ಭಾನುವಾರ, ಡಿಸೆಂಬರ್ 5, 2021
27 °C

‘ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ಇನ್ನಷ್ಟು ಸುಲಭ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕೆಲ ವರ್ಷಗಳ ಹಿಂದೆ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ದೆಹಲಿಗೆ ಹೋಗಬೇಕಿತ್ತು. ಇದರಿಂದ ಸಾಕಷ್ಟು ಖರ್ಚೂ ಆಗುತ್ತಿತ್ತು. ಆದರೆ, ತಂತ್ರಜ್ಞಾನ ಸಾಕಷ್ಟು ಬೆಳೆದಿರುವುದರಿಂದ ಇಂಟರ್ನೆಟ್‌ನಲ್ಲಿಯೇ ಹಲವಾರು ಮಾಹಿತಿಗಳು ಸಿಗುತ್ತವೆ ಎಂದು ಕಲಬುರಗಿ ಉತ್ತರ ಉಪವಿಭಾಗದ ಎಸಿಪಿ  ದೀಪನ್ ಎಂ.ಎನ್. ತಿಳಿಸಿದರು.

ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಯುಪಿಎಸ್‌ಸಿ ಪರೀಕ್ಷೆಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿಕೊಂಡು ಸಿದ್ಧತೆ ನಡೆಸಬಹುದು. ಓದಿಗೆ ಎಂದಿಗೂ ಕೊನೆಯಿಲ್ಲ. ಆದರೆ, ದಪ್ಪ ದಪ್ಪ ಪುಸ್ತಕಗಳನ್ನು ಓದುವ ಬದಲು ಎಷ್ಟು ಅಗತ್ಯವಿದೆಯೋ ಅಷ್ಟು ಓದಬೇಕು’ ಎಂದರು.

ಕೆಲ ಕಾಲ ಉದ್ಯೋಗ ಮಾಡಿ ನಂತರ ಪರೀಕ್ಷೆ ಬರೆದು ಐಪಿಎಸ್‌ ಪಾಸು ಮಾಡಿದೆ. ಇದಕ್ಕಾಗಿ ಐದು ವರ್ಷಗಳನ್ನು ಮೀಸಲಿಟ್ಟಿದ್ದೆ. ಖಾಸಗಿಯಲ್ಲಿಯೂ ಉದ್ಯೋಗ ಮುಂದುವರಿಸಬಹುದಾಗಿತ್ತು. ಆದರೆ, ನಾವು ಯಾರು ಎಂಬುದು ಜನರಿಗೆ ಗೊತ್ತಾಗುವುದೇ ಇಲ್ಲ. ಸರ್ಕಾರಿ ಹುದ್ದೆಗೆ ಬಂದರೆ ನಮ್ಮ ಸಂಪರ್ಕಕ್ಕೆ ಬರುವ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಬಹುದು. ಹೀಗಾಗಿಯೇ ಸರ್ಕಾರಿ ಹುದ್ದೆಯೆಂದರೆ ನನಗೆ ಇಷ್ಟ ಎಂದರು.

 

‘ಪರೀಕ್ಷಾ ಕ್ರಮದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ’

 ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗೂ ರಾಜ್ಯ ಸರ್ಕಾರ ನಡೆಸುವ ಪಿಎಸ್‌ಐ ಪರೀಕ್ಷೆಗೂ ಹೆಚ್ಚು ವ್ಯತ್ಯಾಸವಿಲ್ಲ. ಆದ್ದರಿಂದ ಬರೀ ಪಿಎಸ್‌ಐ ಆಗುವುದೇ ಜೀವನದ ಗುರಿ ಎಂದು ಭಾವಿಸದೇ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂದು ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಉಪನ್ಯಾಸಕ ಶಮಂತ ಗೌಡ ತಿಳಿಸಿದರು.

ಎರಡೂ ಪರೀಕ್ಷೆಗಳಲ್ಲಿ ಪ್ರಬಂಧ, ಭಾಷಾಂತರ ಮತ್ತಿತರ ಸಮಾನ ಸಂಗತಿಗಳಿರುತ್ತವೆ. ಹೀಗಾಗಿ, ಎರಡನ್ನೂ ಗಮನದಲ್ಲಿಟ್ಟುಕೊಂಡು ಓದನ್ನು ಕೇಂದ್ರೀಕರಿಸಿದರೆ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ ಎಂದರು.

ಯುಪಿಎಸ್‌ಸಿ ಬರೀ ಐಎಎಸ್‌, ಐಪಿಎಸ್‌ ಹುದ್ದೆಗಳಿಗೆ ಮಾತ್ರ ಪರೀಕ್ಷೆ ನಡೆಸುವುದಿಲ್ಲ. ಸೈನ್ಯ ಸೇರುವವರಿಗಾಗಿ ಕಂಬೈನ್ಡ್‌ ಡಿಫೆನ್ಸ್ ಸರ್ವಿಸಸ್ ಪರೀಕ್ಷೆ (ಸಿಡಿಎಸ್‌), ಇಂಡಿಯನ್ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ), ಕೇಂದ್ರೀಯ ಸಶಸ್ತ್ರ ಪೊಲೀಸ್ ಬಲ, ಸಿಐಎಸ್‌ಎಫ್‌ ಸೇರಿದಂತೆ ಸುಮಾರು 2 ಲಕ್ಷ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತದೆ. ಅವುಗಳ ಬಗ್ಗೆಯೂ ಆಗಾಗ ಗಮನಿಸುತ್ತಿರಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು