ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆಗೆ ದ್ರೋಹ ಮಾಡಿದವರಿಗೆ ಮತ ಕೊಡಬೇಡಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ

ಸುಭಾಷ ರಾಠೋಡ ಪರ ಪ್ರಚಾರ ಸಭೆ
Last Updated 6 ಮೇ 2019, 15:24 IST
ಅಕ್ಷರ ಗಾತ್ರ

ಕಲಬುರ್ಗಿ: ‘ಉಮೇಶ ಜಾಧವ ನಿನಗೆ ರಾಜಕೀಯ ಜನ್ಮ ನೀಡಿದ ತಾಯಿ ಈ ಕಾಂಗ್ರೆಸ್ ಪಕ್ಷ. ಈ ಮಾತೆಗೇ ನೀನು ಮೋಸ ಮಾಡಿ ಹೋಗಿದ್ದೀಯಲ್ಲ; ಇದ್ಯಾವ ನ್ಯಾಯ ಹೇಳು?, ನಿನಗೆ ಪಕ್ಷದಲ್ಲಿ ಜಾಗ ಕೊಟ್ಟು, ಟಿಕೆಟ್ ಕೊಡಿಸಿ ಗೆಲ್ಲಿಸಿದವರ ವಿರುದ್ಧವೇ ಸ್ಪರ್ಧಿಸಿದ್ದೀಯಲ್ಲ ಇದೇನಾ ನಿನ್ನ ರಾಜಕೀಯ ಸಿದ್ಧಾಂತ..?’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಖಾರವಾಗಿ ಪ್ರಶ್ನಿಸಿದರು.

ಚಿಂಚೋಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಟೆಂಗಳಿ ಗ್ರಾಮದಲ್ಲಿ ಸೋಮವಾರ ಮೈತ್ರಿ ಪಕ್ಷಗಳ ಅಭ್ಯರ್ಥಿ ಸುಭಾಷ್ ರಾಠೋಡ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಈತನಿಗೆ ನಾನೇ ಎರಡು ಬಾರಿ ಪಕ್ಷದ ‘ಬಿ ಫಾರ್ಮ್’ ಕೊಟ್ಟಿದ್ದೇನೆ. ಆಗ ನನ್ನ ಮುಂದೆ ಬಂದಾಗಲೆಲ್ಲ ಈತ ಪದೇಪದೇ ಕಾಲಿಗೆ ಬೀಳುತ್ತಿದ್ದ. ಬೇಡಿಕೊಂಡು ತನ್ನ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತಿದ್ದ. ಆದರೆ, ಈಗ ನಮ್ಮ ಬೆನ್ನಿಗೇ ಚೂರಿ ಹಾಕಿದ್ದಾನೆ. ಇಂಥವರಿಗೆ ಮತ ಕೊಡಬೇಡಿ’ ಎಂದು ಹೇಳಿದರು.

‘ಮೊದಲ ಬಾರಿ ಶಾಸಕನಾದಾಗ ಅವನು ಸರಿಯಾಗೇ ಇದ್ದ. ಎರಡನೇ ಬಾರಿ ಆಯ್ಕೆ ಆದಾಗಲೂ ಎರಡು ತಿಂಗಳು ಸರಿ ಇದ್ದ. ಆ ಮೇಲೆ ಅವನಿಗೆ ಬಿಜೆಪಿ ರೋಗ ಬಡಿಯಿತು. ಈ ಬಿಜೆಪಿಯವರಿಗೆ ಒಂದು ಕಾಯಂ ರೋಗ ಇದೆ. ಹೇಗಾದರೂ ಮಾಡಿ ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಳ್ಳುವ ರೋಗ. ಇತ್ತೀಚೆಗೆ ಯಡಿಯೂರಪ್ಪ ಅವರಂತೂ ಹಗಲು– ರಾತ್ರಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಇವರು ಎಷ್ಟೇ ‘ಪಲ್ಟಿ’ ಹೊಡೆದರೂ ಸರ್ಕಾರ ‘ಬೀಳಿಸಲು’ ಸಾಧ್ಯವಿಲ್ಲ’ ಎಂದರು.

‘ಉಮೇಶ ಜಾಧವ ₹50 ಕೋಟಿ ಪಡೆದು ಬಿಜೆಪಿಗೆ ಸೇರಿದ್ದಾನೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ನನಗೇನೂ ಅಷ್ಟು ಗೊತ್ತಿಲ್ಲ. ಆದರೆ, ಜನರು ನೀಡಿದ ಮತಗಳನ್ನೇ ಮಾರಿಕೊಂಡು ಈತ ಹಣ ಮಾಡಿಕೊಂಡ ಎಂಬುದು ಮಾತ್ರ ಸತ್ಯ. ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿದ್ದು ನಾಚಿಕೆಗೇಡು’ ಎಂದು ಟೀಕಿಸಿದರು.

‘ಈಗ ಮೈತ್ರಿ ಪಕ್ಷದ ಅಭ್ಯರ್ಥಿ ಸುಭಾಷ್ ರಾಠೋಡ ಕೂಡ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಉಮೇಶ ಜಾಧವ ನಮಗೆ ಮೋಸ ಮಾಡಿದ ಹಾಗೆ ನೀನೂ ಮಾಡಬೇಡ ಎಂದು ಅವರಿಗೆ ಟಿಕೆಟ್‌ ಕೊಡುವ ಮುನ್ನ ತಾಕೀತು ಮಾಡಿದ್ದೇನೆ. ಹಾಗೆ ಮಾಡುವುದಿಲ್ಲ ಎಂದು ರಾಠೋಡ ಪ್ರಮಾಣ ಮಾಡಿದ್ದಾರೆ. ಇಂಥ ಪ್ರಾಮಾಣಿಕತೆಗೆ ನೀವು ಮತ ಕೊಡಬೇಕು’ ಎಂದು ಪರಮೇಶ್ವರ್‌ ಕೋರಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ‘ಉಮೇಶ ಜಾಧವ ಹಾಗೂ ಯಡಿಯೂರಪ್ಪ ಅವರ ಸ್ವಾರ್ಥದಿಂದಾಗಿ ಚಿಂಚೋಳಿಯಲ್ಲಿ ಉಪಚುನಾವಣೆ ನಡೆಯುತ್ತಿದೆ. ಇದು ಅನವಶ್ಯಕವಾಗಿತ್ತು. ಈ ಕ್ಷೇತ್ರದಲ್ಲಿ ಏನಾದರೂ ಕೆಲಸಗಳು ಆಗಿದ್ದರೆ ಕಾಂಗ್ರೆಸ್‌ ಸರ್ಕಾರದಿಂದ ಆಗಿವೆ. ಕೇವಲ ಜಾಧವ ಒಬ್ಬರಿಂದ ಏನೂ ಸಾಧ್ಯವಿಲ್ಲ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಅಭ್ಯರ್ಥಿ ಸುಭಾಷ್ ರಾಠೋಡ, ಸಚಿವ ರಹೀಂಖಾನ್ ಮಾತನಾಡಿದರು. ಸಚಿವರಾದ ರಾಜಶೇಖರ ಪಾಟೀಲ, ಪ್ರಿಯಾಂಕ್‌ ಖರ್ಗೆ, ಎಐಸಿಸಿ ಕಾರ್ಯದರ್ಶಿ ಸಾಕೆ ಸೈಲಜಾನಾಥ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

ಯಾರು ಏನೆಂದರು?

ರಾಜ್ಯದ ಮೈತ್ರಿ ಸರ್ಕಾರ ರೈತರ ₹ 45 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ₹7.5 ಸಾವಿರ ಕೋಟಿ ಸಾಲದ ಹಣ ಬಿಡುಗಡೆ ಮಾಡಿದ್ದಾರೆ. ಇದರಿಂದ 15 ಲಕ್ಷ ರೈತರಿಗೆ ನೆಮ್ಮದಿ ಸಿಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನೂ ಮನ್ನಾ ಮಾಡಿದ ದೇಶದ ಮೊದಲ ಸರ್ಕಾರ ನಮ್ಮದು.

–ಡಾ.ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ

* ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಪ್ರಾಬಲ್ಯವಿದೆ. ಆದರೂ ಬಿಜೆಪಿ ತಾವೇ ಗೆಲ್ಲುತ್ತೇವೆ ಎಂಬ ಹುಚ್ಚು ಹುಮ್ಮಸ್ಸಿನಲ್ಲಿದ್ದಾರೆ. ಮೇ 23ಕ್ಕೆ ಚುನಾವಣೆ ಫಲಿತಾಂಶ ಬರುತ್ತದೆ, 24ಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಈಗಲೇ ಸುಳ್ಳು ಪ್ರಚಾರ ನಡೆಸಿದ್ದಾರೆ.

–ದಿನೇಶ ಗುಂಡೂರಾವ್‌, ಅಧ್ಯಕ್ಷ, ಕೆಪಿಸಿಸಿ

* ಚಿಂಚೋಳಿಯಲ್ಲಿ ನಡೆಯುತ್ತಿರುವುದು ನನ್ನ ಮತ್ತು ಅವಿನಾಶ ಜಾಧವ ಅವರ ಮಧ್ಯದ ಚುನಾವಣೆ ಅಲ್ಲ. ಮುಗ್ಧ ಮತದಾರರು ಹಾಗೂ ಮೋಸಗಾರ ಡಾ.ಉಮೇಶ ಜಾಧವ ಮಧ್ಯೆ ನಡೆಯುತ್ತಿದೆ. ನನ್ನನ್ನು ಆಯ್ಕೆ ಮಾಡಿದರೆ ಏನು ಕೆಲಸ ಮಾಡುತ್ತೇನೆ ಎಂದು ಈಗ ಹೇಳಲಾರೆ. ಆದರೆ, ಅವರ ಹಾಗೆ ನಾನೆಂದೂ ನಿಮಗೆ ಮೋಸ ಮಾಡುವುದಿಲ್ಲ.

–ಸುಭಾಷ ರಾಠೋಡ, ಕಾಂಗ್ರೆಸ್‌ ಅಭ್ಯರ್ಥಿ

* ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲ, ದೇವೇಂದ್ರಪ್ಪ ಕಾಳಪ್ಪ ಅವರಂಥ ಧೀಮಂತರು ಪ್ರತಿನಿಧಿಸಿದ ಕ್ಷೇತ್ರ ಚಿಂಚೋಳಿ. ಇಲ್ಲಿನ ಮತದಾರರು ಎಷ್ಟು ಜಾಗೃತರು ಎಂಬುದಕ್ಕೆ ಅವರು ಆಯ್ಕೆ ಮಾಡಿದ ವ್ಯಕ್ತಿಗಳು ಸಾಕ್ಷಿಯಾಗಿದ್ದಾರೆ. ಈ ಕ್ಷೇತ್ರಕ್ಕೆ ದೊಡ್ಡ ಇತಿಹಾಸವಿದೆ. ಈಗ ಮೋಸಗಾರರನ್ನು ಸೋಲಿಸಿ, ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸುವ ಮೂಲಕ ಮತ್ತೊಂದು ಇತಿಹಾಸ ಬರೆಯಬೇಕು.

–ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷ, ಕೆಪಿಸಿಸಿ

* ಈ ಹಿಂದಿನ ಎಲ್ಲ ಚುನಾವಣೆಗಳಲ್ಲೂ ಚಿಂಚೋಳಿ ಕ್ಷೇತ್ರದಲ್ಲಿ ನಮಗೆ ಅತಿ ಕಡಿಮೆ ಮತಗಳು ಬಂದಿವೆ. ಏಕೆ ಎಂದು ಗೊತ್ತಾಗುತ್ತಿಲ್ಲ. ಈ ಬಾರಿ ಅಂಥ ತಪ್ಪು ಮಾಡಬೇಡಿ. ಸುಳ್ಳುಬುರುಕರಿಗೆ ನಿಮ್ಮ ಮತ ಕೊಡಬೇಡಿ.

–ಮಲ್ಲಿಕಾರ್ಜುನ ಖರ್ಗೆ, ಸಂಸದ

ಇವರನ್ನಲ್ಲ; ಇವರ ಗುರುಗಳನ್ನೇ ವಿಚಾರಿಸಿಕೊಳ್ಳುತ್ತೇನೆ?

ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಎಂದಿನಂತೆ ಚುನಾವಣಾ ಪ್ರಚಾರದಲ್ಲಿ ತಿಳಿಹಾಸ್ಯದ ಮೂಲಕ ಮತದಾರರನ್ನು ನಗೆಗಡಲಲ್ಲಿ ತೇಲಿಸಿದರು.

ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆದ ಖರ್ಗೆ, ‘ನಾನು ಈಗ ಇಲ್ಲಿನವರ (ಉಮೇಶ ಜಾಧವ) ಬಗ್ಗೆ ಏನೂ ಮಾತನಾಡುವುದಿಲ್ಲ. ಇವರ ಗುರು (ಮೋದಿ) ಇದ್ದಾರಲ್ಲ; ಆ ಗುರುಗಳನ್ನೇ ಸಂಸತ್ತಿನಲ್ಲಿ ವಿಚಾರಿಸಿಕೊಳ್ಳುತ್ತೇನೆ’ ಎಂದಾಗ ಸಭೆಯಲ್ಲಿ ನಗೆಯ ಅಲೆ ತೇಲಿತು.

‘ಮನೆ ಮರ್ಯಾದೆ ಹಾಳು ಮಾಡಿ ಅವರು ಮನೆ ಬಿಟ್ಟು ಹೋಗಿದ್ದಾರೆ. ಮತ್ತೆ ಬಂದರೆ ಮನೆ ಸೇರಿಸಿಕೊಳ್ಳಬೇಡಿ. ತಪ್ಪು ಮಾಡಿದವರನ್ನು ಶಿಕ್ಷಿಸಿ, ಕೆಲಸ ಮಾಡುವವರನ್ನು ರಕ್ಷಿಸಿ’ ಎಂದು ಸೂಜಿಮೊನೆ ತಾಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT