ ನಿಲಯಗಳ ಅವ್ಯವಸ್ಥೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಸತಿ ನಿಲಯಗಳ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಅನುದಾನವಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಸಮರ್ಪಕ ಕುಡಿಯುವ ನೀರು, ಊಟದ ವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸಿ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ವಿ.ವಿ. ಆಡಳಿತ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಶೌಚಾಲಯಗಳು ಒಡೆದು ಹೋಗಿದ್ದು, ಕೆಲವು ಹಲವು ದಿನಗಳಿಂದ ಬಳಕೆ ಮಾಡದಷ್ಟು ಕೆಟ್ಟು ಹೋಗಿವೆ. ಅವುಗಳನ್ನು ನಿಯಮಿತವಾಗಿ ಸ್ವಚ್ಛ ಮಾಡದೇ ಇರುವುದರಿಂದ ಕೊಳಕು ನಾರುತ್ತಿದೆ. ಆದ್ದರಿಂದ ಕೂಡಲೇ ಶೌಚಾಲಯ ಹಾಗೂ ಸ್ನಾನಗೃಹಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಿಗೆ ಮೆಸ್‌ನಲ್ಲಿ ಉತ್ತಮ ಗುಣಮಟ್ಟದ ಊಟವನ್ನು ಪೂರೈಕೆ ಮಾಡುತ್ತಿಲ್ಲ. ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಹಣಕ್ಕೆ ತಕ್ಕಂತೆ ಉತ್ತಮ ಊಟ, ಉಪಾಹಾರ ನೀಡುತ್ತಿಲ್ಲ. ಈ ಬಗ್ಗೆ ಮೆಸ್ ನಡೆಸುವವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಅಂಗವಿಕಲ ವಿದ್ಯಾರ್ಥಗಳ ಅನುಕೂಲಕ್ಕಾಗಿ ಉಚಿತ ಎಲೆಕ್ಟ್ರಾನಿಕ್ ವಾಹನವನ್ನು ಒದಗಿಸಬೇಕು. ವಾರ ಹಾಗೂ ವಾರಾಂತ್ಯದ ಸಮಯದಲ್ಲಿ ಗ್ರಂಥಾಲಯದ ಸಮಯವನ್ನು ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ತೆರೆಯಬೇಕು. ವಿದ್ಯಾರ್ಥಿನಿಯರ ವಸತಿ ನಿಲಯದ ಗೇಟುಗಳನ್ನು ಸದಾ ತೆರೆದಿರುವುದರಿಂದ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಅಲ್ಲದೇ, ವಿದ್ಯಾರ್ಥಿನಿಯರು ಭಯದಲ್ಲೇ ಇರುವಂತಾಗಿದೆ. ವಸತಿ ನಿಲಯಗಳ ಬಳಿ ಸ್ವಚ್ಛತೆ ಇಲ್ಲದೇ ಇರುವುದರಿಂದ ಹಾವುಗಳು ಬರುತ್ತಿವೆ. ಆದ್ದರಿಂದ ಕಸವನ್ನು ತೆರವುಗೊಳಿಸಬೇಕು ಎಂದರು.

ವಿದ್ಯಾರ್ಥಿನಿಯರಿಗೆ ನ್ಯಾಪ್‌ಕಿನ್ ಪೂರೈಕೆ ಮಾಡುವ ಯಂತ್ರಗಳನ್ನು ಅಗತ್ಯವಿರುವಲ್ಲಿ ಅಳವಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.