ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಕೆಆರ್‌ಡಿಬಿ ಸಭೆ: 10 ದಿನದಲ್ಲಿ ಪ್ರಸ್ತಾವ ಸಲ್ಲಿಸಲು ಸೂಚನೆ

ಕೆಕೆಆರ್‌ಡಿಬಿ ಸಭೆ: ₹5,000 ಕೋಟಿಗೆ ಕ್ರಿಯಾ ಯೋಜನೆ ರೂಪಿಸಲು ಅನುಮೋದನೆ
Published 1 ಜುಲೈ 2024, 15:59 IST
Last Updated 1 ಜುಲೈ 2024, 15:59 IST
ಅಕ್ಷರ ಗಾತ್ರ

ಕಲಬುರಗಿ: 2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಘೋಷಿಸಿರುವ ₹5,000 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ಇಲ್ಲಿನ ಕೆಕೆಆರ್‌ಡಿಬಿಯ ಸಭಾಂಗಣದಲ್ಲಿ ಸೋಮವಾರ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಮಂಡಳಿಯ ಸಭೆ ಜರುಗಿತು.

ಸಭೆಯಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ, ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್.ಪಾಟೀಲ, ಬಸವರಾಜ ರಾಯರೆಡ್ಡಿ ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಲ್ಯಾಣ ಕರ್ನಾಟಕ ಭಾಗದ 41 ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ, ಕೌಶಲಾಭಿವೃದ್ಧಿ, ಗ್ರಾಮೀಣ ರಸ್ತೆ ಇತರೆ ಮೂಲಸೌಕರ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಉತ್ತಮಗೊಳಿಸುವ ಯೋಜನೆಗಳನ್ನು ಹಾಕಿಕೊಳ್ಳಲು ನಿರ್ಧರಿಸಲಾಯಿತು.

ಕಳೆದ ತಿಂಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿತ್ತು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಶೈಕ್ಷಣಿಕ ವರ್ಷ ಎಂದು ಪರಿಗಣಿಸಿ ಶೇ 25ರಷ್ಟು ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲು ಸಭೆಯಲ್ಲಿ ನಿರ್ಧರಿಸಿತು. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು.

10 ದಿನದಲ್ಲಿ ಪ್ರಸ್ತಾವ ಸಲ್ಲಿಸಿ: ಪ್ರಸಕ್ತ ಸಾಲಿನ ₹5,000 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ತ್ವರಿತವಾಗಿ ರೂಪಿಸಬೇಕಿದೆ. ಹೀಗಾಗಿ, ಆಯಾ ಕ್ಷೇತ್ರಗಳ ಶಾಸಕರು ಮುಂದಿನ 10 ದಿನಗಳ ಒಳಗಾಗಿ ಮಂಡಳಿಗೆ ಕ್ರಿಯಾ ಯೋಜನೆಗಳ ಪ್ರಸ್ತಾವ ಸಲ್ಲಿಸಬೇಕು ಎಂದು ಪ್ರಸ್ತಾಪಿಸಲಾಯಿತು. ಇದಕ್ಕೆ ಸಭೆಯೂ ಒಪ್ಪಿಗೆ ನೀಡಿತು.

‘ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜಮೀನು ನೀಡುವ ಬಗ್ಗೆ ಚರ್ಚೆಯಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಯಿಸಿ ಕೃಷಿಗೆ ಅಗತ್ಯವಾದಷ್ಟು ನೀರು ಪೂರೈಸುವ ಸಂಬಂಧವೂ ಪ್ರಸ್ತಾಪವಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಗಿದೆ’ ಎಂದು ಸದಸ್ಯರೊಬ್ಬರು ಹೇಳಿದ್ದಾರೆ.

ಸಭೆಯಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಕೆ.ರಾಘವೇಂದ್ರ ಹಿಟ್ನಾಳ, ಎಚ್.ಆರ್.ಗವಿಯಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಮನೋಜ ಜೈನ್, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ್ ಬಾಬು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ಆಕಾಶ್ ಶಂಕರ್, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕ ಡಿ. ಚಂದ್ರಶೇಖರಯ್ಯ, ಕೆಕೆಆರ್‌ಡಿಬಿ ಉಪ ಕಾರ್ಯದರ್ಶಿ ಎಂ.ಕೆ.ಪ್ರಮೀಳಾ, ಹೆಚ್ಚುವರಿ ನಿರ್ದೇಶಕಿ ಪ್ರವೀಣ ಪ್ರಿಯಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT