ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಪ್ರಯಾಣಿಕರ ಶುದ್ಧ ಕುಡಿವ ನೀರಿಗೆ ಬರ

ಐಆರ್‌ಸಿಟಿಸಿಗೆ ನೀಡಿದ್ದ ಟೆಂಡರ್ ರದ್ದಾಗಿದ್ದರಿಂದ ಸ್ಥಗಿತ; ಪ್ರಯಾಣಿಕರು ಬಾಟಲ್‌ ನೀರಿಗೆ ಮೊರೆ
Last Updated 12 ಡಿಸೆಂಬರ್ 2022, 6:26 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಿದ್ದ ಕಡಿಮೆ ಹಣ ಪಾವತಿಸಿ ನೀರು ಪಡೆಯುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತವಾಗಿವೆ. ಪರ್ಯಾಯವಾಗಿ ನಲ್ಲಿ ವ್ಯವಸ್ಥೆ ಇದ್ದರೂ ಪ್ರಯೋಜನವಿಲ್ಲ. ಇದರಿಂದ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ದೊರೆಯದಂತಾಗಿದೆ.

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಒಟ್ಟು 5 ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ವಾಟರ್ ವೆಂಡಿಂಗ್ ಮಷಿನ್) ಅಳವಡಿಸಲಾಗಿದೆ. ನಿರ್ವಹಣೆ ಜವಾಬ್ದಾರಿಯನ್ನು ಇಂಡಿಯನ್ ರೈಲ್ವೆ ಕೆಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ)ಗೆ ವಹಿಸಲಾಗಿತ್ತು. ಇವುಗಳ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಸುರಕ್ಷಿತ ಮತ್ತು ತಂಪಾದ ಶುದ್ಧ ಕುಡಿಯುವ ನೀರನ್ನು ಪ್ರಯಾಣಿಕರು ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಈ ಎಲ್ಲ ಘಟಕಗಳು ಕಾರ್ಯಾಚರಣೆ ನಿಲ್ಲಿಸಿವೆ.

ಮಷಿನ್‌ಗಳ ಮೂಲಕ ಪ್ರಯಾಣಿಕರಿಗೆ ₹ 1ಗೆ 300 ಮಿ.ಲೀ., ₹ 3ಗೆ ಅರ್ಧ ಲೀಟರ್, ₹ 5ಕ್ಕೆ ಒಂದು ಲೀಟರ್‌‌, ₹ 8ಗೆ ಎರಡು ಲೀಟರ್‌‌‌, ₹ 20ಕ್ಕೆ ಐದು ಲೀಟರ್‌‌‌ ಶುದ್ಧ ನೀರನ್ನು ಕೊಡಲಾಗುತ್ತಿತ್ತು. ಅದೇ ರೀತಿ ಬಾಟಲ್ ಅಥವಾ ಗ್ಲಾಸ್ ಸಹಿತ ₹ 2ಗೆ 300 ಮಿ.ಲೀ., ₹ 5ಗೆ ಅರ್ಧ ಲೀಟರ್, ₹ 8 ಗೆ ಒಂದು ಲೀಟರ್‌‌, ₹ 12ಕ್ಕೆ ಎರಡು ಲೀಟರ್‌‌‌, ₹ 25ಕ್ಕೆ ಐದು ಲೀಟರ್‌‌‌ ಶುದ್ಧ ನೀರನ್ನು ನೀಡಲಾಗುತ್ತಿತ್ತು. ಅಲ್ಲದೇ, ಪ್ರಯಾಣಿಕರೇ ದಿನದ 24 ಗಂಟೆ ₹ 5 ಮುಖಬೆಲೆಯ ನಾಣ್ಯವನ್ನು ಮಷಿನ್‌ನಲ್ಲಿ ಹಾಕಿ 1 ಲೀಟರ್ ನೀರನ್ನು ಪಡೆಯುತ್ತಿದ್ದರು.

ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾಚರಣೆ ನಿಲ್ಲಿಸಿರುವುದರಿಂದ ಹಾಳಾಗುತ್ತಿವೆ. ನಾಣ್ಯ ಹಾಕಿ ನೀರು ತುಂಬುವ ಸ್ಥಳಗಳಲ್ಲಿ ದುಷ್ಕರ್ಮಿಗಳು ಗುಟ್ಕಾ ತಿಂದು ಉಗುಳುತ್ತಿದ್ದಾರೆ. ಇದರಿಂದ ಕೆಲ ಭಾಗಗಳು ತುಕ್ಕು ಹಿಡಿಯುತ್ತಿವೆ.

ಕಲಬುರಗಿ–ಬೀದರ್‌ ಮಧ್ಯದ ಕಮಲಾಪುರ ರೈಲು ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಕ್ಕದಲ್ಲಿ ಬೋರ್‌ವೆಲ್ ತೋಡಿಸಿದ್ದು, ಅದರಿಂದ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಒಂದು ನಲ್ಲಿ ಅಳವಡಿಸಿ ಅದರಿಂದ ಪ್ರಯಾಣಿಕರಿಗೆ ನೀರು ಒದಗಿಸಲಾಗುತ್ತಿದೆ. ನಾಲ್ಕೈದು ಕಡೆಗಳಲ್ಲಿ ನೀರು ಸರಬರಾಜಿನ ತೊಟ್ಟಿ ಅಳವಡಿಸಲಾಗಿದೆ. ಆದರೆ, ಅವುಗಳಿಗೆ ನೀರು ಸರಬರಾಜಿಗೆ ಸಂಪರ್ಕ ಒದಗಿಸಿಲ್ಲ.

ಪ್ರಮುಖವಾಗಿ ಕಲಬುರಗಿ, ಸಾವಳಗಿ, ಗಾಣಗಾಪುರ ರೋಡ್‌, ಶಹಾಬಾದ್‌, ವಾಡಿ, ನಾಲವಾರ, ಚಿತ್ತಾಪುರ, ಮಳಖೇಡ ರೋಡ್‌, ಕಮಲಾಪುರ ಸೇರಿದಂತೆ ಎಲ್ಲ ರೈಲು ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಕೋವಿಡ್ ನಂತರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ಪ್ರತಿದಿನ 12 ಸಾವಿರ ಜನ ಪ್ರಯಾಣ

ಕಲಬುರಗಿ ರೈಲು ನಿಲ್ದಾಣದಿಂದ ಪ್ರತಿದಿನ ಸರಾಸರಿ 10-12 ಸಾವಿರ ಜನ ಪ್ರಯಾಣ ಮಾಡುತ್ತಾರೆ. ಇಷ್ಟೇ ಪ್ರಮಾಣದ ಜನ ನಿಲ್ದಾಣಕ್ಕೆ ಆಗಮಿಸಬಹುದು ಎಂದು ಕಲಬುರಗಿ ರೈಲು ನಿಲ್ದಾಣದ ವಾಣಿಜ್ಯ ನಿರೀಕ್ಷಕ ಸುಬೋಧಕುಮಾರ ಮಾಹಿತಿ ನೀಡಿದರು.

ನಿಲ್ದಾಣದಿಂದ ದಿನನಿತ್ಯ ತೆರಳುವ ಪ್ರಯಾಣಿಕರಿಂದ ಸುಮಾರು ₹ 8 ಲಕ್ಷ ವರಮಾನವಿದೆ ಎಂದು ಅವರು ತಿಳಿಸಿದರು.

ಪ್ರತಿದಿನ ನಿಲ್ದಾಣದ ಮೂಲಕ ಹಾದು ಹೋಗುವ ಮತ್ತು ಬರುವ ಪ್ರಯಾಣಿಕರ ರೈಲುಗಳ ಸಂಖ್ಯೆ 84 ಇವೆ. ಇವುಗಳಲ್ಲದೇ ಅಂದಾಜು 50 ಗೂಡ್ಸ್ ರೈಲುಗಳು ಪ್ರಯಾಣಿಸುತ್ತವೆ ಎಂಬುದು ನಿಲ್ದಾಣದ ಅಧಿಕಾರಿಗಳ ಮಾಹಿತಿ.

ಪರ್ಯಾಯ ವ್ಯವಸ್ಥೆ ಇದ್ದರೂ ಪ್ರಯೋಜನವಿಲ್ಲ

ಕಲಬುರಗಿಯ ರೈಲು ನಿಲ್ದಾಣದಲ್ಲಿ ಕುಡಿಯುವ ನೀರಿಗಾಗಿ ಅಲ್ಲಲ್ಲಿ ನಲ್ಲಿಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಅವುಗಳು ಸುರಕ್ಷಿತವಾಗಿರುವುದಿಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರು ಕುಡಿಯಲು ಬಳಸುವುದಿಲ್ಲ.

ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ 9 ಕಡೆ, 2-3ರಲ್ಲಿ 4 ಕಡೆ ಮತ್ತು 4 ರಲ್ಲಿ 6 ಕಡೆ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆ ಇದೆ. ಪ್ರತಿ ಸ್ಟ್ಯಾಂಡ್‌ನಲ್ಲಿ 4 ನಲ್ಲಿಗಳಿವೆ. ಇವುಗಳಲ್ಲಿನ ನೀರು ಕುಡಿಯುವುದಕ್ಕಿಂತ ಹೆಚ್ಚಾಗಿ ಪ್ರಯಾಣಿಕರು ಕೈ ಮತ್ತು ಮುಖ ತೊಳೆಯಲು ಬಳಸುತ್ತಾರೆ. ಅಡಿಕೆ ಮತ್ತು ಗುಟ್ಕಾಗಳನ್ನು ತಿನ್ನುವ ಜನ ಇದರಲ್ಲಿ ಉಗುಳುವುದರಿಂದ ಅಸ್ವಚ್ಛತೆ ಕಂಡುಬರುತ್ತದೆ. ಹಾಗಾಗಿ, ಅಂಗಡಿಗಳಲ್ಲಿ ಸಿಗುವ ಬಾಟಲಿ ನೀರಿನ ಮೊರೆ ಹೋಗುತ್ತಾರೆ.

‘ಎರಡು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ’

‘ಐಆರ್‌ಸಿಟಿಸಿಗೆ ನೀಡಿರುವ ಟೆಂಡರ್‌ ರದ್ದಾಗಿದ್ದರಿಂದ ದೇಶದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತ ಆಗಿವೆ. ಈ ಬಗ್ಗೆ ರೈಲ್ವೆ ಬೋರ್ಡ್‌ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ರೈಲ್ವೆ ಸಚಿವಾಲಯದ ರೈಲ್ವೆ ಬೋರ್ಡ್‌ನ ಪ್ರಯಾಣಿಕರ ಸೇವಾ ಸಮಿತಿ ಸದಸ್ಯ ಶಿವರಾಜ ಕೆ. ಗಂದಗೆ ಮಾಹಿತಿ ನೀಡಿದರು.

‘ಟೆಂಡರ್‌ನ ಪ್ರೀಮಿಯಂ ದರ ಹೆಚ್ಚಾಗಿದೆ ಎಂದು ಐಆರ್‌ಸಿಟಿಸಿ ಅವರು ಕೋರ್ಟ್‌ಗೆ ಹೋಗಿದ್ದಾರೆ. ಡಿಸೆಂಬರ್‌ ಅಥವಾ ಜನವರಿ ತಿಂಗಳಲ್ಲಿ ತೀರ್ಪು ಬರುವ ನಿರೀಕ್ಷೆ ಇದ್ದು, ನಂತರ ನೀರಿನ ಘಟಕಗಳನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ತೆರೆದ ಬಾವಿ ನೀರೇ ಗತಿ!

ಚಿತ್ತಾಪುರ: ದಕ್ಷಿಣ ಮಧ್ಯೆ ರೈಲ್ವೆ ಸಿಕಂದರಾಬಾದ್ ವಿಭಾಗದ ಗಡಿಯ ಕೊನೆಯಲ್ಲಿರುವ ಚಿತ್ತಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೆರೆದ ಬಾವಿ ನೀರೇ ಗತಿಯಾಗಿದೆ. ಶುದ್ಧ ಕುಡಿಯುವ ನೀರು ಇಂದಿಗೂ ಸಿಗುತ್ತಿಲ್ಲ. ಬಾಟಲಿ ನೀರನ್ನೇ ಅವಲಂಬಿಸುವಂತಾಗಿದೆ.

ಪಟ್ಟಣದ ಚೌಕಿ ತಾಂಡಾ ರಸ್ತೆಯ ಮಾರ್ಗದಲ್ಲಿರುವ ಪುರಾತನ ಕಾಲದ ಗಿರಣಿ ಬಾವಿಯಿಂದ ರೈಲ್ವೆ ನಿಲ್ದಾಣಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ. ನಿಲ್ದಾಣದಲ್ಲಿನ ಕುಡಿಯುವ ನೀರಿನ ತೊಟ್ಟಿಗೆ, ರೈಲ್ವೆ ಸಿಬ್ಬಂದಿ ವಸತಿ ಗೃಹಗಳಿಗೆ ಇದೇ ಬಾವಿ ನೀರು ಪೂರೈಸಲಾಗುತ್ತಿದೆ. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಸಿಕಂದರಾಬಾದ್ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ನಿಲ್ದಾಣಕ್ಕೆ ಭೇಟಿ ನೀಡಿದಾಗೊಮ್ಮೆ ಸ್ಥಳೀಯ ರಾಜಕೀಯ ಮುಖಂಡರು, ವ್ಯಾಪಾರಿಗಳು, ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಇನ್ನೂ ಶುದ್ಧ ನೀರಿನ ವ್ಯವಸ್ಥೆ ಮಾತ್ರ ಮಾಡಿಲ್ಲ ಎಂಬುದು ಪ್ರಯಾಣಿಕರ ಅಸಮಾಧಾನ.

ಪ್ಲಾಟ್‌ಫಾರ್ಮ್ ಒಂದರಲ್ಲಿ ಮಾತ್ರ ರೈಲು ಬರುವ ಸಮಯದಲ್ಲಿ ಮಾತ್ರ ನೀರಿನ ತೊಟ್ಟಿಗೆ ನೀರು ಪೂರೈಕೆ ಮಾಡಿ ನಂತರ ಬಂದ್ ಮಾಡಲಾಗುತ್ತದೆ ಎಂಬುದು ಜನರ ಅಳಲು.

ಸೇಡಂ-ಮಳಖೇಡದಲ್ಲಿ ಶುದ್ಧ ನೀರು ಮರೀಚಿಕೆ

ಸೇಡಂ: ಕಲಬುರಗಿ–ಹೈದರಾಬಾದ್, ಬೆಂಗಳೂರು–ಹೈದರಾಬಾದ್ ಹೀಗೆ ಉತ್ತರ‌‌ ಭಾರತದಿಂದ ದಕ್ಷಿಣ ಭಾರತದವರೆಗೆ ಸಂಪರ್ಕ ಕಲ್ಪಿಸುವ ನಿಲ್ದಾಣಗಳಲ್ಲೊಂದಾದ ಸೇಡಂ ರೈಲ್ವೆ ನಿಲ್ದಾಣದಲ್ಲಿ ಅನೇಕ ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮರೀಚಿಕೆಯಾಗಿದೆ.

ನಿತ್ಯವು ಹತ್ತಾರು ರೈಲುಗಳು, ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಸಿಮೆಂಟ್ ಉದ್ಯಮದಲ್ಲಿಯೂ ಗುರುತಿಸಿಕೊಂಡಿರುವ ಸೇಡಂ ಹಾಗೂ ಮಳಖೇಡ ಸಾವಿರಾರು ಕಾರ್ಮಿಕರ ಸಂಚಾರ ಕೇಂದ್ರವಾಗಿದೆ. ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಶುದ್ಧ ಕುಡಿವ ನೀರಿನ ಘಟಕ ಇಲ್ಲದಿರುವುದು ಪ್ರಯಾಣಿಕರಿಗೆ ಬೇಸರ ತರಿಸಿದೆ. ‘ನೀರಿನ ತೊಟ್ಟಿಗಳು ಅಲ್ಲಲ್ಲಿ‌ ಇದ್ದು, ಕೈತೊಳೆಯಲು ಮಾತ್ರ ಕೆಲವೊಮ್ಮೆ ಅವು ಕೆಟ್ಟು ನಿಲ್ಲುತ್ತವೆ. ಅನಿವಾರ್ಯವಾಗಿ ₹ 20 ಕೊಟ್ಟು ಬಾಟಲಿ ನೀರು ಖರೀದಿಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮುಖಂಡ ಬಸವರಾಜ ಕಾಳಗಿ.

ವಾಡಿ ಜಂಕ್ಷನ್‌ನಲ್ಲಿಯೂ ಶುದ್ಧ ನೀರಿಲ್ಲ

ವಾಡಿ: ಬೆಂಗಳೂರು ಮುಂಬೈ ಹಾಗೂ ಹೈದರಾಬಾದ್ ಸಂಪರ್ಕ ಕೊಂಡಿ ಹೊಂದಿರುವ ವಾಡಿ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯಿಲ್ಲ. ಇದರಿಂದ ಪ್ರಯಾಣಿಕರು ಹೆಚ್ಚಿನ ಹಣ ನೀಡಿ ನೀರು ಖರೀದಿಸುವಂತಾಗಿದೆ. ಜಂಕ್ಷನ್ ಆಗಿದ್ದರಿಂದ ಪ್ರತಿ ಗಾಡಿ ಇಲ್ಲಿ ನಿಲ್ಲುತ್ತದೆ. ಪ್ರಯಾಣಿಕರು ಇಲ್ಲಿ ರೈಲಿಗಾಗಿ ತಾಸುಗಟ್ಟಲೇ ಕಾಯುತ್ತಾರೆ. ರೈಲು ನಿಂತಾಗ ನೀರು ಮತ್ತು ಆಹಾರಕ್ಕಾಗಿ ಇಳಿಯುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಇರುವುದು ದುರಂತವಾಗಿದೆ.

ವಾಡಿ ಪಟ್ಟಣ ಸಿಮೆಂಟ್ ನಗರಿಯಾಗಿದ್ದು, ಕೆಲಸಕ್ಕಾಗಿ ನೂರಾರು ಕಾರ್ಮಿಕರು ಇಲ್ಲಿಗೆ ಬರುತ್ತಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರು ರೈಲುಗಳನ್ನೇ ನೆಚ್ಚಿಕೊಂಡಿದ್ದಾರೆ. ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ರೈಲು ನಿಲ್ದಾಣದ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಐದು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಆದರೆ ಕೋವಿಡ್‌ನಲ್ಲಿ ಸ್ಥಗಿತಗೊಂಡ ನಂತರ ಇವು ಮತ್ತೆ ಆರಂಭವಾಗಿಲ್ಲ.

‘ಒಟ್ಟು 5 ಕಡೆ ಇರುವ ವಾಟರ್‌ ವೆಂಡಿಂಗ್‌ ಮಷಿನ್‌ ಸ್ಥಗಿತ ಆಗಿವೆ. ಶೀಘ್ರ ಆರಂಭಿಸುವಂತೆ ಮೇಲಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಮತ್ತೊಮ್ಮೆ ಗಮನಕ್ಕೆ ತರಲಾಗುವುದು’ ಎಂದು ವಾಡಿ ಸ್ಟೇಷನ್ ಮ್ಯಾನೇಜರ್ ಜೆ.ಎನ್. ಫರೀಡ ತಿಳಿಸಿದರು.

*ಕುಡಿಯುವ ನೀರಿನ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲ. ಇದರಿಂದ ಪ್ರಯಾಣಿಕರು ರೋಗಗಳಿಗೆ ತುತ್ತಾಗಬಹುದು. ಇಲಾಖೆ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರಿಗೆ ಶುದ್ಧ ನೀರು ಒದಗಿಸಬೇಕು. -ಮಹೇಶ್, ಹೈದರಾಬಾದ್ ಪ್ರಯಾಣಿಕ

*ಕೋವಿಡ್ ನಂತರ ರೈಲ್ವೆ ಪ್ರಯಾಣದ ಟಿಕೆಟ್ ದರ ಹೆಚ್ಚಾಗಿದೆ. ಹಣ ಹೆಚ್ಚು ಪಡೆಯುವ ಇಲಾಖೆ ಪ್ರಯಾಣಿಕರ ಹಿತಕ್ಕಾಗಿ ಮೂಲ ಸೌಕರ್ಯ ಒದಗಿಸಲು ಕಾಳಜಿ ವಹಿಸಬೇಕು. ಶುದ್ಧ ನೀರಿನ ಘಟಕಗಳನ್ನು ಶೀಘ್ರ ಆರಂಭಿಸಬೇಕು.
-ಸುನಿಲ್‌ ರಾಠೋಡ, ಪ್ರಯಾಣಿಕ

ರೈಲು ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಇಲ್ಲ.19 ಕಡೆ 4 ನಲ್ಲಿಗಳಿರುವ ಸ್ಟ್ಯಾಂಡ್‌ಗಳಿವೆ. ಸ್ವಚ್ಛತೆ ಕಾಪಾಡುವಲ್ಲಿ ಪ್ರಯಾಣಿಕರ ಸಹಕಾರವೂ ಅಗತ್ಯವಾಗಿದೆ.

-ಸತ್ಯನಾರಾಯಣ ದೇಸಾಯಿ. ರೈಲು ನಿಲ್ದಾಣದ ವ್ಯವಸ್ಥಾಪಕ, ಕಲಬುರಗಿ

ಪ್ರಯಾಣಿಕರು ಸಂಚರಿಸುವ ಪ್ರತಿ ರೈಲ್ವೆ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೆ ಅನುಕೂಲ ಆಗುತ್ತದೆ. ಕೋವಿಡ್‌ ನಂತರ ಇದು ಅನಿವಾರ್ಯವೂ ಆಗಿದೆ.

-ಉಮೇಶ ಚವಾಣ್, ಸದಸ್ಯ, ಗ್ರಾಮ ಪಂಚಾಯಿತಿ, ಮಳಖೇಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT