ಭಾನುವಾರ, ಆಗಸ್ಟ್ 1, 2021
22 °C
ದಿಕ್ಕು ತೋಚದ ಸ್ಥಿತಿಯಲ್ಲಿ ಕಂಪನಿ ಕಲಾವಿದರು

ಕಲಬುರ್ಗಿ: ಅನ್‌ಲಾಕ್ ನಂತರವೂ ‘ಸರ್ಕಸ್’ ಜೀವನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೊರೊನಾ ಲಾಕ್‌ಡೌನ್‌ ಕೊನೆಗೊಂಡು ಒಂದೂವರೆ ತಿಂಗಳಾಗಿದ್ದು, ಜನಜೀವನ ಮತ್ತು ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಈ ಅನ್‌ಲಾಕ್‌ನ ಪ್ರಯೋಜನವು ಕೆಲವರಿಗೆ ದಕ್ಕಿದ್ದರೆ, ಇನ್ನೂ ಕೆಲವರಿಗೆ ಪ್ರತಿಫಲವೂ ತಂದುಕೊಟ್ಟಿಲ್ಲ. ಅಂಥವರ ಸಾಲಿನಲ್ಲಿ ಸರ್ಕಸ್‌ ಕಲಾವಿದರು ಸೇರಿದ್ದಾರೆ.

ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ತಂಗಿರುವ ಜಮುನಾ ಸರ್ಕಸ್‌ನ ಕಲಾವಿದರು ಅತ್ತ ಕಸರತ್ತು ಪ್ರದರ್ಶಿಸಲಾಗದೇ, ಇತ್ತ ತಮ್ಮೂರಿಗೆ ಹೋಗಲಾಗದೇ ದಿಕ್ಕೆಟ್ಟ ಸ್ಥಿತಿಯಲ್ಲಿದ್ದಾರೆ. ನಾಲ್ಕು ತಿಂಗಳು ಕಳೆದರೂ ಆರ್ಥಿಕವಾಗಿ ಸುಧಾರಿಸಿ
ಕೊಳ್ಳಲು ಮತ್ತು ನೆಮ್ಮದಿ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಶರಣಬಸವೇಶ್ವರ ಜಾತ್ರೆ ವೇಳೆ ಪ್ರದರ್ಶನ ತೋರಲೆಂದು ಆಂಧ್ರಪ್ರದೇಶದ ವಿಜಯವಾಡದಿಂದ ಮಾರ್ಚ್‌ನಲ್ಲಿ ಅವರು ಬಂದ ಎರಡೇ ವಾರದಲ್ಲಿ ಲಾಕ್‌ಡೌನ್ ಘೋಷಿಸಲಾಯಿತು. ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಭಾರಿ ಪ್ರಚಾರವೂ ನಡೆಸಿದ್ದ ಅವರು ನಿರಾಸೆಗೊಂಡು ಕೈಕಟ್ಟಿ ಕೂರಬೇಕಾಯಿತು.

‘ಮೇ 17ರಂದು ಅನ್‌ಲಾಕ್‌ ಘೋಷಣೆಯಾಗಿ, ಸರ್ಕಸ್ ಪ್ರದರ್ಶನಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಪ್ರದರ್ಶನಕ್ಕೆ ಅನುಮತಿ ಸಿಗಲಿಲ್ಲ. ಉಳಿತಾಯ ಮಾಡಿದ್ದ ಮತ್ತು ಅಲ್ಲಲ್ಲಿ ಸಾಲ ಇಸಿದುಕೊಂಡ ಹಣವೂ ಖಾಲಿಯಾಗುತ್ತ ಬಂತು. ಜಿಲ್ಲಾಡಳಿತ ಮತ್ತು ವಿವಿಧ ಸಂಘಸಂಸ್ಥೆಯವರು ನೀಡಿದ್ದ ಆಹಾರ ಪದಾರ್ಥವು ಸಹ ಖಾಲಿಯಾಗುತ್ತಿದೆ’ ಎಂದು ಜಮುನಾ ಸರ್ಕಸ್ ಕಂಪನಿ ಮಾಲೀಕ ಚರಣಜೀತ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

‘100ರ ಪೈಕಿ 40 ಮಂದಿ ಕಲಾವಿದರು, ತಂತ್ರಜ್ಞರು ಇಲ್ಲಿ ಉಳಿದುಕೊಂಡಿದ್ದಾರೆ. 18 ಲಾರಿಗಳಿಗೆ ಆಗವಷ್ಟು ಸರಕುಗಳು ಇಲ್ಲಿವೆ. ಇವೆಲ್ಲವೂ ಹೊತ್ತುಕೊಂಡು ಎಲ್ಲಿಯೆಂದು ಹೋಗುವುದು. ಬೇರೆ ಊರು ಅಥವಾ ರಾಜ್ಯಕ್ಕೆ ಹೋಗಲು ಆಗುವುದಿಲ್ಲ. ಒಂದು ವೇಳೆ ಹೋದರೂ ಅಲ್ಲಿ ಸರ್ಕಸ್ ಪ್ರದರ್ಶನಕ್ಕೆ ಅವಕಾಶ ಸಿಗುವುದೊ ಇಲ್ಲವೋ ಗೊತ್ತಿಲ್ಲ’ ಎಂದರು.

‘ಅಪರಿಚಿತ ಊರಿನಲ್ಲಿ ಕೆಲಸ ಹುಡುಕುವುದು ಮತ್ತು ಬದುಕು ಕಟ್ಟಿಕೊಳ್ಳುವುದು ತುಂಬಾನೇ ಕಷ್ಟ. ಇಲ್ಲಿನ ಜನರನ್ನು ಮನರಂಜಿಸುವುದು ಮತ್ತು ಸಂತೋಷ ಪಡಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಕೊರೊನಾ ಸೋಂಕಿನಿಂದಾದ ಬೆಳವಣಿಗೆಯು ಎಲ್ಲವನ್ನೂ ಕಸಿದುಕೊಂಡಿತು. ನಮ್ಮನ್ನು ಕಂಗಾಲು ಆಗಿಸಿತು’ ಎಂದು ತಿಳಿಸಿದರು.

ಜಿಲ್ಲಾಡಳಿತ ಮತ್ತು ಸಂಘಸಂಸ್ಥೆಯವರು ನಮಗೆ ನೆರವಾದಲ್ಲಿ ಅನುಕೂಲವಾಗುತ್ತದೆ. ಸಂಕಷ್ಟದಲ್ಲಿ ಇರುವ ನಮಗೆ ಆಸರೆ ನೀಡಬೇಕು.
–ಚರಣಜೀತ್ ಸಿಂಗ್, ಮಾಲೀಕ, ಜಮುನಾ ಸರ್ಕಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು