ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಅರಣ್ಯ ಸಿಬ್ಬಂದಿ ವಿರುದ್ಧ ಸುಳ್ಳು ಕೊಲೆ ಪ‍್ರಕರಣ; ಪ್ರತಿಭಟನೆ

ಎಸ್ಪಿ ಕಚೇರಿ ಎದುರು ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದಿಂದ ಪ್ರತಿಭಟನೆ
Last Updated 31 ಮಾರ್ಚ್ 2021, 3:19 IST
ಅಕ್ಷರ ಗಾತ್ರ

ಕಲಬುರ್ಗಿ: ಚಿಂಚೋಳಿ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಸುಳ್ಳು ಕೊಲೆ ಪ್ರಕರಣ ದಾಖಲಿಸಲಾಗಿದೆ. ಅದನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದ ಕಲಬುರ್ಗಿ ವೃತ್ತದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ಭಾನುವಾರ ಮಧ್ಯಾಹ್ನ ಚಿಂಚೋಳಿ ವನ್ಯಜೀವಿ ವಲಯದ ಕುಸ್ರಂಪಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ಪಡೆದು ಉಪ ವಲಯ ಅರಣ್ಯಾಧಿಕಾರಿ ರಾಹುಲ ಸಾದುರೆ, ಅರಣ್ಯ ರಕ್ಷಕ ಹಣಮಂತರಾಯ ಕೋಚಿ, ದಿನಗೂಲಿ ನೌಕರ ದೇವಿಂದ್ರಪ್ಪ, ಬೆಂಕಿ ಕಾವಲುಗಾರರಾದ ರಾಜು, ಸಂಬಣ್ಣ, ಪಾಂಡು ಅವರು ಬೆಂಕಿ ನಂದಿಸಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಪಟ್ಟಾ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಮಲಗಿದಂತೆ ಕಂಡು ಬಂದಾಗ ದೇವಿಂದ್ರಪ್ಪ ಅವರು ಕೂಗಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಸಂಶಯಗೊಂಡು ಕುಸ್ರಂಪಳ್ಳಿ ತಾಂಡಾದ ಸೀನು ಎಂಬವವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೊಲದಲ್ಲಿ ಬಿದ್ದ ಸ್ಥಿತಿಯಲ್ಲಿದ್ದ ಆ ವ್ಯಕ್ತಿಯನ್ನು ಮುಟ್ಟುವುದಾಗಲಿ, ಎಬ್ಬಿಸುವುದಾಗಲಿ ಮಾಡಿಲ್ಲ. ಆದರೂ, ಪೊಲೀಸರು ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮೂವರು ಕೂಲಿಕಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ವಿನಾಕಾರಣ ಇಲಾಖೆ ಸಿಬ್ಬಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಇಲಾಖೆ ಸಿಬ್ಬಂದಿಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕಿರುಕುಳ ಕೊಡಲಾಗುತ್ತಿದೆ. ಆದ್ದರಿಂದ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಉನ್ನತಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಇಲಾಖೆಯ ಕೆಳಹಂತದ ಅಧಿಕಾರಿಗಳ ಮೇಲೆ ಯಾವುದೇ ಪೊಲೀಸ್ ಪ್ರಕರಣ ದಾಖಲಿಸುವ ಮುಂದೆ ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಸತ್ಯಾಂಶವನ್ನು ಪರಿಶೀಲಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಅರಣ್ಯಾಧಿಕಾರಿಗಳ ಸಂಘದ ಕಲಬುರ್ಗಿ ವೃತ್ತದ ಅಧ್ಯಕ್ಷ ಮಹ್ಮದ್ ಮುನೀರ್ ಅಹ್ಮದ್, ಉಪಾಧ್ಯಕ್ಷ ರಮೇಶ ಕನಕಟ್ಟಾ, ಪ್ರಧಾನ ಕಾರ್ಯದರ್ಶಿ ಗುರುರಾಜ ಕಮತರ, ಜಂಟಿ ಕಾರ್ಯದರ್ಶಿ ರಾಜೇಶ ಗುಲಿಗಿನ, ಖಜಾಂಚಿ ವೀರೇಶ ಕಲ್ಯಾಣಿ, ಗೌರವ ಅಧ್ಯಕ್ಷ ಬಸವರಾಜ ಡಾಂಗೆ, ಆರ್‌ಎಫ್‌ಓ ಸಂಜೀವಕುಮಾರ ಚವ್ಹಾಣ, ಜಯವರ್ಧನ ತಳವಾರ, ಮೌಲಾಲಿಸಾಬ್, ಭಾಗಪ್ಪಗೌಡ ಸುಂಬಡ, ವಿಜಯಕುಮಾರ ಜಾಧವ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT