ಸ್ಕೇಟಿಂಗ್‌ ರಿಂಗ್‌ ನಿರ್ಮಾಣಕ್ಕೆ ನಿರ್ಧಾರ

7
ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಸಮಿತಿ ಸಭೆ: ಸುಬೋದ್‌ ಯಾದವ್‌ ಸೂಚನೆ

ಸ್ಕೇಟಿಂಗ್‌ ರಿಂಗ್‌ ನಿರ್ಮಾಣಕ್ಕೆ ನಿರ್ಧಾರ

Published:
Updated:
Deccan Herald

ಕಲಬುರ್ಗಿ: ಇಲ್ಲಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ₹40 ಲಕ್ಷ ವೆಚ್ಚದಲ್ಲಿ ಸ್ಕೇಟಿಂಗ್ ರಿಂಕ್ ನಿರ್ಮಿಸಲು ಜಿಲ್ಲಾ ಕ್ರೀಡಾಂಗಣ ಸಮಿತಿ ನಿರ್ಧರಿಸಿದೆ.

ಶುಕ್ರವಾರ ಇಲ್ಲಿ ನಡೆದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತ ಸುಬೋದ್‌ ಯಾದವ್‌, ಎಚ್‌ಕೆಆರ್‌ಡಿಬಿಯಿಂದ ₹20 ಲಕ್ಷ ನೀಡಲಾಗುವುದು. ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅನುದಾನ ಪಡೆದುಕೊಳ್ಳಲಾಗುವುದು ಎಂದರು.

ಕ್ರೀಡಾಂಗಣದಲ್ಲಿ ಪ್ರತ್ಯೇಕ ಫುಟ್‌ಬಾಲ್‌ ಮತ್ತು ಕ್ರಿಕೆಟ್ ಮೈದಾನದ ಕೊರತೆ ಇದೆ. ಈಜುಕೊಳ ಹಿಂದುಗಡೆ ಲೋಕೋಪಯೋಗಿ ಇಲಾಖೆಗೆ ಸೇರಿದ 7 ಎಕರೆ ನಿವೇಶನ ಲಭ್ಯವಿದ್ದು, ಅದನ್ನು ಪಡೆದು ಅಲ್ಲಿ ಕ್ರಿಕೆಟ್ ಮತ್ತು ಫುಟ್‌ಬಾಲ್‌ ಮೈದಾನ ನಿರ್ಮಿಸಬಹುದಾಗಿದೆ. ಈ 7 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಉಚಿತವಾಗಿ ನೀಡಲು ಲೋಕೋಪಯೋಗಿ ಇಲಾಖೆಗೆ ಕೋರಿಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಕ್ರೀಡಾಂಗಣದಲ್ಲಿನ ಮಕ್ಕಳ ಈಜುಕೊಳ ದುರಸ್ತಿ ಮಾಡಿದರೂ ಸಹ ಈಜುಕೊಳದಲ್ಲಿನ ನೀರು ಸೋರಿಕೆಯಾಗುತ್ತಿದ್ದು, ಒಂದು ವಾರದೊಳಗೆ ದುರಸ್ತಿ ಮಾಡಬೇಕು. ಕ್ರೀಡಾಂಗಣದಲ್ಲಿ ನೀರಿನ ಓವರ್‌ ಹೆಡ್ ಟ್ಯಾಂಕ್ ನಿರ್ಮಿಸಲಾಗಿದ್ದು, ಪೈಪ್‌ಲೈನ್‌ ಸಂಪರ್ಕ ಕಲ್ಪಿಸಬೇಕು ಎಂದರು.

ನಿರ್ಮಿತಿ ಕೇಂದ್ರದ ಅಧಿಕಾರಿಗಳು ಜಿಲ್ಲಾ ಕ್ರೀಡಾಧಿಕಾರಿಗಳೊಂದಿಗೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯು ಜಂಟಿ ಸಮೀಕ್ಷೆ ನಡೆಸಬೇಕು. ಪೂರ್ಣಗೊಳ್ಳದ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಬೇಕು. ಸಣ್ಣ ಪುಟ್ಟ ದುರಸ್ತಿಗಳಿದ್ದಲ್ಲಿ ಅದನ್ನೂ ಸಹ ಮಾಡಬೇಕು. ಶೌಚಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕ್ಯಾಂಟಿನ್ ಪ್ರಾರಂಭಿಸಲು ಕೂಡಲೆ ಟೆಂಡರ್ ಕರೆಯಬೇಕು ಎಂದು ಸೂಚಿಸಿದರು.

ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾಂಗಣದಲ್ಲಿ ಫುಟ್‌ಬಾಲ್, ಹಾಕಿ, ಸಿಂಥೆಟಿಕ್ ಹಾಗೂ ಕುಸ್ತಿ ಹಾಲ್ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮೇಯರ್‌ ಶರಣಕುಮಾರ ಮೋದಿ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಏಕಾಂತಪ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಸ್ನೇಹಲ್ ಸುಧಾಕರ ಲೋಕಂಡೆ ಇದ್ದರು.

 ಸಮಿತಿಗೆ ಕ್ರೀಡಾಪಟುಗಳು

ಜಿಲ್ಲಾ ಕ್ರೀಡಾಂಗಣ ಸಮಿತಿಯಲ್ಲಿ ಕ್ರೀಡಾ ಕ್ಷೇತ್ರದ ಸದಸ್ಯರಿಲ್ಲ. ಹೀಗಾಗಿ ಕ್ರೀಡಾ ಕ್ಷೇತ್ರದಿಂದ ಸದಸ್ಯರನ್ನು ನೇಮಕ ಮಾಡಬೇಕು. ಈ ಸಮಿತಿಗೆ ಪೂರಕವಾಗಿ ಜಿಲ್ಲಾ ಕ್ರೀಡಾಂಗಣ ಕಾರ್ಯನಿರ್ವಾಹಕ ಸಮಿತಿ ರಚಿಸಬೇಕು. ಆ ಮೂಲಕ ಕಾಮಗಾರಿಗಳ ಅನುಷ್ಠಾನದ ಮೇಲೆ ತೀವ್ರ ನಿಗಾವಹಿಸಲು ಸಾಧ್ಯವಾಗುತ್ತದೆ. ಬಳಕೆದಾರರನ್ನು ಸಮಿತಿಗೆ ನೇಮಿಸಿದ್ದಲ್ಲಿ ಅವರ ಸಹಭಾಗಿತ್ವದಿಂದ ಕ್ರೀಡಾ ಸೌಲಭ್ಯಗಳನ್ನು ಇನ್ನಷ್ಟು ಉತ್ಕೃಷ್ಟಗೊಳಿಸಬಹುದಾಗಿದೆ ಎಂದು ಸುಬೋದ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !