ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ ಹಂಚಿಕೆಯಲ್ಲಿ ರಾಜಕೀಯ ಬೇಡ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಸೂಚನೆ
Last Updated 20 ಜೂನ್ 2018, 9:12 IST
ಅಕ್ಷರ ಗಾತ್ರ

ಸೇಡಂ: ‘ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನರ ಕೆಲಸಗಳಲ್ಲಿ ರಾಜಕೀಯ ಮಾಡದೇ, ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಥಮ ಆದ್ಯತೆ ಕೊಡಬೇಕು’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ‘ಪ್ರಧಾನಮಂತ್ರಿ ಆವಾಸ್’ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಯೋಜನೆಯ ಸರ್ವೆ ಮಾಡುವಲ್ಲಿ ಮತ್ತು ಹಂಚಿಕೆಯಲ್ಲಿ ಅಧಿಕಾರಿಗಳು ರಾಜಕೀಯ ಮಾಡ ಬಾರದು. ಜಾತಿ, ಧರ್ಮ, ಪಕ್ಷ ಬೇಧ ಮರೆತು ನಿಜವಾದ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ನಿಷ್ಪಕ್ಷಪಾತ ಕೆಲಸ ಮಾಡಬೇಕು. ಒಂದು ವೇಳೆ ಅಧಿಕಾರಿಗಳು ತಾರತಮ್ಯದ ಕೆಲಸ ಮಾಡುತ್ತಿರುವುದು ಕಂಡುಬಂದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾರಪೂರ್ತಿ ಪಂಚಾಯಿತಿ ಕಚೇರಿ ಯಲ್ಲಿ ಕೆಲಸ ಮಾಡಬೇಕು. ಯಾವುದಾದರೂ ಸಭೆ ನಡೆಸುವುದಿದ್ದಲ್ಲಿಸಂಜೆನಡೆಸಬೇಕು. ಕಚೇರಿಯ ಅವಧಿಯಲ್ಲಿ ಯಾವುದೇ ಸಭೆಗಳನ್ನು ನಿಗದಿಪಡಿಸುವುದು ಸೂಕ್ತವಲ್ಲ. ಜನರನ್ನು ಅಲೆದಾಡಿಸಿದೇ ಜನಸ್ನೇಹಿಯಾಗಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಕ್ಷೇತ್ರದಲ್ಲಿ ಸಾವಿರಾರು ಬಡವರು ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಕಡೆಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅರ್ಜಿಗಳು ಸಲ್ಲಿಕೆಯಾಗುವಲ್ಲಿ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ನಿರ್ಧಿಷ್ಟ ಸಮಯಕ್ಕೆ ಬಡವರ ಅರ್ಜಿಗಳು ಸಲ್ಲಿಕೆಯಾಗದೇ ಇದ್ದಲ್ಲಿ ನೇರವಾಗಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ, ‘ನರೇಗಾ’ ಸಹಾಯಕ ನಿರ್ದೇಶಕ ಬಸವರಾಜ ಶರಬೈ ಇದ್ದರು.

ವಿಧಾನ ಸಭಾ ವ್ಯಾಪ್ತಿಯ ಪಂಚಾಯಿತಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸದಸ್ಯರು ಹೊಂದಾಣಿಕೆಯಿಂದ ಜನರ ಸಮಸ್ಯೆ ಬಗೆಹರಿಸಬೇಕು
– ರಾಜಕುಮಾರ ಪಾಟೀಲ ತೆಲ್ಕೂರ , ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT