ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಬಜೆಟ್‌ | ಕಲಬುರಗಿ: ನಿರೀಕ್ಷೆ ಬೆಟ್ಟದಷ್ಟು ಸಿಕ್ಕಿದ್ದು ಹಿಡಿಯಷ್ಟು

Published 17 ಫೆಬ್ರುವರಿ 2024, 8:07 IST
Last Updated 17 ಫೆಬ್ರುವರಿ 2024, 8:07 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಗೆ ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ‘ಬೃಹತ್ ಮೊತ್ತದ ಕೊಡುಗೆ ಸಿಗಬಹುದು’ ಎಂಬ ನಿರೀಕ್ಷೆ ಹುಸಿಯಾಗಿದ್ದು, ‘ಸಣ್ಣ ಪುಟ್ಟ’ ಘೋಷಣೆಗಳಿಗೆ ಜಿಲ್ಲೆಯ ಜನ ಖುಷಿ ಪಡಬೇಕಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಮೂಲಕ ₹ 5 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದನ್ನು ಹೊರತುಪಡಿಸಿ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿ, ಉನ್ನತ ಶಿಕ್ಷಣ, ನೀರಾವರಿ, ಪ್ರವಾಸೋದ್ಯಮ, ಜಿಲ್ಲೆಯ ಪ್ರಮುಖ ಬೆಳೆಯಾದ ತೊಗರಿಗೆ ಹೆಚ್ಚಿನ ಉತ್ತೇಜನ ನೀಡುವ ಉಪಕ್ರಮಗಳು, ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯ ಪ್ರಾಯೋಗಿಕ ಅನುಷ್ಠಾನ, ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ತಲಾ 100 ಹಾಸಿಗೆಯ ಆಸ್ಪತ್ರೆ, ಹೊಸ ತಾಲ್ಲೂಕುಗಳಿಗೆ ವಿವಿಧ ಇಲಾಖೆಗಳ ಕಚೇರಿಗಳ ಸ್ಥಳಾಂತರ, ಕಲಬುರಗಿ ನಗರಕ್ಕೆ ಎರಡನೇ ರಿಂಗ್ ರಸ್ತೆ, ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣಗಳಾದ ಗಾಣಗಾಪುರ, ಘತ್ತರಗಿ, ಪ್ರವಾಸಿ ತಾಣಗಳಾದ ಕಲಬುರಗಿಯ ಬಹಮನಿ, ಸನ್ನತಿಯ ಬೌದ್ಧ ಚೈತ್ಯಾಲಯ, ಮಳಖೇಡ ಕೋಟೆಯ ಅಭಿವೃದ್ಧಿಯ ಬಗ್ಗೆ ಯಾವುದೇ ಪ್ರಸ್ತಾವ ಮಾಡಿಲ್ಲ.

ಪರಿಸರ ಪ್ರವಾಸೋದ್ಯಮ ತಾಣವಾಗಿ ಚಿಂಚೋಳಿ ಸುತ್ತಮುತ್ತಲಿನ ಪರಿಸರದಲ್ಲಿ ಜೆಎಲ್‌ಆರ್‌ ವತಿಯಿಂದ ಹೋಟೆಲ್ ನಿರ್ಮಿಸುವ ಹಾಗೂ ಆಳಂದ ತಾಲ್ಲೂಕಿನ ಅಮರ್ಜಾದಲ್ಲಿ ಉದ್ಯಾನ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಹಣ ತೆಗೆದಿರಿಸಿತ್ತು. ಆದರೆ, ಅವೆರಡೂ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಅಮರ್ಜಾ ಉದ್ಯಾನಕ್ಕೆ ಮೀಸಲಿಟ್ಟ ₹ 5 ಕೋಟಿ ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹಿನ್ನಡೆಯಾದಂತಾಗಿದೆ.

ಚಿತ್ತಾಪುರ ತಾಲ್ಲೂಕಿನ ನಾಗಾವಿಯಲ್ಲಿ ಪ್ರಾಚ್ಯ ಅವಶೇಷಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ನೆರವು ನೀಡಲು ಭಾರತೀಯ ಪುರಾತತ್ವ ಸಂರಕ್ಷಣಾ ಇಲಾಖೆಗೆ ಶಿಫಾರಸು ಮಾಡಲು ನಿರ್ಧಾರ, ವಚನ ಸಂಗ್ರಹಾಲಯವಾಗಿ ವಚನ ಮಂಟಪವನ್ನು ಕಲಬುರಗಿಯಲ್ಲಿ ಸ್ಥಾಪಿಸಲು ನಿರ್ಧಾರ ಮಾಡಿರುವುದು, ತತ್ವ ಪದಕಾರರು, ಸೂಫಿ ಶರಣರ ಅಧ್ಯಯನಕ್ಕೆ ಗುಲಬರ್ಗಾ ವಿ.ವಿ.ಯಲ್ಲಿ ಪೀಠ ಆರಂಭಿಸಲು ತೀರ್ಮಾನಿಸಿರುವುದು ಹಾಗೂ ಭವಿಷ್ಯದ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ₹ 365 ಕೋಟಿ ವೆಚ್ಚದಲ್ಲಿ ಭೀಮಾ, ಕಾಗಿಣಾ ನದಿಗಳಿಂದ ಬೆಣ್ಣೆತೊರಾ ಜಲಾಶಯ ತುಂಬಿಸುವ ಯೋಜನೆ ಜಿಲ್ಲೆಗೆ ದಕ್ಕಿರುವ ಕೆಲ ಪ್ರಮುಖ ಯೋಜನೆಗಳು.

ರಾಜಧಾನಿ ಬೆಂಗಳೂರು ನಗರವನ್ನು ಸಂಪರ್ಕಿಸಲು ಜೇವರ್ಗಿಯಿಂದ ಲಿಂಗಸುಗೂರು ಮಾರ್ಗವಾಗಿ ಹೊಸಪೇಟೆವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣದ ಬೇಡಿಕೆ ಇತ್ತು. ಆ ಬಗ್ಗೆ ಯಾವುದೇ ಘೋಷಣೆ ಹೊರಬಿದ್ದಿಲ್ಲ.

ಭೀಮಾ, ಬೆಣ್ಣೆತೊರಾ, ಕಾಗಿಣಾ, ನಾಗರಾಳ ಜಲಾಶಯಗಳ ಕಾಲುವೆಗಳ ಆಧುನೀಕರಣ ಹಾಗೂ ದುರಸ್ತಿಗಾಗಿ ನೂರಾರು ಕೋಟಿ ರೂಪಾಯಿ ಅಗತ್ಯವಿದೆ. ಈ ಬೇಡಿಕೆಗೂ ಬಜೆಟ್‌ನಲ್ಲಿ ಉಲ್ಲೇಖವಿಲ್ಲ.

ಕಲ್ಯಾಣ ಕರ್ನಾಟಕದ ವ್ಯಾಪ್ತಿ ಹೊಂದಿದ್ದ ಗುಲಬರ್ಗಾ ವಿಶ್ವವಿದ್ಯಾಲಯವು ಈ ಭಾಗದ ಅತ್ಯಂತ ಹಳೆಯ ವಿ.ವಿ.ಯಾಗಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಹುದ್ದೆಗಳ ಭರ್ತಿಯ ಬಗ್ಗೆಯೂ ಬಜೆಟ್‌ನಲ್ಲಿ ಚಕಾರ ಎತ್ತಿಲ್ಲ.

ವಿ.ವಿ. ಆವರಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಸುಸಜ್ಜಿತ ತರಬೇತಿ ಕೇಂದ್ರ ಆರಂಭಿಸುವ ಆಸೆಯೂ ಈಡೇರಿಲ್ಲ.

ಬಜೆಟ್‌ನಲ್ಲಿ ಸಿಕ್ಕಿದ್ದೇನು? 

* ಕೆಕೆಆರ್‌ಡಿಬಿಗೆ ₹ 5 ಸಾವಿರ ಕೋಟಿ ಹಂಚಿಕೆ

* ಕಲಬುರಗಿಯಲ್ಲಿ ಜಿಟಿಟಿಸಿ ಬಹು ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ

* ಕೆಜಿಟಿಟಿಐನಲ್ಲಿ ₹ 16 ಕೋಟಿ ವೆಚ್ಚದಲ್ಲಿ ಸಿಎನ್‌ಸಿ ಕೇಂದ್ರ

* ನಾಗಾವಿ ಪ್ರಾಚ್ಯ ಅವಶೇಷಗಳ ಸಂರಕ್ಷಣೆ ಸಂಶೋಧನೆಗೆ ನೆರವಿಗೆ ಎಎಸ್‌ಐಗೆ ಶಿಫಾರಸು ಮಾಡಲು ತೀರ್ಮಾನ

* ಕಲಬುರಗಿ ಉದಯೋನ್ಮುಖ ತಂತ್ರಜ್ಞಾನದಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ

* ಗುವಿವಿಯಲ್ಲಿ ತತ್ವಪದಕಾರರು ಸೂಫಿ ಅಧ್ಯಯನ ಪೀಠ * ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪನೆಗೆ ಕ್ರಮ‌

* ಕಲಬುರಗಿಯ ಕುಡಿಯುವ ನೀರಿಗಾಗಿ ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ ಕಾಗಿಣಾದಿಂದ ನೀರು ತುಂಬಿಸಲು ₹ 365 ಕೋಟಿ

* ಕಲ್ಯಾಣ ಕರ್ನಾಟಕದಲ್ಲಿ ಹೊಸ ಪ್ರೌಢಶಾಲೆ ಕಾಲೇಜುಗಳ ಆರಂಭ

* ₹ 221 ಕೋಟಿ ವೆಚ್ಚದಲ್ಲಿ 46 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭ

* ಜಿಮ್ಸ್‌ನಲ್ಲಿ ಮಕ್ಕಳ ಆರೋಗ್ಯ ಘಟಕ ಸ್ಥಾಪನೆ

* ಕಲ್ಯಾಣ ಪಥ ₹ 1000 ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ 1152 ಕಿ.ಮೀ. ರಸ್ತೆ ಅಭಿವೃದ್ಧಿ

* ಡಿ.ಎಂ. ನಂಜುಂಡಪ್ಪ ವರದಿಯನ್ವಯ ಆದ ಪರಿಣಾಮಗಳ ಅಧ್ಯಯನಕ್ಕೆ ಉನ್ನತಾಧಿಕಾರ ಸಮಿತಿ

* ಕಲಬುರಗಿ ಸಮೀಪ ಇಂಟಿಗ್ರೇಟೆಡ್ ಟೌನ್‌ಶಿಪ್

* ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಬಳಿ ಮೂಲಸೌಕರ್ಯ ಅಭಿವೃದ್ಧಿಗೆ ₹ 50 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT