ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ| ಮಳೆ: ರೈತರಲ್ಲಿ ಬೆಳೆಹಾನಿ ಆತಂಕ

1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ
Published 25 ಜುಲೈ 2023, 5:28 IST
Last Updated 25 ಜುಲೈ 2023, 5:28 IST
ಅಕ್ಷರ ಗಾತ್ರ

ಜೇವರ್ಗಿ: ಯಡ್ರಾಮಿ ಮತ್ತು ಜೇವರ್ಗಿ ತಾಲ್ಲೂಕಿನಲ್ಲಿ ಈವರೆಗೆ ಒಟ್ಟು 1.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿದೆ. ಕಳೆದ ಕೆಲ ದಿನಗಳಿಂದ ಸತತ ಮಳೆಯಿಂದಾಗಿ ರೈತರು ಬೆಳೆಹಾನಿಯ ಆತಂಕದಲ್ಲಿದ್ದಾರೆ.

ಮುಂಗಾರಿನ ಬೆಳೆಗಳಾದ ಹತ್ತಿ, ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ, ಗುರೆಳ್ಳು ಸೇರಿದಂತೆ ಇತರೆ ಅಲ್ಪಾವಧಿ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಸತತ ಮಳೆಯಿಂದಾಗಿ ಜಮೀನುಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದೆ. ಇದರಿಂದ ಬೆಳೆ ಹಾನಿಯಾಗುವ ಸಂಭವವಿದ್ದು, ಶೀಘ್ರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು ಎಂದು ಜೇವರ್ಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ರಂಗಣ್ಣಗೌಡ ಮಾಹಿತಿ ನೀಡಿದ್ದಾರೆ.

ರೈತರು ಬಿತ್ತನೆ ಪೂರ್ವದಲ್ಲಿ ಭೂಮಿ ಯನ್ನು ಚೆನ್ನಾಗಿ ಹದಗೊಳಿಸಬೇಕು. ರೋಗ ಮತ್ತು ಕೀಟಗಳ ಹತೋಟಿಗಾಗಿ ಬೀಜಗಳ ಬೀಜೋಪಚಾರ ಕೈಗೊಳ್ಳ ಬೇಕು. ಉತ್ತಮ ಫಸಲು ಬರುತ್ತದೆ. ಆದರೆ ಜಿಟಿಜಿಟಿ ಮಳೆಯಿಂದಾಗಿ ಬಿತ್ತನೆ ಮಾಡಿದ ಬೆಳೆಗಳು ಹಾನಿಯಾಗಿರುವ ಕುರಿತು ಮಾಹಿತಿ ಈವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಹೊಲಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದೆ. ಇದರಿಂದಾಗಿ ಈಗಾಗಲೇ ಬಿತ್ತನೆ ಮಾಡಿರುವ ಅಲ್ಪಾವಧಿ ಬೆಳೆಗಳು ನೀರಿನಲ್ಲಿ ನಿಂತಿದ್ದು, ಸಂಪೂರ್ಣ ಹಾನಿಯಾಗುವ ಸಾಧ್ಯತೆಯಿದೆ. ಪ್ರತಿ ಎಕರೆ ಬಿತ್ತನೆಗೆ ಸುಮಾರು 10 ಸಾವಿರದಷ್ಟು ಖರ್ಚು ಮಾಡಲಾಗಿದ್ದು, ರೈತರು ನಷ್ಟದ ಆತಂಕದಲ್ಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಕೃಷಿ ಇಲಾಖೆಯಿಂದ ವಿತರಿಸಬೇಕು ಎಂದು ಕಟ್ಟಿಸಂಗಾವಿ ಗ್ರಾಮದ ರೈತ ಮರೆಪ್ಪ ಹಸನಪೂರ ಮನವಿ ಮಾಡಿದರು.

ಮಳೆಯಿಂದಾಗಿ ಜೇವರ್ಗಿ, ನೆಲೋಗಿ ಹಾಗೂ ಆಂದೋಲಾ ಹೋಬಳಿಗಳಲ್ಲಿ 17 ಮನೆಗಳು ಕುಸಿದಿವೆ. ಈವರೆಗೆ ಜೀವ, ಪ್ರಾಣ, ಬೆಳೆ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ.
ರಾಜೇಶ್ವರಿ ಪಿ.ಎಸ್., ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT