ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳೊಂದಿಗೆ ಸಂವಾದ ನಡೆಸಿದ ನ್ಯಾಯಮೂರ್ತಿ

554 ಕೈದಿಗಳಿರುವಲ್ಲಿ ಒಂದು ಸಾವಿರ ಜನ; ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
Last Updated 26 ಸೆಪ್ಟೆಂಬರ್ 2022, 6:07 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾಯಮೂರ್ತಿ ಬಿ. ವೀರಪ್ಪ, ನ್ಯಾಯಮೂರ್ತಿಗಳಾದ ಎಚ್.ಟಿ. ನರೇಂದ್ರ ಪ್ರಸಾದ್, ಎಂಜಿಎಸ್ ಕಮಲ್, ಸಿ.ಎಂ. ಪೂಣಚ್ಚ, ಅನಿಲ್ ಬಿ. ಕಟ್ಟಿ ಅವರು ನಗರದ ಜೇವರ್ಗಿ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭಾನುವಾರ ಭೇಟಿ ನೀಡಿ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ನಂತರ ಕೈದಿಗಳೊಂದಿಗೆ ಸಂವಾದ ನಡೆಸಿದರು. ನಂತರ ಅಹವಾಲು ಸ್ವೀಕರಿಸಿದರು.

ವೈದ್ಯರು ಸರಿಯಾಗಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಪಡೆದರು. ಕಾರಾಗೃಹದ ಅಧೀಕ್ಷಕ ರಂಗನಾಥ್ ಅವರು, ‘ಜೈಲಿನಲ್ಲಿ ಮೂವರು ವೈದ್ಯರಿದ್ದಾರೆ. ಮಹಿಳಾ ವೈದ್ಯೆ ವಾರಕ್ಕೊಮ್ಮೆ ಬರುತ್ತಾರೆ’ ಎಂದರು. ‘ಮಹಿಳಾ ವೈದ್ಯರು ನಿತ್ಯವೂ ಭೇಟಿ ನೀಡಬೇಕಾಗುತ್ತದೆ’ ಎಂದರು.

ನಂತರ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯಾವುದೋ ದುಡುಕಿನ ಸಂದರ್ಭದಲ್ಲಿ ತಪ್ಪಿ ಮಾಡಿ ಶಿಕ್ಷೆ ಅನುಭವಿಸಿದ್ದೀರಿ. ಇಲ್ಲಿಗೆ ಬಂದ ಮೇಲೆ ಸುಧಾರಣೆ ಮಾಡಿಕೊಳ್ಳಬೇಕು. ಸಮಾಜಕ್ಕೆ ನಾನು ಏನು ಮಾಡುತ್ತಿದ್ದೇನೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಹೊಸ ವ್ಯಕ್ತಿಯಾಗಬೇಕು. ಅಂದಾಗಲೇ ಜನ್ಮ ಸಾರ್ಥಕವಾಗುತ್ತದೆ. ಬೆಳಿಗ್ಗೆ ಎದ್ದು ಜೈಲಿನ ಆವರಣದಲ್ಲಿ ವಾಯು ವಿಹಾರ, ಯೋಗ ಮಾಡಬೇಕು. ಇಲ್ಲಿಂದ ಆಚೆ ಹೋದಾಗ ನೀವು ನಿಮ್ಮ ಊರಿಗೆ ಮಾದರಿಯಾಗಬೇಕು. ಈ ರೀತಿ ನಿಮ್ಮ ಊರಿಗೆ ಮಾದರಿಯಾಗಬೇಕು. ಆ ರೀತಿ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬೇಕು’ ಎಂದು ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಹುತೇಕ ಕೈದಿಗಳು ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಬರೀ ಕಾನೂನು ಸೇವಾ ಪ್ರಾಧಿಕಾರ ಸರಿ ಇಲ್ಲ, ನ್ಯಾಯಾಧೀಶರು ಸರಿ ಇಲ್ಲ ಎಂದು ಆರೋಪವನ್ನೇ ಮಾಡುತ್ತಾರೆ. ಕೊಲೆ ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದರು.

ಇಲ್ಲಿ ಜಾಗದ ಕೊರತೆ ಇರುವುದು ಸೇರಿದಂತೆ ಕೈದಿಗಳು ಹೇಳಿದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಕಳುಹಿಸುತ್ತೇನೆ. ಬೆಂಗಳೂರಿನ ಪರಪ್ಪನ ಅಗ್ರಹಾರವೂ ಹೀಗೇ ಇತ್ತು. ಈಗ ಸರಿಯಾಗಿದೆ. ಇಲ್ಲಿಯವರೆಗೆ 14 ಜಿಲ್ಲೆಗಳ 22 ಜೈಲುಗಳಿಗೆ ಭೇಟಿ ನೀಡಿದ್ದೇನೆ. ಕಾನೂನು ಬದ್ಧವಾಗಿ ಕೈದಿಗಳಿಗೆ ಯಾವ ಬಗೆಯ ಕಾನೂನು ನೆರವು ನೀಡಬೇಕೋ ಅದನ್ನು ನೀಡಲಾಗುವುದು ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಬಿ. ಪಾಟೀಲ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ, ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ವಿಘ್ನೇಶ್ವರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಎಂ. ಚೌಗಲಾ ಇದ್ದರು.

ಹೆಚ್ಚು ಖಾರ ಹಾಕದಂತೆ ತಾಕೀತು

ಕಾರಾಗೃಹದ ಅಡುಗೆ ಕೋಣೆಗೆ ಭೇಟಿ ನೀಡಿದ ನ್ಯಾ. ಬಿ. ವೀರಪ್ಪ ಅವರು ಸಾಂಬಾರ್ ಸೇವಿಸಿದರು. ಸಾಕಷ್ಟು ಖಾರ ಹಾಕಿದ್ದನ್ನು ಗಮನಿಸಿದ ಅವರು, ಅಡುಗೆಯವರನ್ನು ಕರೆಸಿ ಅಡುಗೆಯಲ್ಲಿ ಹೆಚ್ಚು ಖಾರ ಹಾಕಬಾರದು. ಕೈದಿಗಳಿಗೆ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT