ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕೆ ಸನ್ಮಾರ್ಗ ತೋರುವ ವಚನಗಳು: ದತ್ತಾತ್ರೇಯ ಪಾಟೀಲ

ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮ
Last Updated 7 ಏಪ್ರಿಲ್ 2022, 4:25 IST
ಅಕ್ಷರ ಗಾತ್ರ

ಕಲಬುರಗಿ: ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಒಬ್ಬ ಮಹಾನ್ ವಚನಕಾರರಾಗಿದ್ದು, ಅವರ ವಚನಗಳನ್ನು ಆದರ್ಶವಾಗಿಟ್ಟುಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅಭಿಪ್ರಾಯಪಟ್ಟರು.

ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಡೆದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವರ ದಾಸಿಮಯ್ಯ ಅವರ ಆದರ್ಶ, ತತ್ವಗಳು ಸಮಾಜಕ್ಕೆ ದಾರಿದೀಪವಾಗಿದೆ. 12ನೇ ಶತಮಾನದ ಶರಣರಲ್ಲಿ ಇವರು ಪ್ರಮುಖರು. ಶರಣ ಸಂಸ್ಕೃತಿಗೆ ನಾಂದಿ ಹಾಡಿದ ಆದ್ಯ ವಚನಕಾರರು ಇವರಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದವರಲ್ಲಿ ಇವರು ಮೊದಲಿಗರು ಎಂದರು.

‘ನಗರದಲ್ಲಿ ದೇವರ ದಾಸಿಮಯ್ಯ ಸಮಾಜದ ಭವನಕ್ಕೆ ಈಗಾಗಲೇ ₹5 ಲಕ್ಷ ಅನುದಾನ ನೀಡಲಾಗಿದೆ. ಇದು ಸಾಲದು, ಇನ್ನು ಹೆಚ್ಚಿನ ಅನುದಾನ ಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದ್ದಾರೆ. ಹೀಗಾಗಿ ಇನ್ನೂ ₹5 ಲಕ್ಷ ನೀಡುವುದಾಗಿ ಇಲ್ಲಿಯೇ ಘೋಷಿಸುತ್ತೇನೆ’ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಎಲ್ಲಾ ಶರಣರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಅದರಲ್ಲಿ ಶ್ರೀ ದೇವರ ದಾಸಿಮಯ್ಯನವರ ಪ್ರತಿಮೆ ಸಹ ಇರಲಿದೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಸಂಗಮೇಶ ಉಪಾಸೆ ಮಾತನಾಡಿ, ದೇವರ ದಾಸಿಮಯ್ಯ ಅವರ ವಚನಗಳಲ್ಲಿ ಸಮಾನತೆ, ಜಾತಿ, ಹೆಣ್ಣಿನ ಕುರಿತು ಸೊಗಸಾಗಿ ಉಲ್ಲೇಖಿಸಿದ್ದಾರೆ. ಜಯಂತಿಗಳು ಸಮುದಾಯಕ್ಕೆ ಸೀಮಿತವಾಗಬಾರದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್ ಮಾತನಾಡಿ, ದೇವರ ದಾಸಿಮಯ್ಯನವರು ವಚನಗಳ ಮುಖಾಂತರ ಪ್ರಸಿದ್ಧಿ ಹೊಂದಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ಕರ್ಮ ಭೂಮಿಯಲ್ಲಿ ಇರುವ ನಾವೇ ಭಾಗ್ಯವಂತರು ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಸಬರದ ಅವರು ವಿಶೇಷ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯ ಪರಂಪರೆಗೆ ವಚನ ಸಾಹಿತ್ಯದ ಕೊಡುಗೆ ಬಗ್ಗೆ ವಿವರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ತಹಶೀಲ್ದಾರ್ ಜಗದೀಶ್ ಎಸ್. ಚೌರ್, ದೇವರ ದಾಸಿಮಯ್ಯ ಸಮಾಜದ ಅಧ್ಯಕ್ಷ ಶಿವಪುತ್ರ ಭಾವಿ, ಪ್ರಧಾನ ಕಾರ್ಯದರ್ಶಿ ಸತೀಶಕುಮಾರ ಜಮಖಂಡಿ, ಮುಖ್ಯ ಸಂಚಾಲಕ ಶಿವಲಿಂಗಪ್ಪಾ ಅಷ್ಟಗಿ, ಸಹ ಸಂಚಾಲಕ ವಿನೋದಕುಮಾರ ಜೇನವರಿ, ಪ್ರೊ. ಶಿವನಂದ ಅಣಜಿಗಿ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT