ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಕೂಲಿ ಕಾರ್ಮಿಕರಿಗೆ ಬರ, ಕಳೆ ನಾಶಕಗಳಿಗೆ ಮೊರೆ

Last Updated 21 ಜುಲೈ 2020, 19:45 IST
ಅಕ್ಷರ ಗಾತ್ರ

ವಾಡಿ:ನಾಲವಾರ ವಲಯದಲ್ಲಿ ಸತತ ಮಳೆಯಿಂದ ಬೆಳೆಗಳ ಮಧ್ಯೆ ಯಥೇಚ್ಛವಾಗಿ ಕಳೆಗಳು ಬೆಳೆದು ನಿಂತಿದ್ದು, ಬೆಳೆಗಳಿಗೆ ಸವಾಲು ಹಾಕುತ್ತಿವೆ. ಇನ್ನೊಂದೆಡೆ ಕೂಲಿಯಾಳುಗಳು ಸಿಗದ ಕಾರಣ ರೈತರು ಕಳೆಗಳ ಹತೋಟಿಗೆ ಮಾರಕ ಕಳೆನಾಶಕಗಳ ಮೊರೆ ಹೊಗುತ್ತಿದ್ದಾರೆ. ಹೊಲದಲ್ಲಿ ಹುಟ್ಟಿ ಬೆಳೆಯುವ ಎಲ್ಲಾ ರೀತಿಯ ಕಿರು ಕಸಗಳನ್ನು ಕಳೆನಾಶಕ ಬಳಸಿ ನಾಶಪಡಿಸಲಾಗುತ್ತಿದೆ.

ನಾಲವಾರ ವಲಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ರೈತರು ಕಳೆನಾಶಕ ಸಿಂಪಡಣೆಗೆ ಮುಂದಾಗಿರುವುದು ಕಂಡುಬರುತ್ತಿದೆ. ಕಳೆ ಕೀಳಲು ಕೂಲಿ ಕಾರ್ಮಿಕರ ಕೊರತೆ ಒಂದೆಡೆಯಾದರೆ ಅತಿ ಕಡಿಮೆ ಖರ್ಚಿನಲ್ಲಿ ಕಳೆ ನಿಯಂತ್ರಿಸಬಹುದು ಎಂಬ ವಿಚಾರ ರೈತರನ್ನು ಕಳೆನಾಶಕ ಔಷಧಗಳ ಹಿಂದೆ ಬೀಳುವಂತೆ ಮಾಡುತ್ತಿದೆ.

ಹೆಸರು, ತೊಗರಿ ಹಾಗೂ ಹತ್ತಿ ಬೆಳೆಗಳ ಮಧ್ಯೆ ಬೆಳೆದ ಕಳೆಗಳು ರೈತರ ಆರ್ಥಿಕ ಶಕ್ತಿಗೆ ಸವಾಲಾಗಿ ಪರಿಣಮಿಸುತ್ತಿವೆ. ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತ ಕಳೆಗಳನ್ನು ಕೀಳಲು ಕೂಲಿಯಾಳುಗಳಿಗೆ ಆರೇಳು ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಆದರೆ ಕಳೆನಾಶಕಕ್ಕೆ ಕೇವಲ 400– 500 ರೂಪಾಯಿ ಖರ್ಚು ಮಾಡಿದರೆ ಸಾಕು. ಇದು ರೈತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಕಳೆನಾಶಕದಿಂದ ಭೂಮಿಯ ಫಲವತ್ತತೆ, ಪರಿಸರ ಹಾಗೂ ಮನುಷ್ಯರ ಮೇಲಾಗುವ ಅನಾಹುತದ ಬಗ್ಗೆ ಅರಿವಿರದ ರೈತರು ವ್ಯಾಪಕ ಪ್ರಮಾಣದಲ್ಲಿ ಸಿಂಪಡಣೆಗೆ ಮುಂದಾಗಿರುವುದು ಆತಂಕ ಮೂಡಿಸುತ್ತಿದೆ.

ಕೃಷಿ ಇಲಾಖೆ ಅಧಿಕಾರಿಗಳು ಕಳೆನಾಶಕ ಬಳಕೆಯಿಂದಾಗುವ ಅಪಾಯದ ಕುರಿತು ಹಾಗೂ ಅದರ ಬದಲು ಜೈವಿಕ ಮಾರ್ಗೋಪಾಯಗಳ ಕುರಿತು ರೈತರಲ್ಲಿ ಅರಿವು ಮೂಡಿಸಬೇಕಾಗಿದೆ.

ವಿಜ್ಞಾನಿಗಳು ಹೇಳುವುದೇನು: ಕಳೆನಾಶಕದ ರಾಸಾಯನಿಕ ಕಣಗಳು ಭೂಮಿಗೆ ಸೇರಿದರೆ ಅವು ಜೈವಿಕ ವಿಘಟನೆಯಾಗದೇ ಭೂಮಿಯಲ್ಲಿಯೇ ಉಳಿದು ಕೆರೆ, ನದಿ, ಅಂತರ್ಜಲ, ಮತ್ತು ಆಮ್ಲಜನಕಕ್ಕೆ ಅತಿ ಸುಲಭವಾಗಿ ಸೇರುತ್ತವೆ. ಇದು ಮನುಷ್ಯನ ದೇಹ ಸೇರಿ ಕ್ಯಾನ್ಸರ್, ಸಣ್ಣಮಕ್ಕಳಿಗೆ ಮೈತುರಿಕೆ, ಬುದ್ಧಿಮಾಂದ್ಯತೆ, ಚರ್ಮದ ಕಾಯಿಲೆ, ದೊಡ್ಡವರಲ್ಲಿ ಬಂಜೆತನ ತರಲಿದೆ, ಪ್ರಾಣಿ, ಪಕ್ಷಿ ಸಂಕುಲಕ್ಕೂ ಕಂಟಕವಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT