ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಗುಂಡಿಮಯ ರಸ್ತೆಗಳಿಂದ ವಾಹನ ಸವಾರರಿಗೆ ಸಂಕಷ್ಟ

ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಹಾಳಾದ ರಸ್ತೆಗಳು; ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ!
Last Updated 26 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಎಲ್ಲೆಂದರಲ್ಲಿ ಎದುರಾಗುವ ಗುಂಡಿಗಳು, ರಸ್ತೆಯಲ್ಲೇ ಹರಿಯುವ ಗಲೀಜು ನೀರು, ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವಂತೆ ಮಾಡುವ ಕೆಸರು..

ನಗರ ಮಾತ್ರವಲ್ಲದೆ ಜಿಲ್ಲೆಯ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿನ ರಸ್ತೆಗಳ ದುಸ್ಥಿತಿ ಇದು. ಬೇಸಿಗೆಯಲ್ಲಿ ದೂಳಿನಿಂದಲೇ ಸವಾರರ ಪ್ರಾಣ ಹಿಂಡುವ ತಗ್ಗುಮಯ ರಸ್ತೆಗಳು ಇದೀಗ ಸಂಪೂರ್ಣ ಕೆಸರು ಹೊದ್ದು ಮಲಗಿವೆ. ವಾಹನ ಸವಾರರು ಮಾತ್ರವಲ್ಲದೆ ಪಾದಚಾರಿಗಳು ಕೂಡ ತಗ್ಗುಗುಂಡಿಗಳ ರಸ್ತೆಯಲ್ಲಿ ಸಾಗಲು ಹಿಂದೇಟು ಹಾಕುವ ಸ್ಥಿತಿ ಇದೆ.

ಒಂದು ವಾರದಿಂದ ಸುರಿದ ಮಳೆಯಿಂದ ರಸ್ತೆಗಳು ಹಾಳಾಗಿವೆ. ಡಾಂಬರು ಕಿತ್ತುಹೋಗಿದೆ. ಮಣ್ಣಿನ ರಸ್ತೆಗಳ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ.

ಜಿಲ್ಲಾ ಕೇಂದ್ರವಾದ ಕಲಬುರ್ಗಿ ನಗರದ ಪ್ರಮುಖ ರಸ್ತೆಗಳಲ್ಲೇ ಸಾಲು ಸಾಲು ಗುಂಡಿಗಳಿವೆ. ದರ್ಗಾ ರಸ್ತೆ, ಜಗತ್ ವೃತ್ತ, ರೈಲು ನಿಲ್ದಾಣ ರಸ್ತೆ, ಅಪ್ಪಾ ದೇವಸ್ಥಾನ ರಸ್ತೆ, ಕೇಂದ್ರ ಬಸ್‌ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗುಂಡಿಗಳು ವಾಹನ ಸವಾರರಿಗೆ ಮೃತ್ಯುಕೂಪಗಳಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಸ್ಥಿತಿ ಇದೆ.

ವರ್ಷಗಳೇ ಕಳೆದರೂ ದುರಸ್ತಿಯಾಗದ ರಾಣೇಶಪೀರ ದರ್ಗಾ ರಸ್ತೆ:

ನಗರದ ಆಳಂದ ಮುಖ್ಯರಸ್ತೆ ಬದಿಯಲ್ಲಿನ ರಾಣೇಶಪೀರ ದರ್ಗಾ ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹನ ಚಲಾಯಿಸುವುದೇ ದೊಡ್ಡ ಸವಾಲಾಗಿದೆ. ಆಳಂದ ಮುಖ್ಯರಸ್ತೆಯಿಂದ ದರ್ಗಾವರೆಗೆ 1.5 ಕಿ.ಮೀ ದೂರದ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೃಷ್ಣಾ ಕಾಲೊನಿ, ಶಿವಲಿಂಗೇಶ್ವರ ಕಾಲೊನಿ, ಮಾಳಾ ಸಮಾಜ ಕಾಲೊನಿ, ಕೃಷಿ ವಿಜ್ಞಾನ ಕಾಲೇಜಿಗೆ ತೆರಳಲು ಇದೇ ರಸ್ತೆಯಲ್ಲಿ ಸಾಗಬೇಕು.

‘ಹಲವು ವರ್ಷಗಳಿಂದ ಈ ರಸ್ತೆ ಹಾಳಾಗಿದೆ. ಮಳೆ ಬಂದರೂ, ಬಾರದಿದ್ದರೂ ಈ ರಸ್ತೆ ಮಾತ್ರ ನಿತ್ಯ ಹೀಗೇ ಇರುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸಿದರೂ ದುರಸ್ತಿ ಕಾರ್ಯವಾಗುತ್ತಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಬಂಬೂಬಜಾರ್ ರಸ್ತೆಯಲ್ಲಿ ಗುಂಡಿಗಳ ದರ್ಶನ:

ಸೂಪರ್ ಮಾರುಕಟ್ಟೆ ಬಳಿಯ ಬಂಬೂಬಜಾರ್ ರಸ್ತೆಯಲ್ಲಿ ವಾಹನ ಓಡಿಸುವುದಿರಲಿ, ನಡೆದಾಡಲೂ ಕೂಡ ಭಯಪಡಬೇಕಾದ ದುಸ್ಥಿತಿ ಇದೆ. ಸರಕು ಸಾಗಣೆ ವಾಹನಗಳೇ ಹೆಚ್ಚು ಇಲ್ಲಿ ಓಡಾಡುತ್ತವೆ. ರಸ್ತೆ ಗುಂಡಿ ಸಮಸ್ಯೆಯಿಂದ ರಸ್ತೆ ಪಕ್ಕದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವವರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ. ಪಕ್ಕದಲ್ಲಿನ ಎಪಿಎಂಸಿ ಪ್ರಾಂಗಣದಲ್ಲೂ ರಸ್ತೆಗಳು ಹಾಳಾಗಿವೆ. ಅಬಿವೃದ್ಧಿ ಕಾಮಗಾರಿಗಾಗಿ ಹಲವೆಡೆ ರಸ್ತೆ ಅಗೆಯಲಾಗಿದೆ.

ಹಳೇ ಜೇವರ್ಗಿ ರಸ್ತೆ, ಹೊಸ ಜೇವರ್ಗಿ ರಸ್ತೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ ರಸ್ತೆಗಳು ಕೂಡ ಇದಕ್ಕಿಂತ ಭಿನ್ನವಾಗೇನಿಲ್ಲ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಪ್ರಮುಖ ರಸ್ತೆಗಳಲ್ಲೂ ಕೂಡ ದೊಡ್ಡ ದೊಡ್ಡ ಗುಂಡಿಗಳಿವೆ. ದ್ವಿಚಕ್ರ ವಾಹನ ಸವಾರರು ಆತಂಕದಲ್ಲೇ ವಾಹನ ಓಡಿಸಬೇಕಿದೆ.

ನಗರದ ರೈಲ್ವೆ ಮೇಲ್ಸೇತುವೆ ರಸ್ತೆಗಳ ಸ್ಥಿತಿ ಇನ್ನೂ ಘೋರವಾಗಿದೆ. ಕೋರಂಟಿ ಹನುಮಾನ್ ದೇವಸ್ಥಾನದ ರಸ್ತೆ ಹಾಗೂ ಹಳೇ ಜೇವರ್ಗಿ ರಸ್ತೆಯಲ್ಲಿನ ಮೇಲ್ಸೇತುವೆಗಳ ಮಾರ್ಗಗಳಲ್ಲಿ ಗುಂಡಿ ಬಿದ್ದಿವೆ. ಇಲ್ಲಿ ನಿತ್ಯವೂ ಚರಂಡಿ ನೀರು ಹರಿಯುತ್ತಲೇ ಇರುತ್ತದೆ. ಮಳೆ ಬಂದರಂತೂ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ. ರಸ್ತೆಯಿಂದ ಹರಿದು ಬರುವ ಮಳೆ ನೀರು ಮೇಲ್ಸೇತುವೆ ಕೆಳಗೆ ನಿಲ್ಲುವುದರಿಂದ ಮಳೆ ನಿಂತು ಹಲವು ಗಂಟೆ ಕಳೆದರೂ ನೀರು ತೆರವಾಗಲ್ಲ. ಮೊಣಕಾಲಿನ ಎತ್ತರದವರೆಗೆ ನಿಲ್ಲುವ ನೀರಿನಲ್ಲೇ ವಾಹನ ಸವಾರರು ತೆರಳಬೇಕಾಗುತ್ತದೆ.

ಒಳರಸ್ತೆಗಳೂ ಹಾಳಾಗಿವೆ:

ನಗರದ ವಿವಿಧ ಬಡಾವಣೆಗಳ ಒಳರಸ್ತೆಗಳು ಕೂಡ ಗುಂಡಿಮಯವಾಗಿವೆ. ಅದರಲ್ಲೂ ತಾರಫೈಲ ಬಡಾವಣೆ, ಮಹಾಲಕ್ಷ್ಮಿ ನಗರ, ಜನತಾ ಲೇಔಟ್,ಜೇವರ್ಗಿ ಕಾಲೊನಿಗಳಲ್ಲಿ ಒಳ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.

‘ರಸ್ತೆಯ ತಗ್ಗುಗಳಲ್ಲಿ ನೀರು ನಿಲ್ಲುವ ಕಾರಣ ಮನೆಗಳ ಗೋಡೆಗೆ ಕೆಸರು ಸಿಡಿಯುತ್ತದೆ. ಆಗಾಗ ಸಣ್ಣಪುಟ್ಟ ಅಪಘಾತಗಳೂ ಆಗುತ್ತಿವೆ. ಮನೆ ಮುಂದಿನ ತಗ್ಗು ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ರೋಗ ಹರಡುವ ಭೀತಿಯೂ ಇದೆ ಎನ್ನುತ್ತಾರೆ ಎನ್ನುತ್ತಾರೆ ತಾರಫೈಲ ಬಡಾವಣೆಯ ನಿವಾಸಿಗಳು.

ಸಿಮೆಂಟ್‌, ಫರ್ಸಿ ಲಾರಿಗಳ ಭಾರಕ್ಕೆ ಹಾಳಾದ ರಸ್ತೆ

ಶಹಾಬಾದ್: ಇಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರು ಸಂಕಷ್ಟಪಡುವಂತಾಗಿದೆ. ನಗರ ಸಮೀಪದ ನಿಜಾಮ ಬಜಾರದಿಂದ ಹೊನಗುಂಟಾ ಗ್ರಾಮಕ್ಕೆ ಹೋಗುವ ರಸ್ತೆ, ಜೇವರ್ಗಿ ರಸ್ತೆ, ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಹಾಗೂ ನಗರದ ವಾಡಿ ಕ್ರಾಸ್‌ನಿಂದ ನಗರದೊಳಗೆ ಪ್ರವೇಶಿಸುವ ರಸ್ತೆಗಳು ಹಾಳಾಗಿವೆ.

ಇಲ್ಲಿನ ರಸ್ತೆಗಳು ವರ್ಷದ ಎಲ್ಲ ದಿನಗಳಲ್ಲೂ ಇದೇ ಸ್ಥಿತಿಯಲ್ಲಿರುತ್ತವೆ. ರಸ್ತೆಗಳಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ, ಪ್ರಯಾಣಿಕರಿಗೆ ಉಪಯೋಗವಾಗುತ್ತಿಲ್ಲ. ಸುಮಾರು 25 ರಿಂದ 40 ಟನ್ ಭಾರ ಹೊತ್ತು ಸಾಗುವ ಸಿಮೆಂಟ್ ಹಾಗೂ ಫರ್ಸಿ ಲಾರಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜೊತೆಗೆ ಭಾರಿ ಪ್ರಮಾಣದ ದೂಳು ಕೂಡ ಆವರಿಸುತ್ತಿದೆ. ಆಗಾಗ ಕಳಪೆ ಡಾಂಬರೀಕರಣ ನಡೆದರೂ, ತಗ್ಗು ದಿನ್ನೆಗಳಿಂದ ಮುಕ್ತಿ ಸಿಗುತ್ತಿಲ್ಲ.

‘ತಗ್ಗು ಗುಂಡಿಯಲ್ಲಿ ಬಿದ್ದು ಸಾಕಷ್ಟು ಜನರು ಗಾಯಗೊಂಡಿದ್ದಾರೆ. ದೂಳಿನಿಂದ ಸಾಕಷ್ಟು ತೊಂದರೆಯಾಗಿದೆ. ಆದರೂ, ಜನರ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಆ ಮೂಲಕ ಪ್ರಯಾಣಿಕರ ನರಕಯಾತನೆ ತಪ್ಪಿಸಬೇಕು’ ಎನ್ನುತ್ತಾರೆ ಮುಖಂಡ ನಾಗಣ್ಣ ರಾಂಪೂರೆ.

‘ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಸರ್ಕಾರದ ಕೋಟಿಗಟ್ಟಲೆ ಅನುದಾನ ದುರ್ಬಳಕೆಯಾಗುತ್ತಿದೆ. ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೋ ತಿಳಿಯದಾಗಿದೆ’ ಎಂದು ನಿವಾಸಿ ಪೂಜಪ್ಪ ಮೇತ್ರೆ ಬೇಸರ ವ್ಯಕ್ತಪಡಿಸಿದರು.

ಆಳಂದ: ರಸ್ತೆ ದುರಸ್ತಿ ಕೈಗೊಳ್ಳದ ಪುರಸಭೆ

ಆಳಂದ ಪಟ್ಟಣದಲ್ಲಿ ಮುಖ್ಯರಸ್ತೆಗಳು ಸಂಪೂರ್ಣ ಹಾಳಾಗಿವೆ. ಪಟ್ಟಣದ ರಜ್ವಿ ರಸ್ತೆಯು ಅಗಲೀಕರಣದ ನಂತರ ದರ್ಗಾ ಚೌಕ್‌ನಿಂದ ಸಿದ್ದಾರ್ಥ ಚೌಕ್ ರಸ್ತೆವರೆಗೆ ಮಾತ್ರ ಉತ್ತಮ ಸ್ಥಿತಿ ಇದೆ. ಇದನ್ನು ಹೊರತು ಪಡಿಸಿದರೆ ಪಟ್ಟಣದ ಗಣೇಶ ಚೌಕ, ಮಹಾವೀರ ಚೌಕ, ಮಹಾದೇವನ ಗುಡಿ ಮಾರ್ಗ ಮುಖ್ಯರಸ್ತೆಗಳು ಹದಗೆಟ್ಟಿವೆ. ಹಳೆಯ ಮುಖ್ಯರಸ್ತೆಯನ್ನೂ ವಿಸ್ತರಣೆ ಮಾಡಲಾಗುವುದು ಎಂದು ಹೇಳುತ್ತಲೇ ಇರುವ ಪುರಸಭೆಯು ಕಳೆದ 5 ವರ್ಷದಿಂದ ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ.

ಹೆಚ್ಚು ಜನದಟ್ಟಣೆ ಹಾಗೂ ಅಂಗಡಿ ಮುಂಗಟ್ಟುಗಳಿಂದ ಕೂಡಿದ ಈ ರಸ್ತೆಯು ಮಳೆ ಬಂದರೆ ಹಳ್ಳವಾಗಿ ಪರಿವರ್ತನೆಯಾಗುತ್ತದೆ. ಬೇಸಿಗೆ ಬಂದರೆ ದೂಳು ಆವರಿಸುತ್ತದೆ. ಇದರಿಂದ ಸ್ಥಳೀಯರಿಗೂ, ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ರಸ್ತೆ ಗುಂಡಿಗಳಿಂದ ಬೈಕ್ ಸವಾರರಿಗೆ ನಿತ್ಯವೂ ಕಿರಿಕಿರಿಯಾಗುತ್ತಿದೆ.

ಮಟಕಿ ಮಾರ್ಗದ ಮುಖ್ಯರಸ್ತೆ, ಹೆಬಳಿ ಮಾರ್ಗ ರಸ್ತೆಗಳು ಹಾಳಾಗಿ ವರ್ಷ ಕಳೆದರೂ ದುರಸ್ತಿ ಭಾಗ್ಯವಿಲ್ಲ. ದೊಡ್ಡ ವಾಹನಗಳು ಸಂಚರಿಸಲು ಸದಾ ಪರದಾಡುವ ಸ್ಥಿತಿ ಇದೆ. ಪುರಸಭೆ ಆಗಾಗ ಪೈಪ್ ದುರಸ್ತಿ, ಅಳವಡಿಕೆ ನೆಪದಲ್ಲಿ ರಸ್ತೆ ಅಗೆದ ಪರಿಣಾಮ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಅಪಾಯಕ್ಕೆ ಎಡೆಮಾಡಿಕೊಟ್ಟಿವೆ.

ಯಡ್ರಾಮಿ: ಕೆಸರಿನಲ್ಲಿ ಸಿಲುಕುವ ವಾಹನಗಳು

ಯಡ್ರಾಮಿ ತಾಲ್ಲೂಕಿನ ಕುಕನೂರ, ಯತ್ನಾಳ, ಕಡಕೋಳ, ಶಿವಪುರ, ಬಿಳವಾರ ಸೇರಿದಂತೆ ತಾಲ್ಲೂಕಿನಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ವಾಹನ ಸವಾರರ ಓಡಾಟಕ್ಕೆ ತೊಂದರೆಯಾಗಿದೆ.

ಯಡ್ರಾಮಿಯಿಂದ ಜೇವರ್ಗಿಗೆ ತೆರಳಲು ಮುಖ್ಯ ಹೆದ್ದಾರಿ ಕಿರಿದಾಗಿದ್ದು, ವಾಹನ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡಲು ಹೈರಾಣಾಗುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಎದುರಿಗೆ ವಾಹನಗಳು ಬಂದಾಗ ದಾರಿ ಬಿಡಲು ಬಸ್ ಸೇರಿದಂತೆ ವಾಹನಗಳು ರಸ್ತೆ ಕಳಗೆ ಇಳಿಸಿದರೆ ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತವೆ.

ಕೆಲ ವಾಹನಗಳು ಕೆಸರಿನಲ್ಲಿ ಸಿಲುಕಿ ದಿನಗಟ್ಟಲೇ ಅಲ್ಲೇ ಉಳಿಯುತ್ತವೆ. ಯಡ್ರಾಮಿಯಿಂದ ಜೇವರ್ಗಿಗೆ ರಾಜ್ಯ ಹೆದ್ದಾರಿ ಕಲ್ಪಿಸಬೇಕು ಎಂಬುವುದು ಈ ಭಾಗದ ಜನರ ಬಹುದಿನಗಳ ಕನಸಾಗಿದೆ.

ಜೇವರ್ಗಿ: ವಾಹನ ಸವಾರರಿಗೆ ತಪ್ಪದ ಸಂಕಷ್ಟ

ಜೇವರ್ಗಿ: ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್‌ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆ ನೀರು ಶೇಖರಣೆಯಾಗುವುದರಿಂದ ವಾಹನ ಸವಾರರು ಹಾಗೂ ಬಡಾವಣೆಯ ನಾಗರಿಕರು ಪರದಾಡುವಂತಾಗಿದೆ. ವಿವಿಧ ಬಡಾವಣೆಯಲ್ಲಿನ ಮುಖ್ಯರಸ್ತೆಗಳಲ್ಲಿ ಗುಂಡಿ ಬಿದ್ದಿವೆ.

ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಶುರು: ಪಾಲಿಕೆ ಆಯುಕ್ತ

‘ಮಳೆಯ ಕಾರಣ ನಗರದ ಕೆಲ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ನಮ್ಮಲ್ಲಿ ರಸ್ತೆ ದುರಸ್ತಿಗೆ ಉತ್ತಮ ಯಂತ್ರೋಪಕರಣ ಹಾಗೂ ವಾಹನಗಳಿವೆ. ಮಳೆ ಮುಗಿಯುತ್ತಿದ್ದಂತೆಯೇ ನಗರದ ಎಲ್ಲೆಡೆ ಕಾಮಗಾರಿ ನಡೆಸಿ ಗುಂಡಿಗಳನ್ನು ಮುಚ್ಚಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನಗರದ ಪ್ರಮುಖ ರಸ್ತೆಗಳ ದುರಸ್ತಿ ಹಾಗೂ ಸೌಂದರ್ಯಕರಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಬಿಗ್‌ಬಜಾರ್ ರಸ್ತೆ, ನ್ಯಾಷನಲ್‌ ಚೌಕ್‌ನಿಂದ ಗಂಜ್‌ವರೆಗೆ, ಮೋಹನ್ ಲಾಡ್ಜ್‌ನಿಂದ ರಾಮಮಂದಿರದವರೆಗೆ ರಸ್ತೆ ಸುಧಾರಣೆ ಮಾಡುತ್ತಿದ್ದೇವೆ. ಬಡಾವಣೆಗಳಲ್ಲಿ ಒಳರಸ್ತೆಗಳ ಗುಂಡಿ ಮುಚ್ಚಲೂ ಕ್ರಮ ವಹಿಸುತ್ತಿದ್ದೇವೆ. ಯಾವುದಾದರೂ ಕಾಲೊನಿಗಳ ಒಳರಸ್ತೆಗಳು ಹಾಳಾಗಿದ್ದರೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಿದ ತಕ್ಷಣವೇ ಗುಂಡಿ ಮುಚ್ಚಲು ಕ್ರಮವಹಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT