ಮಂಗಳವಾರ, ಅಕ್ಟೋಬರ್ 19, 2021
22 °C
ವಿವಾದದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಭಾಷಾ ಪಠ್ಯ ರಚನೆ ಸಮಿತಿ

ಕಲ್ಯಾಣ ಕರ್ನಾಟಕಕ್ಕೆ ಸಿಗದ ಪ್ರಾತಿನಿಧ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಕಾಲೇಜು ಶಿಕ್ಷಣ ಇಲಾಖೆಯು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಇಲಾಖೆ ಪರೀಕ್ಷಾ ಪಠ್ಯಕ್ರಮವನ್ನು ರೂಪಿಸಬೇಕಿದೆ. ಇದಕ್ಕಾಗಿ ರಚಿಸಲಾದ ಸಮಿತಿಯಲ್ಲಿ ಕಲ್ಯಾಣ ಕರ್ನಾಟಕದ ಒಬ್ಬರೂ ಪ್ರಾಧ್ಯಾಪಕರು ಇಲ್ಲದಿರುವುದು ಈ ಭಾಗದವರಲ್ಲಿ ಬೇಸರ ಮೂಡಿಸಿದೆ.

ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸಮಿತಿಯ ಸದಸ್ಯರಾಗಿ ಇರುತ್ತಾರೆ. ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ. ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಶಿಕ್ಷಣಶಾಸ್ತ್ರ, ಭೂಗೋಳವಿಜ್ಞಾನ, ಕಾನೂನು, ಪ್ರವಾಸೋದ್ಯಮ, ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ, ಭೌತ ವಿಜ್ಞಾನ, ಎಲೆಕ್ಟ್ರಾನಿಕ್ಸ್, ರಸಾಯನ ವಿಜ್ಞಾನ, ಜೈವಿಕ ರಸಾಯನ ವಿಜ್ಞಾನ, ಸೂಕ್ಷ್ಮ ಜೀವವಾಣುಶಾಸ್ತ್ರ, ಪ್ರಾಣಿಶಾಸ್ತ್ರ, ಗಣಿತಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ, ಫ್ಯಾಷನ್ ಟೆಕ್ನಾಲಜಿ, ಸಸ್ಯಶಾಸ್ತ್ರ, ಅನ್ವಯಿಕ ಸಸ್ಯಶಾಸ್ತ್ರ ವಿಷಯಗಳಲ್ಲಿ ಪಠ್ಯವನ್ನು ರೂಪಿಸಲು ಸರಾಸರಿ ಮೂವರು ಸದಸ್ಯರನ್ನು ನೇಮಕ ಮಾಡಿ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ಸೇರಿದ ಒಬ್ಬ ಪ್ರಾಧ್ಯಾಪಕರೂ
ಸದಸ್ಯರಿಲ್ಲ.

ಸಮಿತಿಯಲ್ಲಿರುವ ಬಹುತೇಕ ಸದಸ್ಯರು ಬೆಂಗಳೂರು, ರಾಮನಗರ, ಕೋಲಾರ, ಬಾಗೇಪಲ್ಲಿ, ದೊಡ್ಡಬಳ್ಳಾಪುರದ ಪ್ರಥಮ ದರ್ಜೆ ಕಾಲೇಜುಗಳಿಗೆ ಸೇರಿದವರಾಗಿದ್ದಾರೆ. ಇಬ್ಬರು ಸಹಾಯಕ ಪ್ರಾಧ್ಯಾಪಕರು ಮಾತ್ರ ಉತ್ತರ ಕರ್ನಾಟಕದ ಜಮಖಂಡಿ ಹಾಗೂ ನರಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸೇರಿದವರಾಗಿದ್ದಾರೆ.

ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ.ಎಚ್‌.ಟಿ. ಪೋತೆ, ‘ಪಠ್ಯ ರಚನಾ ಸಮಿತಿಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಇಂತಹ ದಿವ್ಯ ನಿರ್ಲಕ್ಷ್ಯ ಮೊದಲಿನಿಂದಲೂ ಇದೆ. ಇದನ್ನು ಸರಿಪಡಿಸಬೇಕು ಎಂಬ ನಮ್ಮ ಮನವಿಗಳಿಗೆ ಮಾನ್ಯತೆ ಸಿಕ್ಕಿಲ್ಲ. ಮುಖ್ಯಮಂತ್ರಿ ಅವರು ಸೇರಿದಂತೆ ಸರ್ಕಾರದ ಬಹುತೇಕ ಸಚಿವರು ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭಾಷಣ ಮಾಡುತ್ತಾರೆ. ಆದರೆ, ಪ್ರಮುಖ ಸಮಿತಿಗಳಲ್ಲಿ ಸೇರ್ಪಡೆ ಮಾಡಿಕೊಳ್ಳುವ ವಿಚಾರ ಬಂದಾಗ ಅವರ ಒಲವು ಬೆಂಗಳೂರನ್ನೇ ಕೇಂದ್ರೀಕರಿಸಿರುತ್ತದೆ. ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ನೇಮಕಾತಿ ವಿಳಂಬ ಮಾಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿರುವ ಸರ್ಕಾರ ಇದೀಗ ಪಠ್ಯ ರಚನಾ ಸಮಿತಿಯಲ್ಲಿಯೂ ಪ್ರಾತಿನಿಧ್ಯ ನೀಡದಿರುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದರು.

ಈ ಧೋರಣೆಗೆ ಬೇಸರ ವ್ಯಕ್ತಪಡಿಸಿರುವ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು, ‘ಸರ್ಕಾರದ ಈ ಧೋರಣೆ ನೋಡಿದರೆ ಈ ಭಾಗದಲ್ಲಿ ಯಾರೂ ಪರಿಣಿತ ಪ್ರಾಧ್ಯಾಪಕರೇ ಇಲ್ಲ ಎಂಬ ಭಾವನೆ ಮೂಡುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.