ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ‘ಶುದ್ಧ ಗಾಳಿ’ಗಾಗಿ ಸಾವಿರಾರು ಸಸಿ ನಾಟಿ

Published : 17 ಆಗಸ್ಟ್ 2024, 5:35 IST
Last Updated : 17 ಆಗಸ್ಟ್ 2024, 5:35 IST
ಫಾಲೋ ಮಾಡಿ
Comments

ಕಲಬುರಗಿ: ಬಿಸಿಲೂರು ಖ್ಯಾತಿಯ ಕಲಬುರಗಿಯಲ್ಲಿ ಗಾಳಿ ಗುಣಮಟ್ಟ ಸುಧಾರಿಸಲು ಹಾಗೂ ದೂಳಿನ ಪ್ರಮಾಣ ತಗ್ಗಿಸಲು ಮಹಾನಗರ ಪಾಲಿಕೆ ಸಸಿಗಳ ನಾಟಿಗೆ ಮೊರೆ ಹೋಗಿದೆ. ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ (ಎನ್‌ಸಿಎಪಿ–ಎನ್‌ಕ್ಯಾಪ್‌) ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು, ಉದ್ಯಾನಗಳಲ್ಲಿ ಸಾವಿರಾರು ಸಸಿಗಳನ್ನು ನಾಟಿ ಮಾಡುತ್ತಿದೆ.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಆಳಂದ ಚೆಕ್‌ಪೋಸ್ಟ್‌, ಜಗತ್‌ ವೃತ್ತದಿಂದ– ಹೀರಾಪುರ ಸರ್ಕಲ್‌ ರಸ್ತೆ, ಅನ್ನಪೂರ್ಣ ಕ್ರಾಸ್‌ನಿಂದ ಖರ್ಗೆ ಪೆಟ್ರೋಲ್‌ಬಂಕ್‌ ಹೀಗೆ ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ 10 ಬಗೆಯ ಸಾವಿರಾರು ಸಸಿಗಳನ್ನು ನಾಟಿ ಮಾಡಲಾಗಿದೆ. ಅಲ್‌ಸ್ಟೊನಿಯಾ, ಪೆಲ್ಟೊಫೊರಮ್‌, ಗುಲ್‌ಮೊಹರ್‌, ಸಿಂಗಾಪುರ್‌ ಚೆರ್ರಿ, ಪತ್ರಿ, ಕದಂಬ, ಸ್ಪಥೋಡಿಯಾ, ತಬೂಬಿಯಾ ರೊಸಿಯಾ, ಗೋಲ್ಡನ್‌ ಶಾವರ್‌, ಬುರುಗು ಸಸಿಗಳನ್ನು ನೆಡಲಾಗಿದೆ.

2022–23ನೇ ಸಾಲಿನ ಎನ್‌ಕ್ಯಾಪ್‌ ಯೋಜನೆಯಡಿ ₹96 ಲಕ್ಷ ವೆಚ್ಚದಲ್ಲಿ ಈ ವರ್ಷದ ಮಳೆಗಾಲ ಮುಗಿಯುವ ಮುನ್ನ ಹೂವು–ಹಣ್ಣು ಬಿಡುವಂಥ ಹತ್ತು ಬಗೆಯ ಎಂಟು ಸಾವಿರ ಸಸಿಗಳ ನಾಟಿ ಮಾಡುವ ಗುರಿ ಹೊಂದಿದೆ. ಅದರಲ್ಲಿ ಆಗಸ್ಟ್‌ ಮಧ್ಯಭಾಗದ ತನಕ ಒಟ್ಟು ಐದು ಸಾವಿರ ಸಸಿಗಳ ನಾಟಿ ಮುಗಿದಿದೆ. ಈ ಕಾಮಗಾರಿಯನ್ನು ವಿಜಯದುರ್ಗ ನರ್ಸರಿಗೆ ಗುತ್ತಿಗೆ ನೀಡಲಾಗಿದ್ದು, ಒಂದು ವರ್ಷದ ತನಕ ನಿರ್ವಹಣೆಯ ಹೊಣೆಯೂ ಅದರಲ್ಲಿ ಸೇರಿದೆ.

ಇನ್ನು, 2023–24ನೇ ಸಾಲಿನ ಎನ್‌ಕ್ಯಾಪ್‌ ಯೋಜನೆಯಡಿ ಪಾಲಿಕೆಯಿಂದ ₹1.40 ಕೋಟಿ ಅನುದಾನವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಅನುದಾನದಲ್ಲಿ ಅರಣ್ಯ ಇಲಾಖೆಯು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಶಾಹಬಜಾರ್‌ ನಾಕಾ ಮೂಲಕ ಆಳಂದ ಚೆಕ್‌ ಪೋಸ್ಟ್‌, ಅನ್ನಪೂರ್ಣ ಕ್ರಾಸ್‌ನಿಂದ ಇಎಸ್‌ಐ ಆಸ್ಪತ್ರೆ ಮಾರ್ಗವಾಗಿ ಖರ್ಗೆ ಪೆಟ್ರೋಲ್‌ ಬಂಕ್‌ನಂಥ ಏಳು ಪ್ರಮುಖ ಮಾರ್ಗಗಳಲ್ಲಿ 4,950 ಸಸಿಗಳನ್ನು ನೆಟ್ಟಿದೆ. 10 ವಿವಿಧ ತಳಿಗಳ ಸಸಿಗಳನ್ನು ನಾಟಿ ಮಾಡಿರುವ ಅರಣ್ಯ ಇಲಾಖೆಯು ಮೂರು ವರ್ಷಗಳ ನಿರ್ವಹಣೆಯ ಹೊಣೆಯನ್ನೂ ಹೊತ್ತಿದೆ.

ಇದಕ್ಕೂ ಮುನ್ನ 2021–22ನೇ ಸಾಲಿನ ಎನ್‌ಕ್ಯಾಪ್‌ ಯೋಜನೆಯಡಿ ಪಾಲಿಕೆಯಿಂದ ₹1 ಕೋಟಿ ವೆಚ್ಚದಲ್ಲಿ ನಗರದ ರಸ್ತೆ, ಉದ್ಯಾನಗಳಲ್ಲಿ 13 ಬಗೆಯ ವಿವಿಧ ತಳಿಗಳ 19,036 ಸಸಿಗಳನ್ನು ನಾಟಿ ಮಾಡಲಾಗಿತ್ತು. ಅದರಲ್ಲಿ ನಾಲ್ಕು ಬಗೆಯ 15,900ರಷ್ಟು ಆಲಂಕಾರಿಕ ಸಸ್ಯಗಳನ್ನು ನಗರದ ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ ನಾಟಿ ಮಾಡಲಾಗಿತ್ತು.

ಇದಲ್ಲದೇ, 15ನೇ ಹಣಕಾಸು ಅನುದಾನದಲ್ಲಿ ₹75 ಲಕ್ಷ ವೆಚ್ಚದಲ್ಲಿ ನಗರ ಅರಣ್ಯೀಕರಣ ಯೋಜನೆಯಡಿಯೂ ಪಾಲಿಕೆಯಿಂದ ಹತ್ತು ಉದ್ಯಾನಗಳಲ್ಲಿ 688 ಗಿಡಗಳನ್ನು ನಾಟಿ ಮಾಡಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

‘ಪ್ರಾಣವಾಯು‌’ ಸುಧಾರಣೆ ಯತ್ನ...

ಕಲಬುರಗಿ ನಗರದಲ್ಲಿ ಗಾಳಿ ಶುದ್ಧತೆ ಅಳೆಯುವ ಎರಡು ಮಾಪನ ಕೇಂದ್ರಗಳಿದ್ದು, ಅವುಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಿರ್ವಹಿಸುತ್ತದೆ. ಈ ಕೇಂದ್ರಗಳಲ್ಲಿರುವ ಡಿಜಿಟಲ್‌ ಪರದೆ ಮೇಲೆ ಗಾಳಿಯ ಗುಣಮಟ್ಟ, ದೂಳಿನ ಕಣಗಳ ಮಾಹಿತಿ, ಆಮ್ಲಜನಕ ಪ್ರಮಾಣ, ಇಂಗಾಲ ಡೈಆಕ್ಸೈಡ್‌ ಪ್ರಮಾಣ ಇತ್ಯಾದಿ ತೋರಿಸಲಾಗುತ್ತದೆ.

2021–22ರಲ್ಲಿ ಕಲಬುರಗಿಯಲ್ಲಿ ಗಾಳಿಯಲ್ಲಿ ಪಿಎಂ10(ದೂಳು ಕಣ) ಪ್ರಮಾಣ ವಾರ್ಷಿಕ ಸರಾಸರಿ ಪ್ರತಿ ಚದರ ಮೀಟರ್‌ಗೆ 82 ಮಿಲಿಗ್ರಾಂನಷ್ಟಿತ್ತು. ಅದನ್ನು 2025–26ನೇ ಸಾಲಿಗೆ ಪ್ರತಿ ಚದರ ಮೀಟರ್‌ಗೆ 61 ಮಿಲಿಗ್ರಾಂಗೆ ತಗ್ಗಿಸುವ ಗುರಿಯನ್ನು ಕೇಂದ್ರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ನಿಗದಿಪಡಿಸಿದೆ. ಆ ಗುರಿ ಮುಟ್ಟಲು ಸಸಿಗಳ ನಾಟಿಯೂ ಒಂದು ಉಪಕ್ರಮವಾಗಿದೆ. ಕಲಬುರಗಿಯಲ್ಲಿ ವಾಯು ಮಾಲಿನ್ಯ ಪ್ರಮಾಣವನ್ನು 2023–24ನೇ ಸಾಲಿಗೆ ಶೇ5ರಷ್ಟು, 2024–25ನೇ ಸಾಲಿಗೆ ಶೇ4ರಷ್ಟು ತಗ್ಗಿಸುವ ಗುರಿಯನ್ನು ನೀಡಲಾಗಿದೆ.

ಎನ್‌ಕ್ಯಾಪ್‌ ಯೋಜನೆಯಡಿ ರಸ್ತೆ ಬದಿಗೆ ಹೂವು–ಹಣ್ಣುಗಳನ್ನು ಬಿಡುವ ಪ್ರಾಣಿ ಪಕ್ಷಿಗಳಿಗೆ ಆಹಾರ, ಆಶ್ರಯ ಒದಗಿಸುವಂಥ ಸಸಿಗಳ ನಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಆರ್‌.ಪಿ.ಜಾಧವಉಪ ಆಯುಕ್ತ(ಅಭಿವೃದ್ಧಿ), ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT