ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಡಿಸೆಂಬರ್ 8ಕ್ಕೆ ಜಯದೇವ ಆಸ್ಪತ್ರೆ ಕಟ್ಟಡ ಪೂರ್ಣ

ಆಸ್ಪತ್ರೆ ಕಟ್ಟಡ ವೀಕ್ಷಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ
Published 29 ಅಕ್ಟೋಬರ್ 2023, 14:50 IST
Last Updated 29 ಅಕ್ಟೋಬರ್ 2023, 14:50 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದ ಬಳಿ ನಿರ್ಮಾಣವಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಡಿಸೆಂಬರ್ 8ರ ವೇಳೆಗೆ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ಭಾನುವಾರ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜನವರಿ ಮೊದಲ ವಾರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆಸ್ಪತ್ರೆ ಉದ್ಘಾಟಿಸುವ ಉದ್ದೇಶವಿದೆ. ಹೀಗಾಗಿ, ಡಿಸೆಂಬರ್‌ ಮೊದಲ ವಾರದಲ್ಲಿ ಕಟ್ಟಡ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಡಾ. ಸಿ.ಎನ್. ಮಂಜುನಾಥ್ ಅವರು ಈಗಾಗಲೇ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಟೆಂಡರ್ ಮೂಲಕ ಅಂತಿಮಗೊಳಿಸಿದ್ದಾರೆ. ಆಸ್ಪತ್ರೆಗೆ ಅಗತ್ಯವಾದ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಕೆಐಯುಡಿಎಫ್‌ಸಿ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ. ಆಸ್ಪತ್ರೆಗೆ ಮೂರು ಕ್ಯಾಥ್‌ಲ್ಯಾಬ್‌ಗಳು ಅಗತ್ಯವಿದ್ದು, ಅವುಗಳನ್ನು ಅಳವಡಿಸುವ ಕೆಲಸವೂ ನಡೆಯಲಿದೆ. ವಿದ್ಯುತ್‌, ಜನರೇಟರ್, ಎಸ್ಟಿಪಿ ಘಟಕವನ್ನೂ ನಿರ್ಮಿಸಲಾಗುವುದು’ ಎಂದರು.

371 (ಜೆ) ಕಲಂ ಮೂಲಕ ಕೆಕೆಆರ್‌ಡಿಬಿ ರಚನೆಯಾಗಿದ್ದು, ಅದರ ನೆನಪಿಗಾಗಿ ಆಸ್ಪತ್ರೆಯಲ್ಲಿ 371 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮಂಡಳಿಯು ₹ 182 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ ₹ 236 ಕೋಟಿ ಹಣ ಬೇಕಾಗಲಿದೆ. ಉಳಿದ ಹಣವನ್ನೂ ಮಂಡಳಿ ಬಿಡುಗಡೆ ಮಾಡಲಿದೆ ಎಂದು ಭರವಸೆ ನೀಡಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಾತನಾಡಿ, ‘ನಾನು ಮಂಡಳಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನವೇ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ಕರೆ ಮಾಡಿ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಗೆ ನೆರವು ನೀಡುವಂತೆ ಕೋರಿದ್ದರು. ಇಡೀ ಆಸ್ಪತ್ರೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಮಂಡಳಿಯೇ ಭರಿಸುತ್ತಿದ್ದು, ಮತ್ತೊಂದು ಕಂತಿನ ಹಣ ಸೋಮವಾರ ಬಿಡುಗಡೆ ಮಾಡಲಾಗುವುದು’ ಎಂದರು.

ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ‘ಈ ಆಸ್ಪತ್ರೆ ಉದ್ಘಾಟನೆಯಾದ ಬಳಿಕವೂ ಉಪಕರಣಗಳ ಸ್ಥಳಾಂತರ ಹಾಗೂ ಜೋಡಣೆಗೆ ಐದಾರು ತಿಂಗಳು ಬೇಕಾಗುತ್ತದೆ. ಆದರೆ, ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಗಮನ ಹರಿಸಲಾಗುವುದು. ಸಿಬ್ಬಂದಿ ನೇಮಕಾತಿ ಪ್ರಕ್ರಿಯೂ ನಡೆದಿದೆ. 125 ಐಸಿಯು ಬೆಡ್‌, 200 ಸಾಮಾನ್ಯ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

‘ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಆರಂಭವಾದ ಬಳಿಕ ನಾಲ್ಕು ಲಕ್ಷ ಹೊರರೋಗಿಗಳು ಚಿಕಿತ್ಸೆ ಪಡೆದಿದ್ದು, 30 ಸಾವಿರ ರೋಗಿಗಳು ಆಂಜಿಯೊಪ್ಲಾಸ್ಟಿಗೆ ಒಳಗಾಗಿದ್ದಾರೆ. 1 ಸಾವಿರ ರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ವಿವರಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶಬಾಬು, ಕಲಬುರಗಿ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಬಾಬುರಾವ್, ಕಾಂಗ್ರೆಸ್ ಮುಖಂಡರಾದ ಶರಣು ಭೂಸನೂರ, ನೀಲಕಂಠರಾವ್ ಮೂಲಗೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT