ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ನಿರ್ವಹಣೆ ಸಮಸ್ಯೆ: ಇ–ಶೌಚಾಲಯ ಸ್ಥಗಿತ

ತಲಾ ₹6 ಲಕ್ಷ ವೆಚ್ಚದಲ್ಲಿ ನಿರ್ಮಾಣ; ಮರು ಚಾಲನೆಗೆ ಸಾರ್ವಜನಿಕರ ಆಗ್ರಹ
Published 11 ಜುಲೈ 2023, 6:17 IST
Last Updated 11 ಜುಲೈ 2023, 6:17 IST
ಅಕ್ಷರ ಗಾತ್ರ

ಓಂಕಾರ ಬಿರಾದಾರ

ಕಲಬುರಗಿ: ಹಣ ಹಾಕಿದರೂ ಬಾಗಿಲು ತೆರೆಯದ ಘಟಕ, ಸುತ್ತ ಮಾಡಿದ ಮೂತ್ರದಿಂದ ಹೊಮ್ಮುತ್ತಿರುವ ದುರ್ನಾತ, ಕಸದ ರಾಶಿ, ನೀರು ಬಾರದ ನಳಗಳು, ನಿರ್ವಹಣೆಯಿಲ್ಲದೇ ವಿದ್ಯುತ್ ಸಂಪರ್ಕ ಕಡಿತ...

ನಗರದ ವಿವಿಧೆಡೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಇ–ಶೌಚಾಲಯಗಳ (ಎಲೆಕ್ಟ್ರಾನಿಕ್ ಟಾಯ್ಲೆಟ್) ದುಸ್ಥಿತಿ ಇದು.

ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಹಾಗೂ ಸ್ವಚ್ಛ ನಗರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಮಹತ್ವಾಕಾಂಕ್ಷೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯ ಅನುದಾನದಲ್ಲಿ ಈ ಘಟಕಗಳನ್ನು ಸ್ಥಾಪನೆ ಮಾಡಿತ್ತು. ಆದರೆ, ಇ–ಶೌಚಾಲಯ ಘಟಕಗಳು ನಿರ್ವಹಣೆ ಸಮಸ್ಯೆಯಿಂದ ಬಳಲುತ್ತಿವೆ.

2017ರಲ್ಲಿ ನಗರದ ಪ್ರಮುಖ ಸ್ಥಳಗಳಾದ ರೈಲ್ವೆ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಜೇವರ್ಗಿ ಕ್ರಾಸ್, ಮೋಹನ್ ಲಾಡ್ಜ್, ಸಂತ್ರಾಸವಾಡಿ ಬಳಿ ತಲಾ ₹6 ಲಕ್ಷ ವೆಚ್ಚದಲ್ಲಿ ಇ–ಶೌಚಾಲಯ ಘಟಕಗಳನ್ನು ನಿರ್ಮಾಣ ಮಾಡಿ ಸೌಲಭ್ಯ ಕಲ್ಪಿಸಲಾಗಿತ್ತು.

ಸಾರ್ವಜನಿಕರ ಬಳಕೆದಾರರಿಗೆ ದಿನದ 24 ಗಂಟೆಯೂ ₹5ರ ನಾಣ್ಯ ಹಾಕಿದರೆ ಇ–ಟಾಯ್ಲೆಟ್ ಬಾಗಿಲು ತೆರೆದುಕೊಳ್ಳುತ್ತಿದ್ದವು. ಬಳಸಿದ ನಂತರ ತಾನೇ ಮಷಿನ್‌ ಆಪರೇಟರ್‌ ಮೂಲಕ ನೀರು ಸರಬರಾಜು ಆಗುತ್ತಿತ್ತು. ಮಹಾನಗರ ಪಾಲಿಕೆಯೊಂದಿಗಿನ ಒಪ್ಪಂದದಂತೆ ಬೆಂಗಳೂರಿನ ಕಂಪನಿ ಇವುಗಳ ನಿರ್ವಹಣೆಯ ಹೊಣೆ ಹೊತ್ತಿತ್ತು. ನಗರದಲ್ಲಿರುವ ಇ–ಶೌಚಾಲಯಗಳು 7ರಿಂದ 8 ತಿಂಗಳಿಂದ ನಿರ್ವಹಣೆ ಸಮಸ್ಯೆಯಿಂದ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿವೆ.

ಶೌಚಾಲಯಗಳ ನಿರ್ವಹಣೆಗೆ ಮಹಾನಗರ ಪಾಲಿಕೆ ವತಿಯಿಂದ ನಿರ್ವಹಣೆ ಕಂಪನಿಗೆ ತಿಂಗಳಿಗೆ ₹6 ಸಾವಿರ ಹಣ ನೀಡಲಾಗುತ್ತಿತ್ತು. ಆದರೆ, ಅವರ ಅವಧಿ ಮುಗಿದಿದ್ದರಿಂದ ನಿರ್ವಹಣೆ ಕೊರತೆಯಿಂದ ಇ–ಶೌಚಾಲಯ ಘಟಕಗಳು ಹಾಳು ಬಿದ್ದಿವೆ. ಕೆಲ ಘಟಕಗಳಿಗೆ ನೀಡಲಾದ ಜೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಶೌಚಾಲಯಗಳು ಸ್ಥಗಿತವಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಸುಮಾರು ₹60 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಇ–ಶೌಚಾಲಯ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿವೆ. ಮಹಾನಗರ ಪಾಲಿಕೆಯಿಂದ ಶೀಘ್ರದಲ್ಲಿ ಟೆಂಡರ್‌ ಕರೆದು ನಿರ್ವಹಣೆ ಹೊಣೆ ಸಂಸ್ಥೆಗಳಿಗೆ ವಹಿಸಬೇಕು ಎನ್ನುತ್ತಾರೆ ವಿದ್ಯಾನಗರ ನಿವಾಸಿ ಯೋಗೇಶ ಎಂ.

ಆರ್‌.ಪಿ. ಜಾಧವ
ಆರ್‌.ಪಿ. ಜಾಧವ
ಇ–ಶೌಚಾಲಯ ನಿರ್ವಹಣೆ ಸಮಸ್ಯೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ದೂರ ಸ್ಥಳಕ್ಕೆ ಹುಡಿಕಿಕೊಂಡು ಹೋಗಬೇಕಾದ ಅನಿವಾರ್ಯ ಇದೆ. ಘಟಕವನ್ನು ಆರಂಭ ಮಾಡಬೇಕು.
ಮಹೇಶ ವಿದ್ಯಾರ್ಥಿ

‘ನಿರ್ವಹಣೆಗೆ ಶೀಘ್ರ ಟೆಂಡರ್‌’ ‘ಇ–ಶೌಚಾಲಯ ನಿರ್ವಹಣೆ ಮಾಡಲು ಬೆಂಗಳೂರಿನ ಒಂದು ಕಂಪನಿಗೆ ನೀಡಲಾಗಿತ್ತು. ಆದರೆ ನಿರ್ವಹಣೆ ನೀಡಲಾದ ಟೆಂಡರ್ ಅವಧಿ ಮುಕ್ತಾಯವಾಗಿದೆ. ಇದರಿಂದ ಶೀಘ್ರದಲ್ಲಿ ಇ–ಶೌಚಾಲಯ ನಿರ್ವಹಣೆ ಮಾಡಲು ಸಂಸ್ಥೆಗಳಿಗೆ ಟೆಂಡರ್‌ ಕರೆಯಲಾಗುವುದು’ ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು. ಅನುದಾನ ಸಮಸ್ಯೆಯಿಂದ ಈ ಹಿಂದೆ ಟೆಂಡರ್ ಕರೆಯಲು ಸಾಧ್ಯವಾಗಿರಲಿಲ್ಲ. ಪಾಲಿಕೆ ಆಯುಕ್ತರು ಟೆಂಡರ್‌ ಕರೆಯಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT