ಮಂಗಳವಾರ, ನವೆಂಬರ್ 19, 2019
29 °C
ಗ್ರಾಹಕರ ಹಕ್ಕುಗಳ ಸಂಸ್ಥೆಯಿಂದ ಉಚಿತ ಹೆಲ್ಮೆಟ್‌ ವಿತರಣೆ, ಸಂಚಾರ ಹಾಗೃತಿ

‘ಜೀವಕ್ಕೆ ಎರವಾಗದಿರಲಿ ಬೈಕ್‌ ಸವಾರಿ’

Published:
Updated:
Prajavani

ಕಲಬುರ್ಗಿ: ‘ನಗರ ಪ್ರದೇಶಗಳಲ್ಲಿ ಬೈಕ್‌ ಅಪಘಾತಗಳೇ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜೀವಕ್ಕಿಂತ ಅಮೂಲ್ಯವಾದ ವಸ್ತು ಜಗತ್ತಿನಲ್ಲಿ ಬೇರೇನೂ ಇಲ್ಲ. ಆದ್ದರಿಂದ ಪ್ರತಿಯೊಬ್ಬ ಬೈಕ್‌ ಸವಾರ ಹಾಗೂ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಕೈಜೋಡಿಸಬೇಕು’ ಎಂದು ಇಲ್ಲಿನ ಗ್ರಾಹಕರ ಹಕ್ಕುಗಳ ಸಂಸ್ಥೆಯ ಅಧ್ಯಕ್ಷೆ ಮಹೇಶ್ವರಿ ಎಸ್‌. ವಾಲಿ ಸಲಹೆ ನೀಡಿದರು.

ಗ್ರಾಹಕರ ಹಕ್ಕುಗಳ ಸಂಸ್ಥೆ ಹಾಗೂ ಪೊಲೀಸ್‌ ಇಲಾಖೆ ಆಶ್ರಯದಲ್ಲಿ ನಗರದ ಸರ್ದಾರ್‌ ವಲ್ಲಭಭಾಯಿ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಹೆಲ್ಮೆಟ್‌ ವಿತರಣೆ ಹಾಗೂ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಸಂಚಾರ ನಿಯಮಗಳನ್ನು ಕಟ್ಟುನಿಟ್ಟು ಮಾಡುವುದು ನಮ್ಮ ತಲೆಯನ್ನು ಕಾಯುವುದಕ್ಕೆ ಹೊರತು ಬೇರೇನೂ ಅಲ್ಲ. ಲಕ್ಷಾಂತರ ಹಣ ಕೊಟ್ಟು ಬೈಕ್‌ ಖರೀದಿಸುವವರು ಸಾವಿರ ರೂಪಾಯಿ ಕೊಟ್ಟು ಹೆಲ್ಮೆಟ್‌ ಖರೀದಿಸಲು ಹಿಂದೇಟು ಹಾಕುತ್ತಾರೆ. ವಾಹನಗಳು ನಮ್ಮ ಸಮಯವನ್ನು ಉಳಿಸಲು ಬಳಕೆಯಾಗಬೇಕೆ ಹೊರತು; ಜೀವನವನ್ನೇ ಅರ್ಧಕ್ಕೆ ಮುಗಿಸುವಂತಾಗಬಾರದು’ ಎಂದರು.

‘ಎಷ್ಟೋ ಸಾರಿ ಜಾಗರೂಕತೆಯಿಂದ ವಾಹನ ಓಡಿಸುವಾಗಲೂ ಮತ್ತೊಬ್ಬರ ತಪ್ಪಿನಿಂದ ಅಪಘಾತಗಳು ಸಂಭವಿಸುತ್ತವೆ. ಅಪಘಾತದಲ್ಲಿ ಗಾಯಗೊಂಡರೆ ಜೀವನವಿಡೀ ನರಳಬೇಕು. ಒಂದು ವೇಳೆ ಪ್ರಾಣಹೋದರೆ ಅವರನ್ನು ನಂಬಿದ ಕುಟುಂಬದವರು, ಸ್ನೇಹಿತರು ಪರಿತಪಿಸಬೇಕು. ನಾವು ಮಾಡುವ ತಪ್ಪುಗಳು ಇನ್ನೊಬ್ಬರಿಗೆ ಶಿಕ್ಷೆಯಾಗುತ್ತವೆ. ಈ ವಿಚಾರದಲ್ಲಿ ಯುವ ಸಮುದಾಯ ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎಂದೂ ಅವರು ಕಿವಿಮಾತು ಹೇಳಿದರು.

50 ವಾಹನ ಸವಾರರಿಗೆ ಸಂಸ್ಥೆಯಿಂದ ಉಚಿತವಾಗಿ ಹೆಲ್ಮೆಟ್‌ ಹಾಕಿ ಶುಭ ಕೋರಲಾಯಿತು. ಹೆಲ್ಮೆಟ್‌ ವಿತರಣೆ ಕಾರ್ಯಕ್ರಮವನ್ನು ನಗರದ ಮೂರು ಭಾಗಗಳಲ್ಲಿ ಅ. 18ರಿಂದ 22ರವರೆಗೆ ಮುಂದುವರಿಸಲಾಗುವುದು ಎಂದೂ ಮಹೇಶ್ವರಿ ತಿಳಿಸಿದರು.

ಸಂಚಾರ ಠಾಣೆ–2ರ ಸಿಪಿಐ ವೀರೇಶ ಕಳ್ಳಿಗುಡ್ಡ, ಸಂಚಾರ ಠಾಣೆ–1ರ ಸಿಪಿಐ ಶಾಂತಿನಾಥ, ಪಿಎಸ್‌ಐಗಳಾದ ಭಾರತಿಬಾಯಿ ಧನ್ನಾ, ಹುಸೇನ್‌ ಪಾಷಾ, ನಜಮಾ ಸುಲ್ತಾನಾ, ಶಾಂತಿಬಾಯಿ, ಮುಖಂಡರಾದ ವಾಜೀದ್‌ ಅಲಿ ರಂಜೋಳಿ, ಮೋದಿನ್‌ ಪಟೇಲ್‌ ಅಣಬಿ, ಮುದಾಸೀರ ಫರಾಜ್‌, ಎಂ.ಡಿ. ಖಾಲಿಕ್‌, ಅರ್ಷದ್‌ ಖಾನ್‌, ಪ್ರವೀಣ, ಜಿಲಾನ ಗುತ್ತೇದಾರ, ಅಬ್ದುಲ್‌ ವಾಜೀದ್, ಅರವಿಂದ ಭಂಡಾರಿ, ಮೆಹಬೂಬ್‌ ಗುತ್ತೇದಾರ ಇದ್ದರು.

ಪ್ರತಿಕ್ರಿಯಿಸಿ (+)