ಶನಿವಾರ, ಏಪ್ರಿಲ್ 4, 2020
19 °C
ಪತ್ನಿಯ ಬಳ್ಳಾರಿ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದ ನಾಗಪ್ಪ ಹೈಯಾಳ

ಯಡ್ರಾಮಿ: ಪಿಡಿಒ ವಿರುದ್ಧ ಕ್ರಿಮಿನಲ್‌ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಯಲಗೋಡ ಹಾಗೂ ಸಾತಖೇಡ ಗ್ರಾಮ ಪಂಚಾಯಿತಿಗಳಲ್ಲಿ ₹ 1.10 ಕೋಟಿಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗಪ್ಪ ಹೈಯ್ಯಾಳ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಈ ಎರಡು ಗ್ರಾ.ಪಂ. ಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ.ರಾಜಾ ಪಿ. ಅವರಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ನೀಡಿ ತನಿಖೆಗೆ ಒತ್ತಾಯಿಸಿದ್ದರು. ಪ್ರಾಥಮಿಕ ತನಖೆಯಲ್ಲಿ ಹಣದ ಅವ್ಯವಹಾರ ಕಂಡು ಬಂದಿದ್ದರಿಂದ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದರು. ಇದರನ್ವಯ ಯಡ್ರಾಮಿ ಠಾಣೆಯಲ್ಲಿ ಪಿಡಿಒ ವಿರುದ್ಧ  ವಂಚನೆ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಯಲಗೋಡ ಹಾಗೂ ಸಾತಖೇಡ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಪಿಡಿಒ ಮತ್ತು ಅಧ್ಯಕ್ಷರು ಸೇರಿ ಹಣದ ದುರುಪಯೋಗ ಪಡಿಸಿಕೊಂಡಿದ್ದಾರೆ. ಬಸಮ್ಮ ಜವಳಗಾ ಅವರು ಅಧ್ಯಕ್ಷೆ ಇದ್ದರೂ ಬಹುತೇಕ ಚೆಕ್‌ಗಳ ಮೇಲೆ ಅವರ ಪತಿ ಬಾಪುಗೌಡ ಸಹಿ ಇದೆ ಎಂಬುದು ಗೊತ್ತಾಗಿದೆ.

ಯಲಗೋಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಎರಡು ಅಂಗನವಾಡಿ ಕಟ್ಟಡದ ಅನುದಾನ ₹ 36 ಲಕ್ಷ ಹಾಗೂ ಸಾತಖೇಡ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಅನುದಾನ ₹ 18 ಲಕ್ಷ, 14ನೇ ಹಣಕಾಸು ಯೋಜನೆಯಡಿಯಲ್ಲಿ ₹ 22 ಲಕ್ಷ,  ಕರವಸೂಲಿಯ ಹಣ ಸೇರಿದಂತೆ ಪಂಚಾಯಿತಿಗೆ ಜಮಾಗೊಂಡ ಎಲ್ಲ ಖಾತೆಗಳ ಹಣವನ್ನು ನಾಗಪ್ಪ ತಮ್ಮ ಪತ್ನಿಯ ಬಳ್ಳಾರಿ ಜಿಲ್ಲೆಯ ಬ್ಯಾಂಕ್‍ನಲ್ಲಿ ಡ್ರಾ ಮಾಡಿಕೊಂಡಿದ್ದಾರೆ. ಹೀಗೆ ಹಲವಾರು ಯೋಜನೆಗಳಲ್ಲಿ ₹ 1.10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಿಡಿಒ ಹೆಸರು ಮತ್ತು ತನ್ನ ಪತ್ನಿಯ ಹೆಸರಿನ ಮೇಲೆ ಅವ್ಯವಹಾರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಯಲಗೋಡ, ಸಾತಖೇಡ ಎರಡು ಗ್ರಾಮ ಪಂಚಾಯಿತಿಗಳ ಬ್ಯಾಂಕ್ ಖಾತೆಗಳ ಹಣಕಾಸಿನ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಂಬಂಧಿಸಿದ ಬ್ಯಾಂಕ್‍ಗಳ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಮಾಹಿತಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಲಾಗಿದೆ.

ನಾಗಪ್ಪ ಹೈಯ್ಯಾಳ ಹಣಕಾಸಿನ ಅವ್ಯವಹಾರ ಮಾಡಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇಟ್ಟು ಈಗಾಗಲೇ ಅಮಾನತ್ತಿನಲ್ಲಿಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು