ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ತೆರಿಗೆ ಸಂಗ್ರಹಕ್ಕೆ ಬರ, ಅಭಿವೃದ್ಧಿಗೆ ಗರ

ಕಲಬುರಗಿ ನಗರದ ರಸ್ತೆ, ಚರಂಡಿ, ಉದ್ಯಾನಗಳ ಅಭಿವೃದ್ಧಿಗೆ ದೊಡ್ಡ ಹೊಡೆತ!
Published 26 ಫೆಬ್ರುವರಿ 2024, 6:45 IST
Last Updated 26 ಫೆಬ್ರುವರಿ 2024, 6:45 IST
ಅಕ್ಷರ ಗಾತ್ರ

ಕಲಬುರಗಿ: ಯಾವುದೇ ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ, ವಾಣಿಜ್ಯ ಕಟ್ಟಡಗಳ ಗುತ್ತಿಗೆ, ವಾಣಿಜ್ಯ ಕಟ್ಟಡಗಳ ಬಾಡಿಗೆಯೇ ಆದಾಯದ ಪ್ರಮುಖ ಮೂಲ. ಆದರೆ, ಇಂಥ ಕರ ಸಂಗ್ರಹದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಹಿಂದೆ ಬಿದ್ದಿದೆ.

ಕಳೆದ ವರ್ಷಗಳ ಬಾಕಿಯೂ ಸೇರಿದಂತೆ 2023–24ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು ₹ 74.26 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. 2024ರ ಜನವರಿ 31ರ ತನಕ ಒಟ್ಟು ₹ 32.42 ಕೋಟಿ ತೆರಿಗೆ ಸಂಗ್ರಹಿಸಿ, ಕೇವಲ ಶೇ 43.66ರಷ್ಟು ಪ್ರಗತಿ ಸಾಧಿಸಿದೆ. ತೆರಿಗೆ ಸಂಗ್ರಹ ಅಭಿಯಾನ, ಪಾಲಿಕೆಯ ಕಸದ ವಾಹನಗಳಲ್ಲಿ ಜಿಂಗಲ್ಸ್‌ ಮೂಲಕ ಜಾಗೃತಿ ಮೂಡಿಸಿದರೂ ಸಂಪೂರ್ಣ ತೆರಿಗೆ ಸಂಗ್ರಹ ಸಾಧ್ಯವಾಗಿಲ್ಲ. 2023–24ನೇ ಸಾಲಿನ ಆರ್ಥಿಕ ವರ್ಷ ಮುಗಿಯಲು ಉಳಿದಿರುವುದು ಬಹುತೇಕ ಇನ್ನೊಂದೇ ತಿಂಗಳು.

ಪಾಲಿಕೆ ವ್ಯಾಪ್ತಿಯಲ್ಲಿ 2023–24ನೇ ಆರ್ಥಿಕ ವರ್ಷದಲ್ಲಿ ಗೃಹ ಹಾಗೂ ವಾಣಿಜ್ಯ ಸೇರಿದಂತೆ ಒಟ್ಟು 473 ಕಟ್ಟಡಗಳ ಅರ್ಜಿಗಳನ್ನು ಅನುಮೋದಿಸಲಾಗಿದ್ದು, ಪರವಾನಗಿ ಹಾಗೂ ಶುಲ್ಕ ರೂಪದಲ್ಲಿ ₹ 5.64 ಕೋಟಿ ಸಂಗ್ರಹಿಸಿದೆ. 12 ಸಾವಿರದಷ್ಟು ವ್ಯಾಪಾರ ಪರವಾನಗಿ ಶುಲ್ಕದ ಭಾಗವಾಗಿ ₹ 2 ಕೋಟಿ (ಕಳೆದ ವರ್ಷದ ₹ 40 ಲಕ್ಷ ಬಾಕಿ) ಸಂಗ್ರಹಿಸುವ ಗುರಿ ಹೊಂದಿದ್ದು, ಅದರಲ್ಲಿ ₹ 1.53 ಕೋಟಿ ಸಂಗ್ರಹಿಸಿದೆ.

ಆದರೆ, ಪಾಲಿಕೆಯ ತರಕಾರಿ ಹಾಗೂ ಮಾಂಸದ ಮಾರುಕಟ್ಟೆಗಳಿಂದ ನಿರೀಕ್ಷಿತ ಆದಾಯವೇ ಪಾಲಿಕೆಗೆ ಇಲ್ಲದಾಗಿದೆ. ಹಳೇ ತರಕಾರಿ ಮಾರುಕಟ್ಟೆಯಲ್ಲಿ 271 ಮಳಿಗೆಗಳಿದ್ದು, ಅವು ಶಿಥಿಲಗೊಂಡಿವೆ. ಹೀಗಾಗಿ 2021ರಿಂದ ಬಾಡಿಗೆ ಸಂಗ್ರಹಿಸಿಲ್ಲ. ಅಲ್ಲಿನ ಬಾಡಿಗೆದಾರರಿಂದ ₹ 27.13 ಲಕ್ಷ ಗುತ್ತಿಗೆ ಮೊತ್ತ ಉಳಿದಿದೆ. ಹೊಸ ತರಕಾರಿ ಮಾರುಕಟ್ಟೆಯಲ್ಲಿ 415 ಮಳಿಗೆಗಳಿದ್ದು, ಈ ವರ್ಷವೂ ಸೇರಿದಂತೆ ಒಟ್ಟು ₹ 6.69 ಕೋಟಿ ಗುತ್ತಿಗೆ ಮೊತ್ತ ಉಳಿದಿದೆ. ಇನ್ನು, ಮಾಂಸದ ಮಾರುಕಟ್ಟೆಯಲ್ಲಿ 34 ಮಳಿಗೆಗಳಿದ್ದು, ಅದರಲ್ಲಿ 12 ಖಾಲಿ ಇವೆ. ಉಳಿದ ಮಳಿಗೆಗಳಿಂದ ಹಳೆಯ ಬಾಕಿ ₹3.22 ಲಕ್ಷ ಹಾಗೂ ಈ ವರ್ಷದ ಗುತ್ತಿಗೆ ಮೊತ್ತ ₹3.46 ಲಕ್ಷ ಸೇರಿದಂತೆ ಒಟ್ಟು₹6.46 ಲಕ್ಷ ಸಂಗ್ರಹ ಗುರಿ ಹೊಂದಿದ್ದು, ಜನವರಿ ಅಂತ್ಯದ ತನಕ ಕೇವಲ ₹1.08 ಲಕ್ಷ ಸಂಗ್ರಹವಾಗಿದೆ.

ನಿರೀಕ್ಷಿತ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹವಾಗದ ಕಾರಣ, ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಬಿಡಿ, ‌ರಸ್ತೆಗಳು, ಚರಂಡಿಗಳು, ಉದ್ಯಾನಗಳ ನಿರ್ವಹಣೆಯೂ ಕಷ್ಟವಾಗುತ್ತಿದೆ. ದಿನಬೆಳಗಾದರೆ ನಗರದ ಶುಚಿತ್ವ, ಸೌಂದರ್ಯೀಕರಣಕ್ಕೆ ಟೊಂಕಕಟ್ಟಿ ದುಡಿಯುವ ಪೌರ ಕಾರ್ಮಿಕರ ಬದುಕಿನ ಬಣ್ಣ ಹಲವು ತಿಂಗಳಿಂದ ವೇತನವಿಲ್ಲದೇ ಮಾಸಿದೆ. ಗ್ರಂಥಾಲಯ ಇಲಾಖೆಗೆ ₹ 1 ಕೋಟಿಯಷ್ಟು ಸೆಸ್‌ ಪಾವತಿಸುವುದನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ. ಮಾತ್ರವಲ್ಲ, ಪಾಲಿಕೆಯ ಸಾಮಾನ್ಯ ಅನುದಾನದಲ್ಲಿ ಕಳೆದೊಂದು ವರ್ಷದಲ್ಲಿ ಒಂದೂ ಪ್ರಮುಖ ಅಭಿವೃದ್ಧಿ ಕೆಲಸವಾಗಿಲ್ಲ!

ಆರಕ್ಕೇರದ ಮೂರಕ್ಕಿಳಿಯದ ಲೆಕ್ಕಾಚಾರ:‌ ಕಳೆದೆರಡು ವರ್ಷಗಳಿಂದ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸಿದ್ದು ನಿಜ. ಆದರೆ, ಪ್ರತಿ ವರ್ಷ ಸಾಮಗ್ರಿ ವೆಚ್ಚ, ಕಾರ್ಮಿಕರ ಸಂಬಳ ಇತ್ಯಾದಿಗಳು ಸಹಜವಾಗಿಯೇ ಹೆಚ್ಚುತ್ತವೆ. ಹೀಗಾಗಿ ವರಮಾನ ಸಂಗ್ರಹದಲ್ಲಿ ಶೇ 10ರಿಂದ ಶೇ 20ರಷ್ಟು ಹೆಚ್ಚಳ ಹಣದುಬ್ಬರ ಏರಿಳಿತಕ್ಕೆ ಹೊಂದಿಕೆಯಾಗುತ್ತದೆ. ಕಾರ್ಮಿಕರ ಸಂಬಳ, ವಾಹನಗಳ ಬಾಡಿಗೆ, ಚಾಲಕರ ಬಾಡಿಗೆ, ಸಿಬ್ಬಂದಿ ವೇತನ ಸೇರಿದಂತೆ ಪಾಲಿಕೆ ನಿರ್ವಹಣೆಗೆ ತಿಂಗಳಿಗೆ ಕನಿಷ್ಠ ₹ 4.5 ಕೋಟಿ ವೆಚ್ಚವಾಗುತ್ತದೆ. ಆದರೆ, ಕಲಬುರಗಿ ಮಹಾನಗರ ಪಾಲಿಕೆಗೆ ಅಷ್ಟು ವರಮಾನವೇ ಬರುತ್ತಿಲ್ಲ!

ತೆರಿಗೆ ಬಾಕಿ ಉಳಿಯಲು ಕಾರಣವೇನು?: ‘ಪಾಲಿಕೆ ವ್ಯಾಪ್ತಿಯಲ್ಲಿ ಕರ ಸಂಗ್ರಹದಲ್ಲಿ ಹಿಂದೆ ಬೀಳಲು ಬಿಲ್‌ ಕಲೆಕ್ಟರ್‌ಗಳ ಕೊರತೆ, ಕೆಎಂಎಫ್‌–24 ಸಮೀಕ್ಷೆ (ಆಸ್ತಿಗಳ ಡಿಜಿಟಲೀಕರಣ) ಪೂರ್ಣಗೊಳ್ಳದಿರುವುದು ಸೇರಿದಂತೆ ಹಲವು ಕಾರಣಗಳಿವೆ. ಪಾಲಿಕೆ ವ್ಯಾಪ್ತಿಯಲ್ಲಿ 55 ವಾರ್ಡ್‌ಗಳಿದ್ದು, ಅದರ ಅರ್ಧದಷ್ಟೂ ಬಿಲ್‌ ಕಲೆಕ್ಟರ್‌ಗಳಿಲ್ಲ. ಒಂದೊಂದು ವಾರ್ಡ್‌ನಲ್ಲಿ ಸಾವಿರಾರು ಮನೆಗಳಿದ್ದು, ಕನಿಷ್ಠ ವಾರ್ಡ್‌ಗೊಬ್ಬರಾದರೂ ಬಿಲ್‌ ಕಲೆಕ್ಟರ್‌ಗಳಾದರೂ ಬೇಕು. ಜೊತೆಗೆ ಕರ ಪಾವತಿಸುವ ತಂತ್ರಜ್ಞಾನವನ್ನೂ ಅಪ್‌ಡೇಟ್‌ ಮಾಡುವ ಅಗತ್ಯವಿದೆ’ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಮತ.

ಅಕ್ರಮ ಬಡಾವಣೆಗಳೇ ಹೊರೆ?: ‘ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣಕ್ಕೆ ಹೊಸ ಆದಾಯ ಮೂಲಗಳು ಅಗತ್ಯ. ಆದರೆ, ನಗರದಲ್ಲಿರುವ ಶೇ 30ಕ್ಕೂ ಹೆಚ್ಚು ಬಡಾವಣೆಗಳೇ ಅಕ್ರಮವಾಗಿ ನಿರ್ಮಿಸಲಾಗಿದೆ. ಎನ್‌.ಎ ಆಗಿಲ್ಲದೇ, ಲೇಔಟ್‌ಗೆ ಅನುಮೋದನೆ ಪಡೆಯದೇ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಕೆಲಸವಾಗಿಲ್ಲ. ರಿಂಗ್‌ ರಸ್ತೆ ದಾಟಿ ದೂರದ ತನಕ ಕಲಬುರಗಿ ಪಾಲಿಕೆ ವ್ಯಾಪ್ತಿ ವಿಸ್ತರಿಸಿದೆ. ಆದರೆ, ಈಗಲೂ ಪಾಲಿಕೆ ವ್ಯಾಪ್ತಿಯ ಸ್ವತ್ತುಗಳ ಸಂಖ್ಯೆ 1.51 ಲಕ್ಷದಷ್ಟೇ ಇವೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲ ಬಗೆಯ ಆಸ್ತಿಗಳಿಂದ ತೆರಿಗೆ ಸಂಗ್ರಹಿಸಿದರೆ, ಪಾಲಿಕೆ ಆದಾಯ ನಿಸ್ಸಂಶಯವಾಗಿ ಹೆಚ್ಚುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪೂರಕ ಮಾಹಿತಿ: ಜಗನ್ನಾಥ ಶೇರಿಕಾರ, ವೆಂಕಟೇಶ ಆರ್.ಹರವಾಳ, ಮಲ್ಲಿಕಾರ್ಜುನ ಎಚ್‌.ಎಂ., ನಿಂಗಣ್ಣ ಜಂಬಗಿ.

ಚಿಂಚೋಳಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ನೇತೃತ್ವದಲ್ಲಿ ಅಧಿಕಾರಿಗಳು ತೆರಿಗೆ ಸಂಗ್ರಹ ಅಭಿಯಾನ ನಡೆಸಿದ್ದ ಕ್ಷಣ
ಚಿಂಚೋಳಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ನೇತೃತ್ವದಲ್ಲಿ ಅಧಿಕಾರಿಗಳು ತೆರಿಗೆ ಸಂಗ್ರಹ ಅಭಿಯಾನ ನಡೆಸಿದ್ದ ಕ್ಷಣ
ವಾರ್ಡ್‌ ಸದಸ್ಯರೊಂದಿಗೆ ಸಮನ್ವಯ ಸಾಧಿಸಿ ತೆರಿಗೆ ಸಂಗ್ರಹಕ್ಕೆ ವಿಶೇಷ ಅಭಿಯಾನ ನಡೆಸುವ ಚಿಂತನೆಯಿದೆ. ಈ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ತೆರಿಗೆ ಸಂಗ್ರಹಕ್ಕೆ ಕ್ರಮವಹಿಸಲಾಗುವುದು
-ವಿಶಾಲ ದರ್ಗಿ, ಮೇಯರ್ ಕಲಬುರಗಿ ಮಹಾನಗರ ಪಾಲಿಕೆ
ಕಲಬುರಗಿ ನಗರ ಸಾಕಷ್ಟು ಬೆಳೆದಿದ್ದು ಅಧಿಕಾರಿಗಳು ವೈಜ್ಞಾನಿಕವಾಗಿ ತೆರಿಗೆ ಸಂಗ್ರಹಿಸಬೇಕು. ಆಗ ಪೌರ ಕಾರ್ಮಿಕರ ಸಂಬಳಕಷ್ಟೇ ಅಲ್ಲದೇ ಅಭಿವೃದ್ಧಿಗೂ ಹಣ ದೊರೆಯುತ್ತದೆ
-ಸುನೀಲ ಮಾನಪಡೆ, ಪೌರಕಾರ್ಮಿಕರ ಮುಖಂಡ ಕಲಬುರಗಿ

ಅಭಿಯಾನಕ್ಕೆ ಉತ್ತಮ ಸ್ಪಂದನೆ

ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ಗ್ರಾಮ ಪಂಚಾಯಿತಿಗಳೂ ಸೇರಿದಂತೆ ನಗರ–ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಸರಣಿ ಅಭಿಯಾನಗಳು ಜಿಲ್ಲೆಯಲ್ಲಿ ನಡೆದಿವೆ. ಇದಕ್ಕೆ ಸಾರ್ವಜನಿಕರೂ ಉತ್ತಮವಾಗಿ ಸ್ಪಂದಿಸಿದ್ದು ಕಲಬುರಗಿ ಪಾಲಿಕೆ ಶಹಾಬಾದ್ ನಗರಸಭೆ ಸೇರಿದಂತೆ ವಿವಿಧ ಪಟ್ಟಣ ಪಂಚಾಯಿತಿ ಪುರಸಭೆಗಳು 2023–24ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಆದರೆ ಹಿಂದಿನ ತೆರಿಗೆ ಬಾಕಿ ವಸೂಲಿ ಮಾಡುವ ಕೆಲಸಕ್ಕೆ ಒತ್ತು ನೀಡಿಲ್ಲ.

ಶೇ 97ರಷ್ಟು ತೆರಿಗೆ ಸಂಗ್ರಹ

ಚಿಂಚೋಳಿ: ಇಲ್ಲಿನ ಪುರಸಭೆಯಲ್ಲಿ ವ್ಯಾಪ್ತಿಯಲ್ಲಿ 2023–24ನೇ ಆರ್ಥಿಕ ವರ್ಷದಲ್ಲಲಿ ಪಟ್ಟಣದ ನಾಗರಿಕರಿಂದ ಒಟ್ಟು ₹ 73.85 ಲಕ್ಷ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. 2022-23ನೇ ಆರ್ಥಿಕ ವರ್ಷದ ₹ 6.25 ಲಕ್ಷ ಬಾಕಿ ಸೇರಿದಂತೆ ಪುರಸಭೆಯು ಈ ವರ್ಷ ಒಟ್ಟಾರೆ ₹ 80 ಲಕ್ಷದಷ್ಟು ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಅದರಲ್ಲಿ ಈ ತನಕ ₹ 78.12 ಲಕ್ಷ ಸಂಗ್ರಹಿಸಿದ್ದು ಒಟ್ಟಾರೆ ಶೇ 96.92ರಷ್ಟು ಪ್ರಗತಿ ಸಾಧಿಸಿದೆ. ಚಿಂಚೋಳಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ನೇತೃತ್ವದಲ್ಲಿ ಕಂದಾಯ ಅಧಿಕಾರಿ‌ ನಿಂಗಮ್ಮ‌ ಬಿರಾದಾರ ಕಂದಾಯ ನಿರೀಕ್ಷಕಿ ಸವಿತಾ ಮತ್ತು ಸಿಬ್ಬಂದಿ ಮನೆ ಭೇಟಿ ಮಾಡಿ ತೆರಿಗೆ ಪಾವತಿಸುವಂತೆ ಅಭಿಯಾನವನ್ನೂ ನಡೆಸಿದ್ದಾರೆ.

ಚಿತ್ತಾಪುರದಲ್ಲಿ ಗುರಿ ಮೀರಿ ಸಾಧನೆ

ಚಿತ್ತಾಪುರ: ಸ್ಥಳೀಯ ಪುರಸಭೆಯಿಂದ 2023-24ನೇ ಸಾಲಿನಲ್ಲಿ ಪಟ್ಟಣದ ನಾಗರಿಕರಿಂದ ಗುರಿ ಮೀರಿ ತೆರಿಗೆ ಸಂಗ್ರಹಿಸಲಾಗಿದೆ. ಚಿತ್ತಾಪುರ ಪಟ್ಟಣದಲ್ಲಿ ಮನೆ ಅಂಗಡಿ ಬಾಡಿಗೆ ಕಟ್ಟಡಗಳು ಹಾಗೂ ಖಾಲಿ ನಿವೇಶನ ಸೇರಿದಂತೆ ಒಟ್ಟು 15775 ಆಸ್ತಿಗಳಿವೆ. ಇವುಗಳಿಂದ 2023-24ನೇ ಸಾಲಿನಲ್ಲಿ ಒಟ್ಟು ₹ 78.98 ಲಕ್ಷ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಆದರೆ ಪುರಸಭೆ ಆಡಳಿತವು ₹ 81.48 ಲಕ್ಷ ತೆರಿಗೆ ಸಂಗ್ರಹಿಸು ಮೂಲಕ ಶೇ 103.17ರಷ್ಟು ಸಾಧನೆ ಮಾಡಿದೆ. ‘ತೆರಿಗೆ ವಸೂಲಿಗೆ ಪ್ರತಿ ವರ್ಷ ಒಂದು ಅಂದಾಜಿನ ಪ್ರಕಾರ ಮಾಡಲಾಗುತ್ತಿದೆ. ಪಟ್ಟಣದ ಎಲ್ಲ ಆಸ್ತಿಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ಒಳಪಡಿಸಿದರೆ ಇನ್ನೂ ಹೆಚ್ಚಿನ ತೆರಿಗೆ ಸಂಗ್ರಹಿಸಬಹುದು’ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಕರ ಪಾವತಿಸದಿದ್ದರೆ ದಂಡ!

ಜೇವರ್ಗಿ: ಇಲ್ಲಿನ ಪುರಸಭೆಯಲ್ಲಿ 2023–24ನೇ ಆರ್ಥಿಕ ವರ್ಷದಲ್ಲಿ ಪಟ್ಟಣದ ನಾಗರಿಕರಿಂದ ₹ 78 ಲಕ್ಷ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಈಗಾಗಲೇ ₹ 58 ಲಕ್ಷ ಕರ ವಸೂಲಿ ಮಾಡಲಾಗಿದೆ. ₹ 19 ಲಕ್ಷ ತೆರಿಗೆ ಸಂಗ್ರಹ ಬಾಕಿ ಉಳಿದೆ. ಸರ್ಕಾರಿ ಕಚೇರಿಗಳಿಂದ ₹ 13 ಲಕ್ಷ ಬಾಕಿ ಬರಬೇಕಾಗಿದೆ. ಖಾಲಿ ನಿವೇಶನ ಮನೆ ಹಾಗೂ ಕಟ್ಟಡಗಳ ತೆರಿಗೆ ₹ 6 ಲಕ್ಷ ಬಾಕಿ ಉಳಿದಿದೆ. ‘ತೆರಿಗೆ ಸಂಗ್ರಹಕ್ಕಾಗಿ ಪುರಸಭೆ ಸಿಬ್ಬಂದಿಯನ್ನು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಪಟ್ಟಣದ ನಾಗರಿಕರು ಕಾಲಮಿತಿಯಲ್ಲಿ ನೀರು ಹಾಗೂ ಆಸ್ತಿ ತೆರಿಗೆಯನ್ನು ಪುರಸಭೆ ಕಚೇರಿಗೆ ಪಾವತಿಸಬೇಕು. ಕಾಲಮಿತಿಯಲ್ಲಿ ತೆರಿಗೆ ಪಾವತಿಸದಿದ್ದರೆ ತೆರಿಗೆಗೆ ದಂಡ ವಸೂಲಿ ಮಾಡಲಾಗುವುದು’ ಎಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ತಿಳಿಸಿದ್ದಾರೆ.

ನೀರಿನ ಕರ ₹ 3 ಕೋಟಿ ಬಾಕಿ!

ಶಹಾಬಾದ್‌: ಶಹಾಬಾದ್‌ ನಗರಸಭೆ ವ್ಯಾಪ್ತಿಯಲ್ಲಿ 2023–24ನೇ ಆಸ್ತಿ ತೆರಿಗೆ ಶೇ 100ರಷ್ಟು ವಸೂಲಿಯಾಗಿದೆ. ಆದರೆ 24x7 ನೀರಿನ ಪೂರೈಕೆ ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ₹ 3 ಕೋಟಿಯಷ್ಟು ನೀರಿನ ಕರ ಬಾಕಿ ಉಳಿದಿದೆ! ‘ನಗರಸಭೆ ವ್ಯಾಪ್ತಿಯಲ್ಲಿ ಹಿಂದಿನ ವರ್ಷಗಳ ಬಾಕಿ ಇರುವ ಆಸ್ತಿ ತೆರಿಗೆ ಮಾರ್ಚ್ ತಿಂಗಳಾಂತ್ಯದವರೆಗೆ ವಸೂಲಿ ಮಾಡುತ್ತೇವೆ. ಆಸ್ತಿಗಳ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ನೋಟಿಸ್ ನೀಡಿದ ಎರಡ್ಮೂರು ದಿನಗಳಲ್ಲಿ ಸುಮಾರು ₹ 10 ಲಕ್ಷಕ್ಕೂ ಹೆಚ್ಚು ತೆರಿಗೆ ವಸೂಲಾಗಿದೆ’ ಎನ್ನುತ್ತಾರೆ ನಗರಸಭೆ ಮ್ಯಾನೇಜರ್ ಶರಣಗೌಡ ಪಾಟೀಲ. ‘₹ 3 ಕೋಟಿಯಷ್ಟು ಬಾಕಿ ಉಳಿದಿರುವ ನೀರಿನ ಕರ ಪೈಕಿ ಮಾರ್ಚ್‌ ಅಂತ್ಯದ ತನಕ ₹ 1.50 ಕೋಟಿಯಷ್ಟು ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಕರ ಸಂಗ್ರಹ ಅಭಿಯಾನದ ಫಲವಾಗಿ ಈಗ ₹ 15 ಲಕ್ಷದಷ್ಟು ನೀರಿನ ಕರ ಸಂಗ್ರಹಿಸಿದ್ದೇವೆ. ಎರಡು ಆಸ್ತಿ ಕರ ನೀರಿನ ಕರ ವಸೂಲಿಯಲ್ಲಿ ಆಗಿರುವ ಪ್ರಗತಿಯನ್ನು ನಗರಸಭೆ ಹೆಚ್ಚುವರಿ ಆಯುಕ್ತ ಐಎಎಸ್ ಅಧಿಕಾರಿ ಗಜಾನನ ಬಾಳೆ ಮತ್ತು ನಗರಸಭೆ ಸಿಬ್ಬಂದಿಯ ಶ್ರಮದಿಂದ ಸಾಧಿಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT