ಮಂಗಳವಾರ, ಫೆಬ್ರವರಿ 7, 2023
26 °C
ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಕೊಲೆಗೆ ₹ 10 ಲಕ್ಷ ಸುಪಾರಿ

ವೃದ್ಧನ ಸೊಸೆಯ ಅಣ್ಣ ಸೇರಿ ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನವೆಂಬರ್ 14 ರಂದು ಸೇಡಂ ಪಟ್ಟಣದಲ್ಲಿ ನಡೆದಿದ್ದ ಮಲ್ಲಿಕಾರ್ಜುನ ಮುತ್ಯಾಲ (65) ಎಂಬುವವರ ಕೊಲೆ ಪ್ರಕರಣವನ್ನು ಬಯಲಿಗೆಳೆದಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಅವರ ಸೊಸೆಯ ಅಣ್ಣ ಹಾಗೂ ಆತನಿಂದ ಸುಪಾರಿ ಪಡೆದಿದ್ದ ಮೂವರನ್ನು ಬಂಧಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ‘ಕಬ್ಬಲಿಗ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಮುತ್ಯಾಲ ಪುತ್ರ ಶ್ರೀನಿವಾಸ ಲಿಂಗಾಯತ ಸಮುದಾಯದ ಲಿಂಗರಾಜ ಸಂಗಣ್ಣ ಮಾದೇನವರ ಎಂಬಾತನ ಸಹೋದರಿಯನ್ನು ಮದುವೆಯಾಗಿದ್ದ. ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಲಿಂಗರಾಜನಿಗೆ ಮುತ್ಯಾಲ ಕುಟುಂಬದವರ ಮೇಲೆ ಸಿಟ್ಟಿತ್ತು. ಈ ಬಗ್ಗೆ ಹಲವು ಬಾರಿ ತನ್ನ ಅಸಮಧಾನ ವ್ಯಕ್ತಪಡಿಸಿದ್ದ. ಮಲ್ಲಿಕಾರ್ಜುನನು ಲಿಂಗರಾಜನನ್ನು ಉದ್ದೇಶಿಸಿ, ‘ನನ್ನ ಮಗನೊಂದಿಗೆ ನಿನ್ನ ತಂಗಿಯ ಮದುವೆಯಾಗಿದ್ದು, ಮುಂದಿನ ದಿನಗಳಲ್ಲಿ ಅರ್ಧ ಆಸ್ತಿ ತೆಗೆದುಕೊಳ್ಳುತ್ತೇವೆ’ ಎಂದಿದ್ದರು. ಇದರಿಂದ ರೊಚ್ಚಿಗೆದ್ದ ಲಿಂಗರಾಜ ಮಲ್ಲಿಕಾರ್ಜುನನ ಕೊಲೆಗೆ ತೀರ್ಮಾನಿಸಿದ್ದ’ ಎಂದರು.

‘ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಮಾಡುವ ಉದ್ದೇಶದಿಂದ ಸೇಡಂನ ಬಸವ ನಗರದ ಅವಿನಾಶ ಹರಿ ರಾಠೋಡ, ಇಂದ್ರಾನಗರದ ಕರಣ ಗೋವಿಂದ ರಾಠೋಡ, ಪೊಲೀಸ್ ಪಾಟೀಲ ಗಲ್ಲಿಯ ವಿಜಯಕುಮಾರ ಸಂತೋಷ ಯಾಕಾ‍ಪುರ ಎಂಬುವವರಿಗೆ ₹ 10 ಲಕ್ಷಕ್ಕೆ ಸುಪಾರಿ ನೀಡಿದ್ದ. ಮಲ್ಲಿಕಾರ್ಜುನ ಅವರು ‍ಪ್ರತಿ ರಾತ್ರಿ ತಮ್ಮ ಅಂಗಡಿಯಲ್ಲೇ ಮಲಗಿಕೊಳ್ಳುತ್ತಿದ್ದರು. ಹೊರಗೆ ಬಂದಾಗ ಕೊಲೆ ಮಾಡಬೇಕು ಎಂದು ಎರಡು, ಮೂರು ಬಾರಿ ಕಾದಿದ್ದರು. ಬಂದಿರಲಿಲ್ಲ. ನವೆಂಬರ್‌ 14ರಂದು ರಾತ್ರಿ 12 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗಾಗಿ ಅಂಗಡಿಯ ಹಿಂದಿನ ಬಾಗಿಲು ತೆರೆದು ಹೊರಗೆ ಬಂದಾಗ ವಾಹನವೊಂದರ ಹಿಂದೆ ಅವಿತುಕುಳಿತಿದ್ದ ಅವಿನಾಶ್, ಕರಣ, ವಿಜಯಕುಮಾರ ಮಲ್ಲಿಕಾರ್ಜುನ ಅವರ ಕುತ್ತಿಗೆ ಹಿಡಿದು ಉಸಿರುಗಟ್ಟಿಸಿ ಸಾಯಿಸಿದರು. ನಂತರ ಮರ್ಮಾಂಗಕ್ಕೆ ಕಲ್ಲಿನಿಂದ ಜಜ್ಜಿದ್ದರು. ಸಾವಿಗೀಡಾಗಿದ್ದು ಖಚಿತವಾದ ಬಳಿಕ ರೈಲ್ವೆ ಹಳಿಯಗುಂಟ ನಡೆದು ಬಂದರು. ಮಳಖೇಡದಲ್ಲಿ ಸಿಕ್ಕ ಲಾರಿಯನ್ನು ಹತ್ತಿಕೊಂಡು ಕಲಬುರಗಿಗೆ ಬಂದು ಅಲ್ಲಿಂದ ಮಹಾರಾಷ್ಟ್ರಕ್ಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅಷ್ಟರಲ್ಲಿ ನಮ್ಮ ತಂಡ ಆರೋಪಿಗಳನ್ನು ಬಂಧಿಸಿತು’ ಎಂದರು.

ತಪ್ಪಿಸಿಕೊಳ್ಳದಂತೆ ಜಾಲ ಹೆಣೆದಿದ್ದ ಪೊಲೀಸರು

ಆರೋಪಿಗಳು ಸೇಡಂ ಬಿಟ್ಟು ಹೋಗದಂತೆ ಪೊಲೀಸರು ಜಾಲ ಹೆಣೆದಿದ್ದರು. ಕೊಲೆ ಆರೋಪದ ಬಗ್ಗೆ ಲಿಂಗರಾಜನ ಪಾತ್ರ ಇರುವುದು ಇತ್ತೀಚೆಗೆ ಗೊತ್ತಾಗಿತ್ತಾದರೂ ಅದನ್ನು ಬಹಿರಂಗಪಡಿಸಿರಲಿಲ್ಲ. ಅಲ್ಲದೇ, ಕೊಲೆಗೆ ಕೌಟುಂಬಿಕ ವೈಷಮ್ಯವೇ ಕಾರಣ ಎಂಬ ವಿಚಾರವನ್ನು ತೇಲಿಸಿಬಿಟ್ಟಿದ್ದರು. ಇದರಿಂದ ಕೊಲೆ ಆರೋಪ ತಮ್ಮ ಮೇಲೆ ಬಂದಿಲ್ಲ ಎಂದುಕೊಂಡು ಆರೋಪಿಗಳು ನಿರುಮ್ಮಳರಾಗಿದ್ದರು.

ಲಿಂಗರಾಜನ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶನನ್ನು ಕರೆಸಿ ವಿಚಾರಣೆಗೆ ಒಳಪಡಿಸಿದ್ದರು. ಆಗ ಅವಿನಾಶ, ನನ್ನ ಬಳಿ ಫೋನ್ ಇಲ್ಲ. ಅಂಗಡಿಯಲ್ಲಿ ಕೆಲಸ ಬಿಟ್ಟು ಕೂಲಿ ಕೆಲಸ ಮಾಡಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದ. ಆದರೆ, ಲಿಂಗರಾಜ ಬಳಸುತ್ತಿದ್ದ ಮೂರು ಸಿಮ್‌ ಕಾರ್ಡ್‌ಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರು ಅದಕ್ಕೆ ಅವಿನಾಶ್‌ ಸಂಖ್ಯೆಯಿಂದ ಕರೆ ಹೋಗಿದ್ದನ್ನು ಪತ್ತೆ ಹಚ್ಚಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆಯೇ ಅವಿನಾಶ ತಾನೇ ಠಾಣೆಗೆ ಬಂದು ಶರಣಾದ. ಲಿಂಗರಾಜನನ್ನು ಚಿತ್ತಾಪುರದಲ್ಲಿ, ಮತ್ತೊಬ್ಬ ಆರೋಪಿಯನ್ನು ಕಲಬುರಗಿಯಲ್ಲಿ, ಇನ್ನೊಬ್ಬನನ್ನು ಸೇಡಂನಲ್ಲಿ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘₹ 10 ಲಕ್ಷಕ್ಕೆ ಸುಪಾರಿ ನೀಡಿದ್ದ ಲಿಂಗರಾಜ ಮೊದಲ ಕಂತಿನ ₹ 5 ಲಕ್ಷ ಹಣವನ್ನು ನ. 16ರಂದು ನೀಡಿದ್ದ. ಅದನ್ನು ಪಡೆದುಕೊಂಡಿದ್ದ ಆರೋಪಿಗಳು ಕಲಬುರಗಿ, ಸೇಡಂ ಕಡೆ ತಿರುಗಾಡುತ್ತಿದ್ದರು. ಕೊಲೆಯಾದ ರಾತ್ರಿ ಮಳಖೇಡ ಬಳಿ ಸಿಕ್ಕ ಲಾರಿ ಹತ್ತಿಕೊಂಡು ಕಲಬುರಗಿಯ ರಾಮಮಂದಿರದ ಬಳಿ ಇಳಿದಿದ್ದರು. ನಗರದ ಹೊರವಲಯದ ಶರಣ ಸಿರಸಗಿ ಬಳಿಯ ನೀರಿನ ಕೊಳದಲ್ಲಿ ಸ್ನಾನ ಮಾಡಿ ಬಟ್ಟೆ ಬದಲಿಸಿದ್ದರು’ ಎಂದರು.

₹ 1 ಲಕ್ಷ ಬಳಸಿದ್ದ ಆರೋಪಿಗಳು

ಕೊಲೆಗೆ ಸುಪಾರಿ ನೀಡಿದ್ದ ಲಿಂಗರಾಜ ಮಾದೇನವರ ಮೊದಲ ಕಂತಾಗಿ ₹ 5 ಲಕ್ಷ ನೀಡಿದ್ದ. ಅದರಲ್ಲಿ ₹ 1 ಲಕ್ಷ ಹಣವನ್ನು ಖರ್ಚು ಮಾಡಿದ್ದು, ಬಂಧಿತರಿಂದ ₹ 4 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದರು.

ಸೇಡಂ ವೃತ್ತದ ಸಿಪಿಐ ಆನಂದರಾವ್ ಎಸ್.ಎನ್., ಸೇಡಂ ಪಿಎಸ್‌ಐ ಸೋಮಲಿಂಗ ಒಡೆಯರ್, ಕುರಕುಂಟಾ ಪಿಎಸ್‌ಐ ಅರ್ಜುನಪ್ಪ, ಕುಂಚಾವರಂ ಪಿಎಸ್‌ಐ ಪೃಥ್ವಿರಾಜ್, ಸಿಬ್ಬಂದಿ ಉದಯಕುಮಾರ್, ನಾಗರಾಜ, ಶ್ರೀನಿವಾಸರೆಡ್ಡಿ, ಬಾಬುರಾವ, ಆಸೀಫ್, ಮಾಣಿಕರಾವ್, ಜಗದೀಶ, ನಾಗರಾಜ, ನಿಂಗಪ್ಪ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣವನ್ನು ಪತ್ತೆ ಹಚ್ಚಿದ ಸಿಬ್ಬಂದಿಗೆ ನಗದು ಬಹುಮಾನ ನೀಡಲಾಗುವುದು ಎಂದು ಇಶಾ ಪಂತ್ ಘೋಷಿಸಿದರು.

***

ತಂಗಿಯ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಅಣ್ಣನಾದ ಲಿಂಗರಾಜನಿಗೆ ಬೇಸರವಿತ್ತು. ಜೊತೆಗೆ, ಕೊಲೆಯಾದ ಮಲ್ಲಿಕಾರ್ಜುನ ಮುತ್ಯಾಲ ಅರ್ಧ ಆಸ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದರಿಂದ ಕೆರಳಿ ಕೊಲೆ ಮಾಡಿಸಿದ್ದಾಗಿ ಲಿಂಗರಾಜ ಒಪ್ಪಿಕೊಂಡಿದ್ದಾನೆ

ಇಶಾ ಪಂತ್, ಕಲಬುರಗಿ ಎಸ್ಪಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು