‘ಜಯದೇವ’ದಲ್ಲಿ ರೋಗಿಗಳ ನೂಕುನುಗ್ಗಲು, ಹೆಚ್ಚಬೇಕಿದೆ ಹಾಸಿಗೆ ಸಾಮರ್ಥ್ಯ; ವೈದ್ಯರು

7

‘ಜಯದೇವ’ದಲ್ಲಿ ರೋಗಿಗಳ ನೂಕುನುಗ್ಗಲು, ಹೆಚ್ಚಬೇಕಿದೆ ಹಾಸಿಗೆ ಸಾಮರ್ಥ್ಯ; ವೈದ್ಯರು

Published:
Updated:
Deccan Herald

ಕಲಬುರ್ಗಿ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸ್ಥಳೀಯ ಶಾಖೆಯಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ ದ್ವಿಗುಣಗೊಳಿಸಬೇಕು ಹಾಗೂ ವೈದ್ಯರು, ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಬಲವಾಗುತ್ತಿದೆ.

ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌)ಯ ಕಟ್ಟಡದ ಮೂರನೇ ಮಹಡಿಯಲ್ಲಿರುವ ಈ ಶಾಖೆಯನ್ನು ಏಪ್ರಿಲ್‌ 23, 2016ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಆರಂಭದ ದಿನದಿಂದಲೂ ನಿರಂತರವಾಗಿ ರೋಗಿಗಳ ಚಿಕಿತ್ಸೆ ನೀಡಲಾಗುತ್ತಿದೆ.

ಈ ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಅಂದಾಜು 20 ಕೋಟಿ ವೆಚ್ಚದಲ್ಲಿ ಇದನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಗಳ ಕಾಲವೂ ತುರ್ತು ಚಿಕಿತ್ಸಾ ಸೇವೆ ನೀಡಲಾಗುತ್ತಿದೆ. ಹೊರ ರೋಗಿಗಳ ಹಾಗೂ ಒಳರೋಗಿಗಳ ವಿಭಾಗಗಳು, ಸ್ಪೆಷಲ್‌ ರೂಮ್‌, ಸಾಮಾನ್ಯ ರೂಮ್‌ ಇವೆ. ನಾನ್‌ ಇನ್‌ವೇಸಿವ್‌ ಪ್ರಯೋಗಾಲಯಗಳು (ಇಸಿಜಿ/ಎಕೋ/ಟಿಎಂಟಿ/ಎಕ್ಸರೇ), ಬಯೊ ಕೆಮಿಸ್ಟ್ರಿ/ಪೆಥಾಲಜಿ ಮತ್ತು ಮೈಕ್ರೊ ಬಯಾಲಜಿ ಪ್ರಯೋಗಾಲಯಗಳು, ಕ್ಯಾತ್‌ಲ್ಯಾಬ್‌, ರೇಡಿಯಾಲಜಿ, ಓಪನ್‌ ಹಾರ್ಟ್‌ ಸರ್ಜರಿ ವಿಭಾಗಗಳು ಸೇವೆ ನೀಡುತ್ತಿವೆ. ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಸೌಲಭ್ಯವೂ ಇಲ್ಲಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶದ ಜನರಿಗೆ ಆ ಆಸ್ಪತ್ರೆ ಅನುಕೂಲವಾಗಿದೆ. ಹೃದಯ ಚಿಕಿತ್ಸೆಗಾಗಿ ಅವರು ಹೈದರಾಬಾದ್‌, ಮುಂಬಯಿ, ಸೊಲ್ಲಾಪುರ, ಬೆಂಗಳೂರಿಗೆ ಅಲೆಯುವುದು ತಪ್ಪಿದ್ದು, ಕಲಬುರ್ಗಿಯಲ್ಲಿಯೇ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ.

ಸ್ವಂತ ಕಟ್ಟಡ ನಿರ್ಮಿಸಿ: ‘ಈ ಸಂಸ್ಥೆ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಯದೇವ ಆಸ್ಪತ್ರೆಗಾಗಿಯೇ ಸ್ವಂತ ಕಟ್ಟಡ ನಿರ್ಮಿಸಬೇಕು’ ಎನ್ನುವುದು ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ)ಯ ಅಧ್ಯಕ್ಷ ಮರನಾಥ ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ.ಪಾಟೀಲ ಅವರ ಆಗ್ರಹ.

‘ಈ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಅವರಿಗೆ ಪತ್ರ ಬರೆದಿದ್ದೇವೆ. ಈ ಸಂಸ್ಥೆಯ ಸೇವೆ ಇನ್ನಷ್ಟು ಜನರಿಗೆ ಸಿಗುವಂತಾಗಲು ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು’ ಎಂದು ಅವರು ಹೇಳುತ್ತಾರೆ.

‘ಹೊರರೋಗಿಗಳ ಸಂಖ್ಯೆ ನಿತ್ಯ 100ಕ್ಕೂ ಹೆಚ್ಚು ಇರುತ್ತದೆ. ವೈದ್ಯರಿಗೆ ಕಾರ್ಯದ ಒತ್ತಡ ಹೆಚ್ಚಿದ್ದು, ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಬೇಕು. ಮೂಲಸೌಕರ್ಯ ಹಾಗೂ ಉಪಕರಣ ಹೆಚ್ಚಿಸುವುದು ಅನಿವಾರ್ಯ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಆಸ್ಪತ್ರೆಯ ವೈದ್ಯರೊಬ್ಬರು.

ಏಳು ತಜ್ಞ ವೈದ್ಯರು

ಕಲಬುರ್ಗಿ ಶಾಖೆಯಲ್ಲಿ ಕಾರ್ಡಿಯಾಲಜಿ ವಿಭಾಗದಲ್ಲಿ ಐವರು ಹಾಗೂ ಕಾರ್ಡಿಯಾಕ್‌ ಸರ್ಜರಿ ವಿಭಾಗದಲ್ಲಿ ಮೂವರು ತಜ್ಞ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

* ರೋಗಿಗಳ ಸಂಖ್ಯೆ ಹೆಚ್ಚಿದ್ದು, ಹಾಸಿಗೆಗಳ ಸಾಮರ್ಥ್ಯ 200ಕ್ಕೆ ಹೆಚ್ಚಿಸಬೇಕು. ಅಗತ್ಯಕ್ಕೆ ತಕ್ಕಷ್ಟು ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು.
–ಅಮರನಾಥ ಪಾಟೀಲ, ಎಚ್‌ಕೆಸಿಸಿಐ ಅಧ್ಯಕ್ಷ

ಅಂಕಿಅಂಶ

* 100 ಹಾಸಿಗೆಗಳ ಸಾಮರ್ಥ್ಯ
* 9,085 ಒಳರೋಗಿಗಳಾಗಿ ಚಿಕಿತ್ಸೆ ಪಡೆದವರು
* 4,695 ಆಂಜಿಯೊಗ್ರಾಮ್‌ ಪತಾಸಣೆಗೊಳಗಾದವರು
* 67,114 ಇಸಿಜಿ ತಪಾಸಣೆಗೊಳಗಾದವರು
* 1,05,034 ಹೊರರೋಗಿಗಳು
(ಏಪ್ರಿಲ್‌ 23, 2016ರಿಂದ ಆಗಸ್ಟ್‌ 31, 2018ರ ವರೆಗೆ. ಆಧಾರ: ಆಸ್ಪತ್ರೆಯ ಮಾಹಿತಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !