ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಬಣ್ಣಕ್ಕೆ ತಿರುಗಿದ ಸರಡಗಿ ಬ್ಯಾರೇಜ್‌ ನೀರು

ಕಲಬುರ್ಗಿ, ಜೇವರ್ಗಿಗೆ ನೀರು: ಅನಧಿಕೃತ ಪಂಪ್‌ಸೆಟ್‌ ತೆರವಿಗೆ ಸೂಚನೆ
Last Updated 19 ಮಾರ್ಚ್ 2019, 15:25 IST
ಅಕ್ಷರ ಗಾತ್ರ

ಕಲಬುರ್ಗಿ: ನಗರಕ್ಕೆ ಭೀಮಾ ನದಿಯಿಂದ ನೀರು ಪೂರೈಕೆ ಮಾಡುವ ಸರಡಗಿ ಬ್ಯಾರೇಜ್‌ನಲ್ಲಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಮಂಗಳವಾರ ಸರಡಗಿ ಬ್ಯಾರೇಜ್‌ ಹತ್ತಿರದ ಪಂಪ್‌ಹೌಸ್‌ಗೆ ಭೇಟಿ ನೀಡಿ ನೀರಿನ ಗುಣಮಟ್ಟ ಪರಿಶೀಲಿಸಿದರು.

‘ಬ್ಯಾರೇಜ್‍ನಲ್ಲಿ ಸಂಗ್ರಹವಾಗಿರುವ ನೀರು ಹಸಿರು ಬಣ್ಣದಿಂದ ಕೂಡಿದ್ದು, ಇಂಡಿ ಶಾಖಾ ಕಾಲುವೆ ಮೂಲಕ ಭೀಮಾ ನದಿಗೆ ಬಿಟ್ಟಿರುವ ನೀರು ಸರಡಗಿ ಬ್ಯಾರೇಜ್‌ಗೆ ಬಂದು ತಲುಪಿದರೆ ನೀರಿನ ಬಣ್ಣ ತಿಳಿಯಾಗಲಿದೆ’ ಎಂದರು.

‘ಕಲಬುರ್ಗಿ ನಗರಕ್ಕೆ ಸರಡಗಿ ಪಂಪ್ ಹೌಸ್‍ನಿಂದ ಪ್ರತಿದಿನ 5.5 ಕೋಟಿ ಲೀಟರ್‌ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರು ಶುದ್ಧೀಕರಣ ಘಟಕದಲ್ಲಿ ನೀರನ್ನು ಸಮಪರ್ಕವಾಗಿ ಶುದ್ಧೀಕರಿಸಬೇಕು. ಭೀಮಾ ನದಿ ಪಾತ್ರದಲ್ಲಿಯ ಅನಧಿಕೃತ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜೇವರ್ಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಟ್ಟಿಸಂಗಾವಿ ಪಂಪ್‍ಹೌಸ್‍ಗೆ ಭೇಟಿ ನೀಡಿ ಪರಿಶೀಲಿಸಿ, ‘ಕಟ್ಟಿಸಂಗಾವಿ ಬ್ರಿಜ್ ಹತ್ತಿರ ಹಾಗೂ ಸುತ್ತಲಿನ ನದಿ ಪಾತ್ರದಲ್ಲಿ ರೈತರು ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದಿಂದ ಪಂಪ್‌ಸೆಟ್‌ ಅಳವಡಿಸಿ ಹೊಲಗಳಿಗೆ ಹೊಲಗಳಿಗೆ ನೀರು ಪಡೆಯುತ್ತಿದ್ದಾರೆ ಎಂಬ ದೂರುಗಳಿವೆ. ಅಧಿಕಾರಿಗಳು ತಂಡಗಳನ್ನು ರಚಿಸಿ ಅನಧಿಕೃತ ಪಂಪ್‍ಸೆಟ್‍ಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದರು.

‘ಭೀಮಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಹರಿವು ಇಲ್ಲದ ಕಾರಣ ಮುಂಬರುವ ದಿನಗಳಲ್ಲಿ ಜೇವರ್ಗಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆ ಇದೆ. ಖಾಸಗಿ ಬೋರ್‌ವೆಲ್‍ಗಳ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ಹೇಳಿದರು.

‘ಸರಡಗಿ ಬ್ಯಾರೇಜ್‌ಗೆ ಇಂಡಿ ಶಾಖಾ ಕಾಲುವೆ ನೀರು ತಲುಪಿದ ನಂತರ ಸರಡಗಿ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆದು ಕಟ್ಟಿಸಂಗಾವಿ ಪಂಪ್‍ಹೌಸ್‍ವರೆಗೆ ನದಿಯಲ್ಲಿ ನೀರು ಬಿಡಲಾಗುವುದು. ಸರಡಗಿ ಬ್ಯಾರೇಜ್‍ನಿಂದ ಸುಮಾರು 15 ಕಿ.ಮೀ. ಅಂತರದಲ್ಲಿರುವ ಕಟ್ಟಿಸಂಗಾವಿ ಪಂಪ್‍ಹೌಸ್‍ವರೆಗೆ ನೀರು ತಲುಪಲು ಸಮಯ ಹಿಡಿಯಬಹುದಾಗಿದ್ದು, ನದಿಯಲ್ಲಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಕಲಬುರ್ಗಿ ಉಪವಿಭಾಗಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಐಎಎಸ್ ಪ್ರೊಬೇಷನರಿ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ಕಲಬುರ್ಗಿ ತಹಶೀಲ್ದಾರ್‌ ಸಂಜುಕುಮಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ವಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT