ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ’

ಕಾರ್ಮಿಕ ಇಲಾಖೆಯ ಉಪ ಆಯುಕ್ತ ನಾಗೇಶ ಡಿ.ಜೆ. ಅಭಿಮತ
Last Updated 16 ಸೆಪ್ಟೆಂಬರ್ 2022, 5:20 IST
ಅಕ್ಷರ ಗಾತ್ರ

ಕಲಬುರಗಿ: ಕಾರ್ಮಿಕ ಇಲಾಖೆಯು ಪ್ರಸ್ತುತ 25 ಕಾರ್ಮಿಕ ಕಾಯ್ದೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಜನನದಿಂದ ಮರಣದವರೆಗೆ ದುಡಿಯುವ ವರ್ಗಕ್ಕೆ ಆರ್ಥಿಕ ನೆರವು, ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಇಲಾಖೆಯ ಉಪ ಆಯುಕ್ತ ನಾಗೇಶ ಡಿ.ಜೆ. ತಿಳಿಸಿದರು.

ನವ ಕರ್ನಾಟಕ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ‘ಸೌಲಭ್ಯಗಳು ಸಿಗಬೇಕು ಎಂದರೆ ಕಾರ್ಮಿಕರಿಗೆ ನೀಡಲಾಗುವ ಗುರುತಿನ ಚೀಟಿ ಪಡೆಯಬೇಕು. ಸಂಘಟಿತ ಕಾರ್ಮಿಕರಷ್ಟೇ ಅಲ್ಲದೇ, ಬೀದಿ ಬದಿ ವ್ಯಾಪಾರಿಗಳು, ಟೈಲರ್‌ಗಳು, ಅಡುಗೆ ಕೆಲಸದವರು ಸೇರಿದಂತೆ ಎಲ್ಲ ಬಗೆಯ ಅಸಂಘಟಿತ ಕಾರ್ಮಿಕರ ನೆರವಿಗೆ ಬರಲು ಇ– ಶ್ರಮ್ ಎಂಬ ಆನ್‌ಲೈನ್‌ ಆಧರಿಸಿ ಗುರುತಿನ ಚೀಟಿ ವಿತರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ಈ ಯೋಜನೆಗೆ ಅಷ್ಟಾಗಿ ನೋಂದಣಿಗಳಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ಯುಕೆಜಿಯಿಂದ ವೃತ್ತಿಪರ ಕೋರ್ಸ್‌ವರೆಗೂ ಓದಲು ಆರ್ಥಿಕ ನೆರವು, ಮಕ್ಕಳ ಮದುವೆಗೆ ₹ 60 ಸಾವಿರ, ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಲಾಗಿದೆ. ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುತ್ತದೆ. 60 ವರ್ಷಗಳಾದ ಬಳಿಕ ನಿಶ್ಚಿತ ಪಿಂಚಣಿ ಮಾಸಿಕ ₹ 3 ಸಾವಿರ ನೀಡಲಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ನೀಡಿರಬಹುದಾದ ನಕಲಿ ಕಟ್ಟಡ ಕಾರ್ಮಿಕರ ಗುರುತು ಪತ್ತೆ ಕಾರ್ಯ ಶುರು ಮಾಡಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಕಾರ್ಡ್ ನೀಡುವ ಹೊಣೆಯನ್ನು ಕಟ್ಟಡ ಕಾರ್ಮಿಕರ ಸಂಘಟನೆಗಳು, ಗುತ್ತಿಗೆದಾರರು, ಎಂಜಿನಿಯರುಗಳಿಗೆ ನೀಡಲಾಗಿತ್ತು. ಯೋಜನೆಗಳು ಅಸಲಿ ಕಾರ್ಮಿಕರಿಗೆ ದೊರೆಯಬೇಕು ಎಂಬ ಉದ್ದೇಶದಿಂದ ನಕಲಿ ಕಾರ್ಮಿಕರ ಪತ್ತೆ ಕಾರ್ಯ ನಡೆದಿದೆ’ ಎಂದು ಹೇಳಿದರು.

ದಕ್ಷಿಣ ಮತಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಿಂಗರಾಜ ತಾರಫೈಲ್ ಮಾತನಾಡಿ, ‘ಜಿಲ್ಲೆಯಲ್ಲಿ 3 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ ಎಂಬುದನ್ನು ನಂಬಲು ಆಗುವುದಿಲ್ಲ. ಇದರಲ್ಲಿ ಬಹಳಷ್ಟು ಜನ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದವರು ಇದ್ದಾರೆ. ಆದ್ದರಿಂದ ಇಲಾಖೆ ದಿಟ್ಟತನದಿಂದ ತಪ್ಪು ಮಾಹಿತಿ ನೀಡಿದವರ ಕಾರ್ಡ್ ರದ್ದುಪಡಿಸಬೇಕು. ಇದರಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ಮರಣ ಪರಿಹಾರವನ್ನು ₹ 5 ಲಕ್ಷದಿಂದ ₹ 10 ಲಕ್ಷಕ್ಕೆ ಹೆಚ್ಚಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಕುಮಾರ ಬುರಡಿಕಟ್ಟಿ, ಸಂಘದ ಗೌರವಾಧ್ಯಕ್ಷ ರಾಜು ಜಮಾದಾರ, ಅಧ್ಯಕ್ಷ ಭೀಮರಾಯ ಎಂ. ಕಂದಳ್ಳಿ, ಉಪಾಧ್ಯಕ್ಷರಾದ ಶಿವಕುಮಾರ ಎಸ್. ಬೇಳಗೇರಿ, ಮಹಾಂತೇಶ ಎಸ್. ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಮರೆಪ್ಪ ಎಚ್. ರೋಟನಡಗಿ, ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ತುಪ್ಪುದಕರ್, ಸಹ ಕಾರ್ಯದರ್ಶಿ ಶರಣು ಎ. ಬಳಿಚಕ್ರ, ಖಜಾಂಚಿ ದೇವಿಂದ್ರ ಎಸ್. ಉಳ್ಳಾಗಡ್ಡಿ, ಪತ್ರಿಕಾ ಕಾರ್ಯದರ್ಶಿ ಬಾಬುರಾವ ದೇವರಮನಿ ಇದ್ದರು.

ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ಕಾರ್ಮಿಕ ಇಲಾಖೆಯಿಂದ ವಿತರಿಸಲಾಯಿತು.

ಕಟ್ಟಡ ಕಾರ್ಮಿಕರು ದುಡಿದಿದ್ದನ್ನು ಕುಡಿಯುವುದಕ್ಕೆ ಖರ್ಚು ಮಾಡುವುದನ್ನು ಬಿಡಬೇಕು. ಸಂಘದಿಂದ 3 ಅಥವಾ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರ ನಡೆಸಬೇಕು. ಕಾನೂನು ಅರಿವು ಕಾರ್ಯಾಗಾರ ಆಯೋಜಿಸಬೇಕು
ಲಿಂಗರಾಜಪ್ಪ ಅಪ್ಪ, ಶರಣಬಸವ ಸಂಸ್ಥಾನ

ಕಾರ್ಮಿಕ ಇಲಾಖೆಯಲ್ಲಿ ಎಜೆಂಟರ ಮೂಲಕ ಬಂದವರಿಗೆ ಕಟ್ಟಡ ಕಾರ್ಮಿಕರ ಕಾರ್ಡ್ ಸಿಗುತ್ತದೆ ಎಂಬ ಆರೋಪಗಳಿವೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು
ಲಕ್ಷ್ಮಣ ದಸ್ತಿ, ಅಧ್ಯಕ್ಷ, ಕ.ಕ. ಹೋರಾಟ ಸಂಘರ್ಷ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT