ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ

Last Updated 16 ಫೆಬ್ರುವರಿ 2021, 9:21 IST
ಅಕ್ಷರ ಗಾತ್ರ

ಕಲಬುರ್ಗಿ‌: ವಿಜಯಪುರ ಮಾರ್ಗವಾಗಿ ಲೋಕಾಪುರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಬರುವ ಜೇವರ್ಗಿ ತಾಲ್ಲೂಕಿನ ಸೊನ್ನ ಕ್ರಾಸ್ ಹತ್ತಿರದ ಟೋಲ್ ನಾಕಾದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ಫಾಸ್ಟ್ ಟ್ಯಾಗ್ ಇಲ್ಲದಿದ್ದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನಂತರ ವಾಹನಗಳ ಸಂಚಾರಕ್ಕೆ ಯಾವುದೇ ತರಹದ ತೊಂದರೆ ಉಂಟಾಗಿಲ್ಲ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ದುಪ್ಪಟ್ಟು ಶುಲ್ಕ ಪಾವತಿಸಬೇಕಿದೆ. ಸ್ಥಳದಕ್ಕೇ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಅನುವಾಗುವಂತೆ ಟೋಲ್ ನಾಕಾ ಪಕ್ಕದಲ್ಲಿ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಫಾಸ್ಟ್ ಟ್ಯಾಗ್ ಹೊಂದಿದ ವಾಹನಗಳಿಗೆ ಒಂದು ರಸ್ತೆ, ಇಲ್ಲದ ವಾಹನಗಳಿಗೆ ಶುಲ್ಕ ಪಾವತಿಸುವ ರಸ್ತೆ ಪ್ರತ್ಯೇಕಗೊಳಿಸಲಾಗಿದೆ.

ದುಪ್ಪಟ್ಟು ಶುಲ್ಕ: ಫಾಸ್ಟ್ ಟ್ಯಾಗ್ ಹೊಂದಿರದ 4 ಆಕ್ಸೆಲ್ ಲಾರಿಗಳಿಗೆ ₹ 370ರಿಂದ ₹ 740ಕ್ಕೆ ಶುಲ್ಕ ಹೆಚ್ಚಿಸಲಾಗಿದೆ. ಸರ್ಕಾರಿ ಬಸ್‌ಗಳಿಗೆ ₹ 235ರಿಂದ ₹ 470, ಕಾರು, ಜೀಪ್‌ಗಳಿಗೆ ₹ 70ರಿಂದ ₹ 140, ಸರಕು ಸಾಗಣೆ ಮಾಹನಗಳಿಗೆ ₹ 115ರಿಂದ ₹ 230, 3 ಆಕ್ಸೆಲ್ ವಾಹನಗಳಿಗೆ ₹ 260ರಿಂದ ₹ 520ಕ್ಕೆ ಹೆಚ್ಚಳ ಮಾಡಲಾಗಿದೆ.

ಗ್ರಾಮಸ್ಥರಿಗೆ ಶುಲ್ಕ ರಿಯಾಯಿತಿ: ಟೋಲ್ ನಾಕಾ ಸುತ್ತಲು 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ನೆಲೋಗಿ, ಸೊನ್ನ, ಕಲ್ಲಹಂಗರಗಾ, ಮಾವನೂರ ಹಾಗೂ ಹರವಾಳ ಗ್ರಾಮಸ್ಥರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂದು ಸೊನ್ನ ಗ್ರಾಮದ ವಾಹನ ಮಾಲೀಕ ಮಲ್ಲಿಕಾರ್ಜುನ ಬಿರಾದಾರ ತಿಳಿಸಿದ್ದಾರೆ.

ಕಲಬುರ್ಗಿಯಿಂದ ಆಳಂದಕ್ಕೆ ತೆರಳುವ ಪಟ್ಟಣ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ಗೇಟ್‌ನಲ್ಲಿ ಇನ್ನೂ ಫಾಸ್ಟ್ ಟ್ಯಾಗ್ ಅಳವಡಿಸಿಲ್ಲ. ಹೀಗಾಗಿ, ಎಂದಿನಂತೆ ಸಾಮಾನ್ಯ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT