ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಭ್ರಷ್ಟಾಚಾರ ತಡೆಗೆ ತಾಕೀತು: ಪ್ರಿಯಾಂಕ್‌ ಖರ್ಗೆ

Published 22 ಮೇ 2023, 6:02 IST
Last Updated 22 ಮೇ 2023, 6:02 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಿಂದ ಸಂಪುಟ ದರ್ಜೆಯ ಏಕೈಕ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮಾಡಿದ ಎರಡನೇ ಟ್ವೀಟ್‌ನಲ್ಲಿಯೇ ಕಲಬುರಗಿ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಠಾಣೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಗ್ರಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

‌ಪೊಲೀಸ್ ಠಾಣೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಚೇತನ್ ಆರ್., ಎಸ್ಪಿ ಇಶಾ ಪಂತ್ ಅವರಿಗೆ ಖುದ್ದಾಗಿ ಸೂಚನೆ ನೀಡಿರುವ ಪ್ರಿಯಾಂಕ್, ‘ಠಾಣೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬಾರದು. ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಗಟ್ಟಬೇಕು. ಅಕ್ರಮ ಜೂಜು ಮತ್ತು ಬೆಟ್ಟಿಂಗ್ ದಂಧೆಗೆ ಬ್ರೇಕ್ ಹಾಕಬೇಕು. ಅಕ್ರಮ ಮರಳು ಗಣಿಗಾರಿಕೆ ಬಂದ್ ಮಾಡಬೇಕು. ಗಾಂಜಾ, ಡ್ರಗ್ಸ್‌ನಂತಹ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ದಂಧೆಗೆ ಕಡಿವಾಣ ಹಾಕಬೇಕು. ರೌಡಿಗಳು ಮತ್ತು ದ್ವೇಷ ಭಾಷಣ ಮಾಡುವವರನ್ನು ನಿಯಂತ್ರಿಸಬೇಕು. ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು’ ಎಂದು ತಿಳಿಸಿದ್ದಾರೆ.

‘ಪೊಲೀಸರು ಈ ಕುರಿತು ಕೈಗೊಳ್ಳುವ ಎಲ್ಲಾ ಕ್ರಮಗಳನ್ನು ನಾನೇ ಖುದ್ದು ಶೀಘ್ರವೇ ಪರಿಶೀಲಿನೆ ನಡೆಸಲಿದ್ದೇನೆ’ ಎಂದೂ ಪ್ರಿಯಾಂಕ್ ಹೇಳಿದ್ದಾರೆ.

ಹಿನ್ನೆಲೆ ಏನು?:

ಇತ್ತೀಚೆಗೆ ಕಲಬುರಗಿ ನಗರ ಹಾಗೂ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಜೊತೆಗೆ, ಪ್ರಿಯಾಂಕ್ ಅವರ ಆಪ್ತರು ಠಾಣೆಗಳಲ್ಲಿ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿರುವ, ಗಂಭೀರ ಪ್ರಕರಣಗಳನ್ನೂ ಉದಾಸೀನವಾಗಿ ನಿರ್ವಹಿಸುತ್ತಿರುವ ಹಾಗೂ ಮರಳು ಮಾಫಿಯಾದ ವಿರುದ್ಧ ಕಠಿಣ ಕ್ರಮ ಜರುಗಿಸದ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಮಾಹಿತಿ ನೀಡಿದ್ದರು.

ಅಲ್ಲದೇ, ಮರಳು ಮಾಫಿಯಾ, ಗಾಂಜಾ ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಕಲಬುರಗಿ ಗ್ರಾಮೀಣ ಠಾಣೆಯ ಸಿಪಿಐ ಆಗಿದ್ದ ಶ್ರೀಮಂತ ಇಲ್ಲಾಳ ಅವರು ಬೀದರ್–ಮಹಾರಾಷ್ಟ್ರ ಗಡಿಯಲ್ಲಿ ಗಾಂಜಾ ಅಕ್ರಮದ ಬಗ್ಗೆ ದಾಳಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಭೀಕರ ಹಲ್ಲೆಗೆ ಒಳಗಾಗಿದ್ದರು. ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ ಪೊಲೀಸ್ ಸಿಬ್ಬಂದಿ ಈ ಮಾಫಿಯಾ ಎದುರು ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕ್ ಖರ್ಗೆ ಅವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಮೂಲಗಳ ಪ್ರಕಾರ ಗೃಹ ಖಾತೆಯನ್ನು ಬಯಸಿದ್ದಾರೆ. ಹೀಗಾಗಿಯೇ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲೆಯಲ್ಲಿನ ಅಕ್ರಮಗಳನ್ನು ಮಟ್ಟ ಹಾಕಲು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT