ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಇಂದಿರಾ ಕ್ಯಾಂಟೀನ್‌ ವಾರದಲ್ಲಿ ಪುನರಾರಂಭಿಸಿ: ಜಿಲ್ಲಾಧಿಕಾರಿ

ಪೌರ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ
Published 29 ಜೂನ್ 2024, 15:57 IST
Last Updated 29 ಜೂನ್ 2024, 15:57 IST
ಅಕ್ಷರ ಗಾತ್ರ

ಕಲಬುರಗಿ: ‘ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಬಡ ಜನರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಮುಂದಿನ ಒಂದು ವಾರದೊಳಗೆ ಪುನರ್‌ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪೌರ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಈ ಹಿಂದೆ ಮೊದಲ ಹಂತದಲ್ಲಿ ಆರಂಭಗೊಂಡು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಕಲಬುರಗಿ ನಗರದಲ್ಲಿನ ಜಿಮ್ಸ್ ಆಸ್ಪತ್ರೆ, ಪಾಲಿಕೆ ಕಚೇರಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಎಪಿಎಂಸಿ ಕಚೇರಿ ಹೀಗೆ 7 ಇಂದಿರಾ ಕ್ಯಾಂಟೀನ್‌ಗಳನ್ನು ವಾರದಲ್ಲಿ ಪುನರ್ ಆರಂಭಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಇನ್ನು, ಎರಡನೇ ಹಂತದಲ್ಲಿ ಕಲಬುರಗಿ ನಗರದ ಜಯದೇವ ಆಸ್ಪತ್ರೆ ಮತ್ತು ಕಣ್ಣಿ ಮಾರ್ಕೆಟ್, ಅಫಜಲಪುರ, ಆಳಂದ, ಶಹಾಬಾದ್,‌ ಯಡ್ರಾಮಿ, ಜೇವರ್ಗಿ, ವಾಡಿ ಹಾಗೂ ಸೇಡಂನಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುತ್ತಿದೆ. ಈಗಾಗಲೇ ಸೇಡಂ, ಅಫಜಲಪುರದಲ್ಲಿ ಪ್ರಿಕಾಸ್ಟ್ ಸ್ಟ್ರಕ್ಚರ್‌ನಡಿ ಕ್ಯಾಂಟೀನ್ ನಿರ್ಮಿಸಲಾಗಿದೆ. ಕೇವಲ ಎಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸ ಬಾಕಿ ಉಳಿದಿದ್ದು, ಅದನ್ನು ಬೇಗ ಮುಗಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಇನ್ನುಳಿದ ಕಡೆ ನಿವೇಶನವನ್ನು ಕೂಡಲೇ ಕ್ಯಾಂಟೀನ್ ನಿರ್ಮಾಣ ಜವಾಬ್ದಾರಿ ಹೊತ್ತಿಕೊಂಡಿರುವ ಎಕ್ಸಲ್ ಏಜೆನ್ಸಿಗೆ ಹಸ್ತಾಂತರಿಸಬೇಕು’ ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ್‌ ಮಿಷನ್ 1.0 ಮತ್ತು 2.0 ಕಾರ್ಯಕ್ರಮಗಳ ಕುರಿತು ಪ್ರಗತಿ ಪರಾಮರ್ಶಿಸಲಾಯಿತು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ್‌ ದೌಲಾ ಮಾತನಾಡಿ, ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿ ವಿವರಿಸಿದರು. ಮೊದಲನೇ ಹಂತದಲ್ಲಿ ಆರಂಭವಾದ 9 ಕ್ಯಾಂಟೀನ್ ಪೈಕಿ ಚಿತ್ತಾಪುರ ಮತ್ತು ಚಿಂಚೋಳಿ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಉಪಾಹಾರ, ಊಟ ಉಣಬಡಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಯು., ಪಾಲಿಕೆಯ ಇ.ಇ. ಶಿವಣಗೌಡ ಪಾಟೀಲ ಸೇರಿದಂತೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT