ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ನಿರಂತರ ಸಂಪರ್ಕ

ಗ್ರಾಮೀಣ ಮತಕ್ಷೇತ್ರದಲ್ಲಿ ಲೀಡ್‌ ಪಡೆಯಲು ಪ್ರಿಯಾಂಕ್‌, ಶರಣಪ್ರಕಾಶ ಹರಸಾಹಸ
Published 30 ಏಪ್ರಿಲ್ 2024, 6:12 IST
Last Updated 30 ಏಪ್ರಿಲ್ 2024, 6:12 IST
ಅಕ್ಷರ ಗಾತ್ರ

ಕಮಲಾಪುರ: ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 19,570 ಮತಗಳ ಅಂತರದ ಹಿನ್ನಡೆಯಾಗಿದ್ದಕ್ಕೆ ಪಕ್ಷ ಈ ಬಾರಿ ಎಚ್ಚರಗೊಂಡಿದೆ. ಹಿಂದಿನ ಪ್ರಮಾದ ಮರುಕಳಿಸದಂತೆ ನಾಯಕರು ಎಲ್ಲ ಎಚ್ಚರ ವಹಿಸಿದ್ದಾರೆ.

ಕೇವಲ ಮುಖಂಡರ ಮೇಲೆ ಭರವಸೆ ಇಟ್ಟು ಕುಳಿತರೆ ಮತ ಸೆಳೆಯಲು ಸಾಧ್ಯವಿಲ್ಲ ಎಂದು ಅರಿತ ಸಚಿವ ಪ್ರಿಯಾಂಕ್ ಖರ್ಗೆ ಖುದ್ದು ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಬೂತ್ ಮಟ್ಟದಲ್ಲಿ 10ರಿಂದ 15 ಜನ ಕಾರ್ಯಕರ್ತರ ಹೆಸರು, ಮೊಬೈಲ್‌ ನಂಬರ್‌ ಕಲೆ ಹಾಕಲಾಗುತ್ತಿದೆ. ಇದರಲ್ಲಿ ಬೂತ್‌ನಲ್ಲಿರುವ ಎಲ್ಲ ಜಾತಿ, ಜನಾಂಗ, ಧರ್ಮದವರು ಸೇರಿದಂತೆ ಬೇರೆ ಪಕ್ಷದವರ ಹೆಸರನ್ನೂ ಸಂಗ್ರಹಿಸುವಂತೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ ಪ್ರಿಯಾಂಕ್ ಖರ್ಗೆ ‘ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನನಗೆ ನೇರವಾಗಿ ತಿಳಿಸಿ’ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಖರ್ಗೆ ಸೋಲುತ್ತಾರೆ ಎಂದು ಯಾರೂ ನಂಬಿರಲೇ ಇಲ್ಲ. ಅಂತರ ಕಡಿಮೆಯಾದರೂ ಖರ್ಗೆಯವರ ಗೆಲುವು ಖಚಿತ ಎನ್ನಲಾಗುತ್ತಿತ್ತು. ಚುನಾವಣೆಯನ್ನೂ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. 95 ಸಾವಿರ ಮತಗಳ ಅಂತರದಿಂದ ಸೋಲುಂಡಾಗ ಖರ್ಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದರು.

ಈ ಬಾರಿ ಶತಾಯಗತಾಯ ರಾಧಾಕೃಷ್ಣ ಅವರನ್ನು ಗೆಲ್ಲಿಸಲೇಬೇಕಂದು ಪಣತೊಟ್ಟಿರುವ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ತಂಡ ಪಕ್ಷದ ಮುಖಂಡರಿಗೆ ಸಂದೇಶ ನೀಡುವ ಜತೆ ಬೂತ್‌ ಮಟ್ಟದಲ್ಲೂ ಸಕ್ರಿಯವಾಗಿದ್ದಾರೆ. ಎಲ್ಲ ಜಾತಿ, ಜನಾಂಗದವರ ಪ್ರತ್ಯೇಕ ಸಭೆ ನಡೆಸಿ ರಾಧಾಕೃಷ್ಣ ಅವರನ್ನು ಬೆಂಬಲಿಸುವಂತೆ ಕೋರಲಾಗುತ್ತಿದೆ. ಮುಸ್ಲಿಂ, ಪರಿಷ್ಟ ಜಾತಿ ಬಲ ಸಮುದಾಯದ ಮತಗಳನ್ನು ಈಗಾಗಲೇ ಗಟ್ಟಿಗೊಳಿಸಲಾಗಿದೆ.

ಗೆಲುವಿಗೆ ಇಷ್ಟೆಲ್ಲ ಕಸರತ್ತು ನಡೆಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಮೋದಿ ಭಯ ಮಾತ್ರ ಬೆನ್ನು ಬಿಡದೆ ಕಾಡುತ್ತಿದೆ. ಚುನಾವಣೆ ಒಂದು ವಾರವಿದ್ದು ಮೋದಿ ಪಡೆ ಜನರಿಗೆ ಯಾವ ಡೋಸ್ ನೀಡುತ್ತೋ ಗೊತ್ತಿಲ್ಲ.

ಎಚ್ಚರ ತಪ್ಪಿದರೆ ಬುಡಮೇಲಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಬಿಜೆಪಿ ನಾಯಕರ ಆತಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT