ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಸಭೆ ಅಧಿವೇಶನ ನಡೆಸಲು ಆಗ್ರಹ

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ
Published 15 ಸೆಪ್ಟೆಂಬರ್ 2023, 16:02 IST
Last Updated 15 ಸೆಪ್ಟೆಂಬರ್ 2023, 16:02 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ 75ನೇ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ, ಕಲಬುರಗಿಯಲ್ಲಿ ವಿಧಾನಸಭೆ ಅಧಿವೇಶನ ಮತ್ತು ಸಂಪುಟ ಸಭೆ ನಡೆಸಿ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 371 (ಜೆ) ಕಾಯ್ದೆಯ ದಶಮಾನೋತ್ಸವದ ಸಂಭ್ರಮವೂ ಇದೆ. ಸಂವಿಧಾನದ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಪ್ರಾದೇಶಿಕ ಅಸಮತೋಲನ ನಿವಾರಣೆ, 371 (ಜೆ) ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಕಲ್ಯಾಣದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮಹತ್ವದ ನಿರ್ಣಯ ಕೈಗೊಳ್ಳಬೇಕು. ಇದಕ್ಕಾಗಿ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರಸ್ತುತ ಅಮೃತ ಮಹೋತ್ಸವದ ನಿಮಿತ್ತ ಕನಿಷ್ಠ ಒಂದು ವಾರ ‘ವಿಧಾನ ಮಂಡಲ ಅಧಿವೇಶನ’ ನಡೆಸಬೇಕು. ಪ್ರತಿ ವರ್ಷ ಫೆಬ್ರವರಿ ಮತ್ತು ನವೆಂಬರ್‌ನಲ್ಲಿ ಸಂಪುಟ ಸಭೆಗಳನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ಕಲ್ಯಾಣದ ವಿಭಾಗೀಯ ಕೇಂದ್ರದಲ್ಲಿ 371(ಜೆ) ಕುರಿತಂತೆ ಪ್ರಾದೇಶಿಕ ಸಚಿವಾಲಯ ನಿರ್ಮಿಸಬೇಕು. ಬಿಜೆಪಿ ಸರ್ಕಾರವಿದ್ದಾಗ, ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಕೇವಲ ಭರವಸೆಗಳನ್ನು ನೀಡಿದರು. ಆದರೆ ಕಲ್ಯಾಣದ ಕುರಿತು ಕಳಕಳಿಯಿರುವ ಸಿದ್ದರಾಮಯ್ಯ ಅವರ ಸರ್ಕಾರವಾದರೂ ಕಲಬುರಗಿಯಲ್ಲಿ 371(ಜೆ) ಕುರಿತ ಸಚಿವಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಯವರನ್ನು ಆಹ್ವಾನಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿವಿಧ ರೂಪುರೇಷೆ ರಚಿಸಿದ್ದಾರೆ. ಅದನ್ನು ನಮ್ಮ ಹೋರಾಟ ಸಮಿತಿ ಸ್ವಾಗತಿಸುತ್ತದೆ. ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್ ಅವರು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆ ಒಂದು ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಆರ್.ಕೆ. ಹುಡಗಿ, ಡಾ.ಮಾಜೀದ್ ದಾಗಿ, ಲಿಂಗರಾಜ ಸಿರಗಾಪುರ, ಬಸವರಾಜ, ಮನೀಷ ಜಾಜು, ಜ್ಞಾನಮಿತ್ರ ಸಾಮ್ಯುವೆಲ್, ಅಬ್ದುಲ್ ರಹೀಂ, ಅಸ್ಲಂ ಚೌಂಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT