ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ‘ರಂಗಭೂಮಿ’ಗೆ ಇನ್ನೂ ಮೂಡದ ‘ಬೆಳಕು’

ತಾಲ್ಲೂಕು ಕೇಂದ್ರಗಳಲ್ಲಿ ಇಲ್ಲ ರಂಗಮಂದಿರ; ನಾಟಕ ಪ್ರದರ್ಶನ್ಕೆ ಬೇಕು ಸೌಲಭ್ಯ
Last Updated 30 ಜನವರಿ 2023, 5:52 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರಿಗೆ ಮತ್ತು ರಂಗಭೂಮಿ ಆಸಕ್ತರಿಗೆ ಕೊರತೆ ಇಲ್ಲ. ಆದರೆ, ರಂಗ ಪ್ರದರ್ಶನಕ್ಕೆ ಸೂಕ್ತ ಸ್ಥಳ ಮತ್ತು ಅವಕಾಶ ಸಿಗುವುದು ತುಂಬಾನೇ ಕಡಿಮೆ. ಕಲಬುರಗಿಯಲ್ಲಿ ಎಸ್‌.ಎಂ.ಪಂಡಿತ ರಂಗಮಂದಿರ, ರಂಗಾಯಣ ಸಭಾಂಗಣ ಹೊರತುಪಡಿಸಿದರೆ, ಇತರ ಸ್ಥಳಗಳಲ್ಲಿ ರಂಗ ಪ್ರದರ್ಶನ ಕಾಣುವುದು ತುಂಬಾನೇ ಅಪರೂಪ.

ಜಿಲ್ಲಾ ಕೇಂದ್ರ ಕಲಬುರಗಿಯಲ್ಲಿ ಅಲ್ಲದೇ ತಾಲ್ಲೂಕು ಕೇಂದ್ರಗಳಲ್ಲೂ ಪರಿಸ್ಥಿತಿ ಶೋಚನೀಯವಿದೆ. ನಾಟಕ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಮತ್ತು ಸ್ಥಳದ ಕೊರತೆ ಇದೆ. ಹೀಗಾಗಿ ನಾಟಕ ಪ್ರದರ್ಶನಕ್ಕೆ ಹಲವು ಸಮಸ್ಯೆ ಮತ್ತು ಸವಾಲುಗಳಿವೆ.

ರಂಗ ಚಟುವಟಿಕೆಗೆ ಪ್ರೋತ್ಸಾಹ ನೀಡಲೆಂದೇ ಬಾಪುಗೌಡ ದರ್ಶನಾಪುರ ಅವರು ಸಚಿವರಾಗಿದ್ದ ವೇಳೆ ಕನ್ನಡ ಭವನದ ಆವರಣದಲ್ಲಿ ರಂಗಮಂದಿರ ನಿರ್ಮಿಸಲು ಉದ್ದೇಶಿಸಲಾಯಿತು. 1987ರಲ್ಲಿ ಕಲಬುರಗಿ ಯಲ್ಲಿ ನಡೆದಿದ್ದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನದ ಉಳಿದ ಹಣದಲ್ಲಿ ರಂಗ ಮಂದಿರ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು.

‘1996ರಲ್ಲಿ ಪಿ.ಎಂ. ಮಣ್ಣೂರ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ವೇಳೆ ರಂಗಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು. ಹಂತಹಂತವಾಗಿ ಅನುದಾನ ಬಿಡುಗಡೆಯಾಯಿತು. ಆದರೆ, 1999ರಲ್ಲಿ ಕಾಮಗಾರಿಗೆ ಹಿನ್ನಡೆ ಉಂಟಾಯಿತು.

2004ರಲ್ಲಿ ವೀರಭದ್ರ ಸಿಂಪಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿತು. ಈವರೆಗೆ ₹1.36 ಕೋಟಿ ವೆಚ್ಚದ ಕಾಮಗಾರಿ ವೆಚ್ಚ ಮಾಡಲಾಗಿದೆ. ಆದರೂ ಸಹ ಬಾಪುಗೌಡ ದರ್ಶನಾಪುರ ರಂಗ ಮಂದಿರವು ಇನ್ನೂ ಸೌಲಭ್ಯ ಕೊರತೆ ಎದುರಿಸುತ್ತಿದೆ. ಸಭಾ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನಕ್ಕೆ ರಂಗಮಂದಿರವು ಇನ್ನೂ ಸೂಕ್ತವಾಗಿಲ್ಲ.

ಲೈಟಿಂಗ್‌ಗೆ 5 ಲಕ್ಷ ಅನುದಾನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕು ಕೇಂದ್ರಗಳಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ವಿಶೇಷ ಅನುದಾನ ಲಭ್ಯವಿಲ್ಲ. ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಕೆಲ ಲೈಟಿಂಗ್‌ ನವೀಕರಣ ಮಾಡಲು ₹5 ಲಕ್ಷ ಅನುದಾನ ಒದಗಿಸಲಾಗಿದೆ. ಇಲ್ಲಿ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಅವಕಾಶವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ತಿಳಿಸಿದರು.

‘ಸಂಸ್ಕೃತಿ ಭವನ ನಿರ್ಮಿಸಿ’
ಕಮಲಾಪುರ:
ಕಲಬುರಗಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಕಮಲಾಪುರ ನೂತನ ತಾಲ್ಲೂಕು ಆಗಿದ್ದು, ರಂಗ ಕಲಾವಿದರಿಗೆ ರಂಗಮಂದಿರ ಅಥವಾ ಸಭಾಂಗಣ ಇಲ್ಲ. ಸಂಗೀತ, ನೃತ್ಯ ನಾಟಕ, ವಿವಿಧ ಕಾರ್ಯಕ್ರಮಗಳು ಖಾಸಗಿ ಕಲ್ಯಾಣ ಮಂಟಪ ಶಾಲಾ ಆವರಣದಲ್ಲಿ ಮಾಡಲಾಗುತ್ತಿದೆ. ಶಾಸಕರಾದ ಬಸವರಾಜ ಮತ್ತಿಮಡು ಅವರು ಆಸಕ್ತಿ ವಹಿಸಿ ರಂಗ ಕಲಾವಿದರಿಗೆ ಭವನ ನಿರ್ಮಾಣ ಮಾಡಬೇಕು ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶರಣಬಸಪ್ಪ ವಡ್ದನಕೇರಿ ಹೇಳುತ್ತಾರೆ.

‘ಜಾನಪದಕ್ಕೂ ರಂಗಮಂದಿರದ್ದೇ ಕೊರತೆ’
ಅಫಜಲಪುರ:
ತಾಲ್ಲೂಕಿನಲ್ಲಿ ಕನ್ನಡ-ಸಂಸ್ಕೃತಿ ಇಲಾಖೆಯ ವತಿಯಿಂದ ಸರ್ಕಾರಿ ರಂಗಮಂದಿರ ಇಲ್ಲ. ಸುಸಜ್ಜಿತವಾದ ಖಾಸಗಿ ಕಲ್ಯಾಣ ಮಂಟಪಗಳು ವಿಧಿಸುವ ಲಕ್ಷಾಂತರ ಬಾಡಿಗೆಯನ್ನು ಭರಿಸುವ ಶಕ್ತಿ ಇಲ್ಲಿನ ಬಡ ಕಲಾವಿದರಿಗೆ ಇರುವುದಿಲ್ಲ.

ಊರಿನ ಜನರಿಂದ ಹಣ ಎತ್ತಿ ನಾಟಕಗಳನ್ನು ಪ್ರದರ್ಶಿಸುವ ಅನಿವಾರ್ಯತೆ ಉಂಟಾಗಿದೆ. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನ ಮತ್ತು ಇತರೆ ಸರ್ಕಾರಿ ಕಾರ್ಯಕ್ರಮಗಳು ಕೂಡ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿವೆ. ಅದಕ್ಕೆ ದಿನವೊಂದಕ್ಕೆ ಲಕ್ಷಾಂತರ ಬಾಡಿಗೆಯನ್ನು ಸರ್ಕಾರದಿಂದ ಭರಿಸಬೇಕಾಗುತ್ತದೆ. ರಂಗಪ್ರಿಯರ ಅನುಕೂಲಕ್ಕಾಗಿ ರಂಗ ಮಂದಿರ ನಿರ್ಮಾಣ ಮಾಡಬೇಕು ಎಂದು ಡಿ.ಎಂ.ನದಾಫ್ ಒತ್ತಾಯಿಸಿದ್ದಾರೆ.

‘ಯಡ್ರಾಮಿ: ಬೇಕಿದೆ ಸಂಸ್ಕೃತಿ ಭವನ’
ಯಡ್ರಾಮಿ:
ಹೊಸ ತಾಲ್ಲೂಕು ಕೇಂದ್ರವಾಗಿ 3 ವರ್ಷಗಳು ಕಳೆದಿವೆ. ಪಟ್ಟಣದಲ್ಲಿ ಇನ್ನೂ ಗ್ರಾಮ ಪಂಚಾಯಿತಿ ಅಧಿಕಾರ ವ್ಯಾಪ್ತಿಯಲ್ಲಿದೆ. ಇಲ್ಲಿ ರಂಗಾಸ್ತರಿಗೆ ರಂಗಮಂದಿರ ನಿರ್ಮಿಸಿಲ್ಲ. ಕಾರ್ಯಕ್ರಮಗಳು ಸಮುದಾಯ ಭವನ ಹಾಗೂ ಹೊರಾಂಗಣದಲ್ಲಿ ನಡೆಯುತ್ತವೆ. ಇಲ್ಲಿ ಮಠಗಳು ಮಂದಿರ ಸಾಹಿತ್ಯಾಸ್ತಕರು ಜಾಸ್ತಿ ಇರುವುದರಿಂದ ಸಾಂಸ್ಕೃತಿಕ ಭವನ ನಿರ್ಮಾಣದ ಅವಶ್ಯವಿದೆ ಎನ್ನುತ್ತಾರೆ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಜಿ ಪಾಟೀಲ.

‘ಖಾಸಗಿ ಸಭಾಂಗಣವೇ ಆಧಾರ’
ಆಳಂದ:
ತಾಲ್ಲೂಕು ಕೇಂದ್ರದಲ್ಲಿ ಸರ್ಕಾರದಿಂದ ನಿರ್ಮಿತವಾದ ಪುರಭವನ, ಸಾಂಸ್ಕೃತಿಕ ಭವನಗಳು ಇಲ್ಲ. ಕನ್ನಡ ಸಾಹಿತ್ಯ ಕಾರ್ಯಕ್ರಮಗಳು ಸರ್ಕಾರಿ ಶಾಲೆ ಅಥವಾ ಖಾಸಗಿ ಕಲ್ಯಾಣ ಮಂಟಪ ಮಾಡಲಾಗುತ್ತಿದೆ. ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿಯೂ ಸರ್ಕಾರದ ವಿವಿಧ ಅನುದಾನದಲ್ಲಿ ಶಾಲಾ ಆವರಣ, ಗ್ರಾಮದಲ್ಲಿ ನಿರ್ಮಾಣ ಮಾಡಿದ ಸಣ್ಣ ಸಭಾಭವನಗಳು ಅಷ್ಟು ಪ್ರಯೋಜನಕಾರಿ ಆಗಿಲ್ಲ.

ವರ್ಷಕ್ಕೊಮ್ಮೆ ನಾಟಕ ಪ್ರದರ್ಶನಕ್ಕೆ ಆಳಂದ ಪಟ್ಟಣದಲ್ಲಿನ ಹಳೆಯ ಸಿನಿಮಾ ಮಂದಿರವನ್ನು ಬಳಸುವ ಪರಿಸ್ಥಿತಿ ಅನಿವಾರ್ಯತೆ ಇದೆ. ಸ್ಥಳಿಯ ಪುರಸಭೆಯು ರಂಗಮಂದಿರ, ಸಭಾಭವನ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿಸುವ ಸಣ್ಣ ಪ್ರಯತ್ನವು ನಡೆದಿಲ್ಲ ಸಾಮಾಜಿಕ ಕಾರ್ಯಕರ್ತ ತಾನಾಜಿ ಸೂರ್ಯವಂಶಿ ಹೇಳುತ್ತಾರೆ.

‘ಸೌಕರ್ಯ ಕಲ್ಪಿಸಿ’
ಚಿತ್ತಾಪುರ:
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳು ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಟುವಟಿಕೆಗಳನ್ನು ನಡೆಸಲು ಅಗತ್ಯ ರಂಗ ಮಂದಿರದ ಸೌಲಭ್ಯವಿಲ್ಲದೆ ಸಮಸ್ಯೆಯಾಗುತ್ತಿದೆ.

ನೂರಾರು ಜನರು ಕುಳಿತುಕೊಳ್ಳುವ ಸರ್ಕಾರಿ ಕಟ್ಟಡವೂ ಪಟ್ಟಣದಲ್ಲಿ ಇಲ್ಲ. ರಂಗ ಮಂದಿರ ಸೌಲಭ್ಯ ಇಲ್ಲದೆ ಸ್ಥಳೀಯ ಕಲಾವಿದರು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ವಿಚಾರ ಸಂಕೀರ್ಣ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ತೊಂದರೆಯಾಗುತ್ತಿದೆ. ರಂಗ ಮಂದಿರ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

‘ಜೇವರ್ಗಿಯಲ್ಲಿದೆ ಟೌನ್‌ ಹಾಲ್‌’
ಜೇವರ್ಗಿ:
ಪಟ್ಟಣದಲ್ಲಿ 2015 - 16 ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ₹196.65 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಈಗ ಸದರಿ ಕಾಮಗಾರಿಯು 188.36 ಲಕ್ಷಕ್ಕೆ ಟೆಂಡರ್ ಆಗಿದೆ. 2018ರ ಫೆಬ್ರುವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ.

ಈ ಕಾಮಗಾರಿಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಈಗ ಟೌನ್ ಹಾಲ್ ಸುತ್ತ ಮುತ್ತಲು ಕಸದ ರಾಶಿ ಮತ್ತು ಜಾಲಿ ಕಂಟಿಗಳು ಬೆಳೆದು ಹಂದಿ ಮತ್ತು ಬೀಡಾಡಿ ದನಗಳು, ನಾಯಿಗಳ ತಾಣವಾಗಿದೆ. ಸದರಿ ಕಾಮಗಾರಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ತಾಲ್ಲೂಕಿನ ಹಾಗೂ ಪಟ್ಟಣದ ನಾಗರಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಪೂರಕ ಮಾಹಿತಿ: ವೆಂಕಟೇಶ ಆರ್.ಹರವಾಳ, ಮಂಜುನಾಥ ದೊಡಮನಿ, ಸಂಜಯ ಪಾಟೀಲ, ಜಗನ್ನಾಥ ಶೇರಿಕಾರ, ಶಿವಾನಂದ ಹಸರಗುಂಡಗಿ, ಮಲ್ಲಿಕಾರ್ಜುನ ಎಂ, ತೀರ್ಥಕುಮಾರ್ ಬೆಳಕೋಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT