ಸೇಡಂ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮೂರನೇ ದಿನ ಸೋಮವಾರವೂ ಜಿಟಜಿಟಿ ಮಳೆ ಮುಂದುವರಿಯಿತು. ಕಮಲಾವತಿ ನದಿ ನೀರಿನ ಪ್ರವಾಹ ತಗ್ಗಿದ್ದು, ಜನ ಸುಗಮವಾಗಿ ಸಂಚರಿಸಿದರು. ಆದರೆ ಕಾಗಿಣಾ ನದಿ ನೀರಿನ ಪ್ರವಾಹ ಮೂರನೇ ದಿನವು ಮುಂದುವರೆದಿದ್ದು, ತಾಲ್ಲೂಕಿನ ಸಂಗಾವಿ(ಟಿ), ಯಡ್ಡಳ್ಳಿ, ಸಂಗಾವಿ(ಎಂ) ಹಾಗೂ ಮಳಖೇಡ ಹಳೇ ಸೇತುವೆ ಮೇಲೆ ನೀರು ತುಂಬಿ ಹರಿಯಿತು. ಇದರಿಂದಾಗಿ ಮಳಖೇಡ ಗ್ರಾಮದಿಂದ ಸಂಗಾವಿ(ಎಂ) ಗ್ರಾಮದ ಸಂಪರ್ಕ ಸ್ಥಗಿತಗೊಂಡಿತ್ತು.
ಕಾಗಿಣಾ ನದಿಗೆ ಮುಲ್ಲಾಮಾರಿ, ಚಂದ್ರಂಪಳ್ಳಿ, ನಾಗರಾಳ ಜಲಾಶಯ ಮತ್ತು ಬೆಣ್ಣೆತೊರೆ ನೀರು ಬಿಡುತ್ತಿರುವುದರಿಂದ ನದಿ ಪ್ರವಾಹ ಮುಂದುವರಿದಿದೆ. ಬೆಣ್ಣೆತೊರೆ ಮತ್ತು ಕಾಗಿಣಾ ನದಿ ನೀರಿನ ಸಂಗಮ ಕೇಂದ್ರವಾದ ಸಂಗಾವಿ(ಎಂ) ಬಳಿ ಕಿ.ಮೀ ದೂರದವರೆಗೆ ನೀರು ಕಾಣಿಸುತ್ತಿದೆ. ಎತ್ತ ನೋಡಿದರತ್ತ ನೀರಿನ ರಾಶಿಯೇ ಗೋಚರಿಸುತ್ತಿದೆ. ನೀರಿನ ವಿಸ್ತಾರ ಮತ್ತು ಪ್ರವಾಹದ ರಭಸ ವೇಗವಾಗಿದ್ದು, ಭೋರ್ಗರೆತದ ಸಪ್ಪಳ ಜನರಿಗೆ ಭಯ ಹುಟ್ಟಿಸುತ್ತಿದೆ. ತಾಲ್ಲೂಕಿನ ಮಳಖೇಡ ಗ್ರಾಮದ ಉತ್ತರಾಧಿ ಮಠದಲ್ಲಿ ಮೂರನೇ ದಿನವು ನೀರಿನ ಪ್ರವಾಹ ಕಂಡು ಬಂದಿತು. ತಾಲ್ಲೂಕಿನ ಬಿಬ್ಬಳ್ಳಿ-ಕಾಚೂರು ಸೇತುವೆ ಮೇಲಿನ ನೀರು ಇಳಿದಿದ್ದರೂ ಸಹ ವಾಹನ ಸವಾರರು ತೆರಳಲು ಪರದಾಡಿದರು. ನದಿ ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ರಾಶಿಗಟ್ಟಲೇ ಕಸ ಸೇತುವೆ ಮೇಲೆ ಸಂಗ್ರಹವಾಗಿದ್ದರಿಂದ, ಸವಾರರು ಪರದಾಡಿದರು.
ನೆಲಕ್ಕುರುಳಿದ ವಿದ್ಯುತ್ ಕಂಬಗಳು:
ತಾಲ್ಲೂಕಿನ ಕಾಚೂರು ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕರುಳಿವೆ. ನಾಲ್ಕೈದು ಕಂಬಗಳು ನೆಲಕ್ಕುರುಳಿದ್ದರಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಎರಡು ದಿನಗಳಿಂದ ಕಾಚೂರು ಗ್ರಾಮದ ಜನರು ವಿದ್ಯುತ್ ಸಂಪರ್ಕವಿಲ್ಲದೇ ಪರದಾಡಿದರು.
33 ಮನೆಗಳು ಉರುಳಿವೆ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಮದನಾ, ಗುಂಡಳ್ಳಿ(ಬಿ), ಹಣಮನಳ್ಳಿ, ತುನ್ನೂರ, ನಾವಚಾರ, ಬಿಲಾಕಲ್, ರಂಜೋಳ, ಆಡಕಿ, ಲಿಂಗಂಪಲ್ಲಿ, ಅರೆಬೊಮ್ನಳ್ಳಿ, ಸೇಡಂ, ಮಳಖೇಡ, ಕಾಚೂರು, ಮುಧೋಳ,ಇಟಕಾಲ್, ಶಿಲಾರಕೋಟ, ತೊಲ್ಮಾಮಿಡಿ, ಕೊತ್ತಪಲ್ಲಿ, ಮೋತಕಪಲ್ಲಿ, ಪಾಕಾಲ್, ಕಡಚರ್ಲಾ, ಕೊತ್ತಪಲ್ಲಿ ಗ್ರಾಮ ಸೇರಿದಂತೆ ಸುಮಾರು 33 ಮನೆಗಳು ಭಾಗಶಃ ಉರುಳಿವೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಮಳಖೇಡದಲ್ಲಿ ಕಾಳಜಿ ಕೇಂದ್ರ ಪ್ರಾರಂಭ:
ತಾಲ್ಲೂಕಿನ ಮಳಖೇಡ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ದರ್ಗಾ ಕಾಲೊನಿಯಲ್ಲಿ ಸರ್ಕಾರದಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 9 ಮೀನುಗಾರರ ಕುಟುಂಬಗಳು ನೆಲೆಸಿದ್ದು, ಊಟ ನೀಡಲಾಗುತ್ತಿದೆ. ಅಲ್ಲದೆ ಮಳಖೇಡದ ದರ್ಗಾ ಕಾಲೋನಿಯಲ್ಲಿಯೂ ಕಾಳಜಿ ಕೇಂದ್ರ ತೆರೆಯಲಾಗಿದ್ದು, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಭೇಟಿ ನೀಡಿದ್ದಾರೆ.
ಸೇಡಂ ತಾಲ್ಲೂಕು ಯಡ್ಡಳ್ಳಿ-ಸಂಗಾವಿ(ಟಿ) ಮಧ್ಯದ ನಾಲಾದಲ್ಲಿ ರಾಜು ಪತ್ತೆ ಕಾರ್ಯಾಚರಣೆಯಲ್ಲಿ ಸಂಗಾವಿ(ಟಿ) ಗ್ರಾಮದ ಪಲ್ಲವಿ ಕುಂಬಾರ ಮತ್ತು ಮಗುವನ್ನು ಬೋಟನಲ್ಲಿ ಕರೆದುಕೊಂಡು ಬರಲಾಯಿತು. ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಇದ್ದರು
ಸೇಡಂ ತಾಲ್ಲೂಕು ಗುಂಡಳ್ಳಿ(ಬಿ) ದಲ್ಲಿ ಮನೆ ಉರುಳಿರುವುದನ್ನು ಪಿಡಿಒ ರೇಣುಕಾ ಪರಿಶೀಲಿಸಿದರು
ಸೇಡಂ ತಾಲ್ಲೂಕು ಮಳಖೇಡದಲ್ಲಿ ಪ್ರಾರಂಭಿಸಿದ ಕಾಳಜಿ ಕೇಂದ್ರಕ್ಕೆ ಮುಖಂಡ ರಾಜಶೇಖರ ಪುರಾಣಿಕ ಪಿಎಸ್ಐ ಸಂಗಮೇಶ ಭೇಟಿ ನೀಡಿ ಪರಿಸ್ಥಿತಿ ವಿಚಾರಿಸಿದರು
ರಾಜು ಪತ್ತೆ ಕಾರ್ಯಾಚರಣೆ ನಡೆಸಿದ ಎಸಿ ತಹಶೀಲ್ದಾರ್!
ಸಂಗಾವಿ(ಟಿ) ನಾಲಾದಲ್ಲಿ ಕೊಚ್ಚಿ ಹೋದ ಕುರಕುಂಟಾ ಗ್ರಾಮದ ಅಮೆರಿಕ ಬಡಾವಣೆ ನಿವಾಸಿ ರಾಜು ನಾಮವಾರ ಅವರ ಪತ್ತೆ ಕಾರ್ಯಾಚರಣೆ ಸೋಮವಾರ ಆರಂಭಗೊಂಡಿತು. ನದಿ ನೀರಿನ ಪ್ರವಾಹ ಇಳಿಕೆಯಾದ್ದರಿಂದ ಎಸ್.ಡಿ.ಆರ್.ಎಫ್ ತಂಡ ಮತ್ತು ಅಗ್ನಿಶಾಮಕ ತಂಡದ ಸಿಬ್ಬಂದಿ ಬೋಟ್ ಮೂಲಕ ಕಾರ್ಯಾಚರಣೆ ಆರಂಭಿಸಿದರು. ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಮತ್ತು ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಬೋಟ್‌ನಲ್ಲಿ ತೆರಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಇದರಿಂದ ನೆರೆದ ಜನರು ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿ ರವೀಂದ್ರರೆಡ್ಡಿ ಪೊಲೀಸ್ ಕಾನಸ್ಟೇಬಲ್ ಆನಂದರೆಡ್ಡಿ ತುಳೇರ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮಗುವಿನ ಆರೋಗ್ಯ ರಕ್ಷಣೆಗೆ ಧಾವಿಸಿದ ತಹಶೀಲ್ದಾರ್
ತಾಲ್ಲೂಕಿನ ಸಂಗಾವಿ(ಟಿ) ಗ್ರಾಮದ ಪಲ್ಲವಿ ಕುಂಬಾರ ಎಂಬುವವರ ಮಗುವಿಗೆ ಜ್ವರ ಸೇರಿದಂತೆ (ಉಬ್ಬುಸ್) ಕಾಣಿಸಿಕೊಂಡಿತ್ತು. ಸಂಗಾವಿ(ಟಿ) ಗ್ರಾಮದಿಂದ ಆಸ್ಪತ್ರೆಗೆ ತೆರಳಲು ಪರದಾಡುತ್ತಿದ್ದರು. ಗ್ರಾಮದಿಂದ ತೆರಳು ಮಾರ್ಗಗಳು ಬಂದ್ ಆಗಿದ್ದವು. ಮಗುವನ್ನು ಎತ್ತಿಕೊಂಡು ಯಡ್ಡಳ್ಳಿ ಗ್ರಾಮದ ಕಡೆ ಬಂದಾಗ ನಾಲಾ ನೀರಿನ ಪ್ರವಾಹಕ್ಕೆ ಸಂಪರ್ಕ ಸ್ಥಗಿತಗೊಂಡಿತ್ತು. ಅದೇ ಸಂದರ್ಭದಲ್ಲಿ ರಾಜು ನಾಮವಾರ ಅವರ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದ ತಹಶೀಲ್ದಾರ್ ಶ್ರೀಯಾಂಕ ಧನಶ್ರೀಗೆ ತಾಯಿ ಮತ್ತು ಮಗುವನ್ನು ಬೋಟ್‌ನಲ್ಲಿ ಕುಳ್ಳಿರಿಸಿಕೊಂಡು ಯಡ್ಡಳ್ಳಿ ಗ್ರಾಮದ ದಡಕ್ಕೆ ಸೇರಿಸಿದ್ದಾರೆ. ನಂತರ ತಮ್ಮ ಕಾರಿನಲ್ಲಿಯೇ ಸೇಡಂ ಆಸ್ಪತ್ರೆಗೆ ಕರೆತಂದರು. ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೋಟ್‌ನಲ್ಲಿ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಇದ್ದರು.
ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಸಾರ್ವಜನಿಕರು ನದಿಯತ್ತ ತೆರಳಬಾರದು. ಮಳೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.ಶ್ರೀಯಾಂಕ ಧನಶ್ರೀ, ತಹಶೀಲ್ದಾರ್ ಸೇಡಂ
ಕಾಗಿಣಾ ನದಿ ನೀರಿನ ಪ್ರವಾಹದಲ್ಲಿ ಹರಿದು ಬಂದ ರಾಶಿಗಟ್ಟಲೇ ಕಸ ಸೇತುವೆ ಮೇಲೆ ನಿಂತಿದೆ. ಇದರಿಂದ ವಾಹನ ಸವಾರರು ಸಂಚರಿಸಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.ದೇವುಕುಮಾರ ನಾಟೀಕಾರ, ಕಾಚೂರು ಗ್ರಾಮಸ್ಥ
ಸರ್ಕಾರದಿಂದ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಮಲಗಲು ಸ್ಥಳದ ಜೊತೆಗೆ ಉಚಿತವಾಗಿ ಊಟ ನೀಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.ಮಲ್ಲಮ್ಮ, ಕಾಳಜಿ ಕೇಂದ್ರದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.