ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲದ ಸೌಲಭ್ಯ, ದಲ್ಲಾಳಿಗಳ ಮಧ್ಯೆ ನಲುಗುವ ಬೆಳೆಗಾರ

ವಾರ್ಷಿಕ ₹ 261 ಕೋಟಿ ಉತ್ಪಾದನೆ; ಬಡವಾಗುತ್ತಿರುವ ಬೆಳೆಗಾರ!
Last Updated 6 ಡಿಸೆಂಬರ್ 2021, 4:45 IST
ಅಕ್ಷರ ಗಾತ್ರ

ಕಲಬುರಗಿ: ನಿತ್ಯ ಅಡುಗೆ ಮನೆ ಅಲಂಕರಿಸುವ ತರಕಾರಿ ಮತ್ತು ಹಣ್ಣು ಬೆಳೆಗಾರರ ಆದಾಯ ಹಾಗೂ ಅವರ ಕುಟುಂಬ ನಿರ್ವಹಣೆಯ ದಿಕ್ಕನ್ನು ನಿರ್ಧರಿಸುವ ಮಾರುಕಟ್ಟೆಗಳು ರೈತರ ಹಾಗೂ ವರ್ತಕರ ಪಾಲಿಗೆ ಅಗ್ನಿಕುಂಡಗಳಾಗಿವೆ.

ಒಂದು ಕಡೆ ಕೃಷಿ ಮಾರುಕಟ್ಟೆಗಳ ದಲ್ಲಾಳಿಗಳ ಚಕ್ರವ್ಯೂಹದಲ್ಲಿ ಬೆಳೆಗಾರರು ಸಿಲುಕಿ ನಲುಗುತ್ತಿದ್ದಾರೆ. ಮತ್ತೊಂದು ಕಡೆ ಕುಡಿಯಲು ನೀರು, ತಲೆ ಮೇಲೆ ಸೂರು, ಕುಳಿತುಕೊಳ್ಳಲು ಸ್ಥಳವಿಲ್ಲದೆ ಕನಿಷ್ಠ ಸೌಲಭ್ಯಗಳ ನಡುವೆ ನೂರಾರು ವರ್ತಕರು ಬೀದಿ ಬದಿಯಲ್ಲಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಮಾರುತ್ತಿದ್ದಾರೆ.

‘ತಾಜಸುಲ್ತಾನಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ನೇರವಾಗಿ ಮಾರಲು ಅವಕಾಶ ಇಲ್ಲ. ಮಧ್ಯವರ್ತಿಗಳು ಉತ್ಪನ್ನಗಳನ್ನು ಅತಿ ಕಡಿಮೆ ದರದಲ್ಲಿ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರುತ್ತಾರೆ. ಜಮೀನಿನಲ್ಲಿ ಹಗಲು ರಾತ್ರಿ ದುಡಿದು ಒಂದು ಬಾಳೆ ಗೊನೆಗೆ ₹80 ಖರ್ಚು ಮಾಡಿ, ದಲ್ಲಾಳಿಗೆ ನಾವು ₹40ಗೆ ಮಾರುವ ದುಃಸ್ಥಿತಿ ಇದೆ’ ಎನ್ನುತ್ತಾರೆ ಬಾಳೆ ಬೆಳೆಗಾರ ಮಾರುತಿ ಇಂಗಳೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ಆಸೆಯಿಂದ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಧ್ಯ ರಾತ್ರಿಯೇ ಎಂಪಿಎಂಸಿಗೆ ತರುತ್ತಾರೆ. ಉತ್ಪನ್ನಗಳು ಹಾಳಾಗುವ ಮುನ್ನ ಬೇಗನೆ ಮಾರುವ ಆತುರದಲ್ಲಿ ಇರುತ್ತಾರೆ. ಆದರೆ, ಕೆಲವು ದಲ್ಲಾಳಿಗಳು ತಮ್ಮಲ್ಲಿನ ಒಬ್ಬರಿಗೆ ಲಾಭ ಆಗುವಂತೆ ಕನಿಷ್ಠ ದರಕ್ಕೆ ಹರಾಜು ಮಾಡು ತ್ತಾರೆ. ಹರಾಜಿಗೂ ಮುನ್ನವೇ ನಿಗದಿತ ಮೊತ್ತ ನಿರ್ಧಾರ ಆಗಿರುತ್ತದೆ. ಇದಕ್ಕೆ ಬೆಳೆಗಾರ ಆಕ್ಷೇಪಿಸಿದರೇ ಆತನ ಉತ್ಪನ್ನ ಯಾರೂ ಖರೀದಿಸದಂತೆ ನೋಡಿಕೊಳ್ಳುತ್ತಾರೆ. ಕೊನೆಗೆ ಬೇರೆ ಮಾರ್ಗ ಇಲ್ಲದೆ ಬೆಳೆಗಾರ, ಅವರು ಕೇಳಿದ ಬೆಲೆಗೆ ನೀಡುತ್ತಾರೆ.

ಎರಡು ಟಂಟಂಗಳಲ್ಲಿ 100 ಬಾಳೆ ಗೊನೆಗಳನ್ನು ಎಪಿಎಂಸಿಗೆ ತಂದರೆ,ದಲ್ಲಾಳಿಗಳು ತಲಾ ₹2,500 (ಒಟ್ಟು ₹5,000) ಯಂತೆ ಹರಾಜು ಕೂಗಿ ಖರೀದಿಸಿದರು. ₹1,000 ಬಿಟ್ ವ್ಯವಹಾರ, ₹ 200 ಹಮಾಲಿ, ಪ್ರತಿ ₹100ಕ್ಕೆ ₹12 ಕಮಿಷನ್ ಮುರಿದುಕೊಂಡು ₹3,344 ಕೈಗಿಟ್ಟರು. ₹2,000 ಗಾಡಿ ಬಾಡಿಗೆ, ₹200 ಡ್ರೈವರ್‌ ಬಾಟಾ ಕೊಟ್ಟರೆ ನಮಗೆ ₹1,144 ಉಳಿಯುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಲೆಗೆ ಚಿಲ್ಲರೆ ಹಣ ಸಿಕ್ಕರೆ, ಏತಕ್ಕಾಗಿ ಬೇಸಾಯ ಮಾಡಬೇಕು. ಒಂದು ಬಾಳೆ ಗೊನೆ ಬೆಳೆಯಲು ₹80 ವ್ಯಯಿಸಿ ₹40ಕ್ಕೆ ಮಾರಾಟ ಆಗುತ್ತಿದೆ ಎಂದರೆ ಅಧಿಕಾರಿಗಳೇ ಆಲೋಚಿಸಲಿ‘ ಎಂದು ಕೆಸರಟಗಿಯ ಬಾಳೆ ಬೆಳೆಗಾರ ಮಲ್ಲೇಶಪ್ಪ ಬಿ.ಬಾಳೆ ಅವರು ಬೇಸರಿಸುತ್ತಾರೆ.

ಆದಾಯದ ಅಸಮಾನ ಹಂಚಿಕೆ:‌‌

ಒಂದು ಗೊನೆಯಲ್ಲಿ ಅಂದಾಜು 160 ಬಾಳೆ ಇರುತ್ತವೆ. ಮೂರು ದಿನ ಕೋಲ್ಡ್‌ ಸ್ಟೊರೇಜ್‌ನಲ್ಲಿ ಇರಿಸಿದ ಬಳಿಕ ಹಣ್ಣಾದ ಬಾಳೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಡಜನ್‌ಗೆ ₹40ಯಂತೆ ಮಾರಾಟ ಆಗುತ್ತದೆ. 13 ಡಜನ್‌ ಬಾಳೆಹಣ್ಣಿಗೆ ₹520 ಆಗುತ್ತದೆ. ಇದರಲ್ಲಿ ಶೈತ್ಯಾಗಾರದ ಬಾಡಿಗೆ, ಇತರೆ ಶುಲ್ಕಗಳ ಮೊತ್ತವೆಂದು ಶೇ 25ರಷ್ಟು ಕಡಿತವಾಗಿ ₹130 ಹಾಗೂ ಸಗಟು ಖರೀದಿಯ ₹40 ತೆಗೆದರೂ ದಲ್ಲಾಳಿ ಹಾಗೂ ವರ್ತಕರು ₹350 ಆದಾಯ ಹಂಚಿಕೊಳ್ಳುತ್ತಾರೆ.

‘ಬಹುತೇಕ ಹಣ್ಣು, ತರಕಾರಿ, ಹೂ, ಸಾಂಬಾರು ಪದಾರ್ಥಗಳ ಮಾರಾಟದಲ್ಲಿ ದಲ್ಲಾಳಿ ಮತ್ತು ವರ್ತಕನಿಗೆ ಲಾಭ ಆಗುತ್ತಿದೆ. ಆದರೆ, ಅವುಗಳನ್ನು ಬೆಳೆದ ರೈತ ಬಡವಾಗುತ್ತಿದ್ದಾನೆ‘ ಎನ್ನುತ್ತಾರೆ ಕೃಷಿಕ ನಾಗೇಂದ್ರ ಇಟಗಿ.

’ಮುಂಜಾನೆ ಹೀರಾಪುರ ರಸ್ತೆ ಬದಿಯಲ್ಲಿ ಮಾರಾಟ ಮಾಡಿದರೆ, ಸಂಜೆ ಎಂಎಸ್‌ಕೆ ಮಿಲ್‌ ಸಮೀಪದ ಮೈದಾನದಲ್ಲಿ ಮಾರಬೇಕು. ನಿತ್ಯ ತರಕಾರಿ ಬುಟ್ಟಿ, ಮೂಟೆಗಳನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೊತ್ತೊಯ್ಯಬೇಕು’ ಎನ್ನುತ್ತಾರೆ ತರಕಾರಿ ವರ್ತಕಿ ಸೀತಾಬಾಯಿ.

’ಮಾರ್ಕೆಟ್‌ನಲ್ಲಿ ಕುಡಿಯುವ ನೀರಿಗೂ ಪರದಾಟ ಇದೆ. ರೈತರಿಗೆ ತಂಗುದಾಣ ಇಲ್ಲ. ಮಾರಾಟ ಆಗದೆ ಉಳಿಯುವ ತರಕಾರಿಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಸಾರ್ವಜನಿಕ ಶೌಚಾಲಯ ಇದ್ದರೂ ಅನೇಕರಿಗೆ ಬಯಲೇ ಶೌಚಾಲಯ. ವ್ಯಾಪಾರಿಗಳಿಗೆ ಮೂಗು ಮುಚ್ಚಿಕೊಂಡು ವಹಿವಾಟು ನಡೆಸುವ ಅನಿವಾರ್ಯತೆ ಇದೆ. ಮಣ್ಣಿನ ಆವರಣ ಇದ್ದು, ಸ್ವಲ್ಪವೇ ಮಳೆ ಬಿದ್ದರೆ ಮಾರ್ಕೆಟ್‌ ಎಲ್ಲ ಕೆಸರುಮಯವಾಗುತ್ತದೆ. ಮಧ್ಯರಾತ್ರಿ ಬಂದವರೂ ಆವರಣದಲ್ಲಿ ಮಲಗುವ ದುಃಸ್ಥಿತಿ ಇದೆ ಎನ್ನುತ್ತಾರೆ‘ ತರಕಾರಿ ವ್ಯಾಪಾರಿ ಶರಣಬಸವ.

₹260 ಕೋಟಿ ತೋಟಗಾರಿಕೆ ಬೆಳೆಗಳು

ಜಿಲ್ಲೆಯಲ್ಲಿ 22,048 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ವಾರ್ಷಿಕ ಉತ್ಪಾದನೆ 3.39 ಲಕ್ಷ ಟನ್‌ಗಳಷ್ಟಿದ್ದು, ಪ್ರತಿ ಹೆಕ್ಟೇರ್‌ಗೆ 15.41 ಇಳುವರಿ ಬರುತ್ತದೆ. ಇದು ₹260.91 ಕೋಟಿ ಮೌಲ್ಯ ಹೊಂದಿದೆ. ಈ ಪೈಕಿ 13,592 ಹೆಕ್ಟೇರ್‌ ಪ್ರದೇಶದಲ್ಲಿ ವಾರ್ಷಿಕ 1.91 ಲಕ್ಷ ಟನ್ ತರಕಾರಿ ಉತ್ಪಾದನೆ ಆಗುತ್ತದೆ. ಇದರ ಮೌಲ್ಯ ₹ 94.61 ಕೋಟಿ.

1.28 ಲಕ್ಷ ಟನ್‌ ಹಣ್ಣುಗಳನ್ನು 4,715 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದರ ಸರಾಸರಿ ವಾರ್ಷಿಕ ಮೌಲ್ಯ ₹105.43 ಕೋಟಿಗಳಷ್ಟಿದೆ. ಪುಷ್ಪ ಕೃಷಿ ಸಹ ಸಮೃದ್ಧಿಯಾಗಿದ್ದು, 1,184 ಹೆಕ್ಟೇರ್‌ನಲ್ಲಿ ವಾರ್ಷಿಕ 8,457 ಟನ್‌ಗಳ ₹20.78 ಕೋಟಿ ಮೊತ್ತದಷ್ಟಿದೆ. ಉಳಿದಂತೆ 2,418 ಹೆಕ್ಟೇರ್‌ನಲ್ಲಿ 11,083 ಟನ್ ಸಾಂಬಾರು ಬೆಳೆಯ ₹ 39.91 ಕೋಟಿ ಹಾಗೂ 41 ಹೆಕ್ಟೇರ್‌ನಲ್ಲಿ 150 ಟನ್‌ಗಳ ₹15 ಲಕ್ಷ ಮೊತ್ತದ ತೆಂಗು ಬೆಳೆ ಬೆಳೆಯಲಾಗುತ್ತಿದೆ.

ಹವಾಮಾನ ವೈಪರೀತ್ಯ, ಶೈತ್ಯಾಗಾರದ ಅಭಾವ, ದಲ್ಲಾಳಿ ನಿಯಂತ್ರಿತ ಮಾರುಕಟ್ಟೆ, ಅಸಮರ್ಪಕ ಸಾರಿಗೆ ವ್ಯವಸ್ಥೆಯಿಂದಾಗಿ ಜಿಲ್ಲೆಯಲ್ಲಿ ಹಣ್ಣಿನ ಬೆಳೆಗಳ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

2017ರಿಂದ 2020–21ರ ಅವಧಿಯಲ್ಲಿ ತರಕಾರಿ ಬಿತ್ತನೆಯು 11,539 ಹೆಕ್ಟೇರ್‌ ಪ್ರದೇಶದಿಂದ 13,592 ಹೆಕ್ಟೇರ್‌ ಪ್ರದೇಶಕ್ಕೆ ಏರಿಕೆಯಾಗಿದೆ. ಪುಷ್ಪ ಕೃಷಿ ಸಹ 932 ಹೆಕ್ಟೇರ್‌ನಿಂದ 1,184 ಹೆಕ್ಟೇರ್‌ಗೆ ತಲುಪಿದೆ. ಔಷಧೀಯ ಮತ್ತು ಸುಗಂಧಿತ ಸಸ್ಯಗಳ ಬಿತ್ತನೆಯು ಶೂನ್ಯದಲ್ಲಿದೆ. 2017ರಲ್ಲಿ 3,045 ಹೆಕ್ಟೇರ್‌ ಇದ್ದ ಸಾಂಬಾರು ಬೆಳೆಯ ಪ್ರಮಾಣ ಸಹ 4 ವರ್ಷದಲ್ಲಿ 2,418ಕ್ಕೆ ಇಳಿದಿರುವುದು ತೋಟಗಾರಿಕೆ ಇಲಾಖೆಯ ಅಂಕಿಅಂಶಗಳಿಂದ ದೃಢಪಡುತ್ತದೆ.

ಶುರುವಾಗದ ಮಾರುಕಟ್ಟೆ ಕಾಮಗಾರಿ

ಯಡ್ರಾಮಿ: ಪಟ್ಟಣದಲ್ಲಿ ಸೋಮವಾರ ವಾರದ ಸಂತೆಯು ಅರಳಗುಂಡಗಿ, ಸಿಂದಗಿ ತೆರಳುವ ರಸ್ತೆ ಮೇಲೆ ನಡೆಯುತ್ತದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಿಯಾಗುತ್ತಿದೆ.

ಈ ಹಿಂದೆ ವಾರದ ಸಂತೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿನ ತಹಶೀಲ್ ಮತ್ತು ಪಿಎಸ್‌ಐ ವರ್ಗಾವಣೆ ಬಳಿಕ ಮತ್ತೆ ರಸ್ತೆ ಮೇಲೆ ಸಂತೆ ನಡೆಯುತ್ತಿದೆ. ತರಕಾರಿ ಮಾರುಕಟ್ಟೆಗಾಗಿ ಸರ್ಕಾರ ₹1 ಕೋಟಿ ಅನುದಾನ ಮಂಜೂರು ಮಾಡಿದ್ದರೂ ಕಾಮಗಾರಿ ಆರಂಭಿಸಿಲ್ಲ. ಕೂಡಲೇ ಮಾರುಕಟ್ಟೆಯ ಕಟ್ಟಡ ಕಾಮಗಾರಿ ಆರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯ. ತಾಲ್ಲೂಕಿನ 1,441 ಹೇಕ್ಟರ್ ಜಮೀನಿನಲ್ಲಿ 15,630 ಟನ್ ತರಕಾರಿ ಹಾಗೂ ₹75 ಲಕ್ಷ ಮೌಲ್ಯದ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ಹೈಟೆಕ್ ಕಣ್ಣಿ ಮಾರ್ಕೆಟ್; ತಾಂತ್ರಿಕ ಒಪ್ಪಿಗೆ ಬಾಕಿ

ಎಂಎಸ್‌ಕೆ ಮಿಲ್‌ ಬಳಿ ತರಕಾರಿ ಹೈಟೆಕ್ ಕಣ್ಣಿ ಮಾರ್ಕೆಟ್‌ ಮತ್ತು ಶೀತಲೀಕರಣ ಘಟಕ ನಿರ್ಮಾಣ ಮಾಡುವುದಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಭೂಮಿಪೂಜೆ ನೆರವೇರಿದೆ. ಆದರೆ, ಟೆಂಡರ್ ಒಪ್ಪಿಗೆಗೆ ತಾಂತ್ರಿಕ ಅನುಮೋದನೆ ಬಾಕಿ ಉಳಿದಿದೆ.

ಮಹಾರಾಷ್ಟ್ರದ ಸೊಲ್ಲಾಪುರ, ನೆರೆಯ ವಿಜಯಪುರ, ದಾವಣಗೆರೆ, ಬೆಳಗಾವಿ ಜಿಲ್ಲೆಗಳು ಸೇರಿದಂತೆ ಕಲಬುರಗಿಯ ಆಳಂದ, ಜೇವರ್ಗಿ, ಅಫಜಲಪುರ ಭಾಗದ ದಲ್ಲಾಳಿ ಹಾಗೂ ರೈತರು ನಸುಕಿನ ಜಾವ ಗೂಡ್ಸ್‌ ವಾಹನಗಳಲ್ಲಿ ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ತಂದು ಮಾರುತ್ತಾರೆ.

ಬಸ್‌ ನಿಲ್ದಾಣ ಮುಂಭಾಗದಲ್ಲಿ ಮಾರಾಟ

ಅಫಜಲಪುರ: ಪಟ್ಟಣದ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರಿಗೆ ಪ್ರತ್ಯೇಕ ಮಾರುಕಟ್ಟೆ ಇಲ್ಲದ ಕಾರಣ ಬಸ್ ನಿಲ್ದಾಣದ ಮುಂಭಾಗ, ಇತರೆ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ತಾಲ್ಲೂಕಿನ 1,643 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 29,277 ಮೆಟ್ರಿಕ್ ಟನ್ ತರಕಾರಿ ಹಾಗೂ 1,334 ಹೆಕ್ಟೇರ್‌ನಲ್ಲಿ 35,232 ಮೆಟ್ರಿಕ್ ಟನ್ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ಅವಕಾಶ ಇದ್ದು, ಗ್ರಾಹಕರ ಅಲ್ಲಿಗೆ ಬರುವುದಿಲ್ಲ. ಹೀಗಾಗಿ, ಪಂಚಾಯಿತಿ ಆವರಣದಲ್ಲಿ ಪ್ರತಿ ಸೋಮವಾರ ಸಂತ ದಿನವಾಗಿದ್ದು, ಹೆಚ್ಚಿನ ವಹಿವಾಟು ನಡೆಯುತ್ತದೆ. ಪಂಚಾಯಿತಿ ಆವರಣ ಚಿಕ್ಕದಾಗಿದೆ. ಸಮೀಪದಲ್ಲಿ ಪ್ರಾಥಮಿಕ ಶಾಲೆ ಇದ್ದು, ಮಕ್ಕಳ ಕಲಿಕೆಗೆ ತೊಂದರೆ ಆಗುತ್ತದೆ. ಹೀಗಾಗಿ, ಎಪಿಎಂಸಿ ಆವರಣದಲ್ಲಿ ಮಾರಾಟ ಮಾಡುವಂತೆ ಹಲವು ಸಂಘಟನೆಗಳು ಹೋರಾಟ ಮಾಡಿದ್ದರೂ ಅದು ಸಾಧ್ಯವಾಗಿಲ್ಲ.

ಸೌಕರ್ಯಗಳ ಕೊರತೆ: ಗ್ರಾಹಕ ಪರದಾಟ

ಜೇವರ್ಗಿ: ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ತರಕಾರಿ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.

ತಾಲ್ಲೂಕಿನಲ್ಲಿ ವಾರ್ಷಿಕ 12,657 ಟನ್ ತರಕಾರಿ ಹಾಗೂ 3,128 ಟನ್ ಹಣ್ಣು ಸೇರಿ ₹7.82 ಕೋಟಿ ಮೌಲ್ಯದಷ್ಟು ಬೆಳೆಯಲಾಗುತ್ತದೆ. ನೆರೆಯ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಸಾಗಾಟ ಆಗುತ್ತದೆ.

ಮಾರುಕಟ್ಟೆಯಲ್ಲಿ 40 ಜನ ವರ್ತಕರಿದ್ದು, ನಿತ್ಯ ಸಾವಿರಾರು ಗ್ರಾಹಕರು ಹಣ್ಣು ಮತ್ತು ತರಕಾರಿ ಖರೀದಿಗೆ ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಕುಡಿಯುವ ನೀರಿನ ಸೌಕರ್ಯ ಇಲ್ಲ. ಖಾಸಗಿ ವ್ಯಕ್ತಿಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ ಎನ್ನುತ್ತಾರೆ ವರ್ತಕ ಅಬ್ದುಲ್ ನಬೀ ಭಾಗವಾನ್.

ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಮಳೆಯಾದರೇ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಂತೆ ಬದಲಾಗುತ್ತದೆ. ಸ್ಥಳೀಯ ಪುರಸಭೆ ಅಧಿಕಾರಿಗಳು ನಿಯಮಿತವಾಗಿ ಕಸ ವಿವೇವಾರಿ ಮಾಡುತ್ತಿಲ್ಲ. ಇದರಿಂದ ವರ್ತಕರಿಗೆ ತರಕಾರಿ ಮಾರಾಟ ಮಾಡಲು ಅನನುಕೂಲವಾಗುತ್ತಿದೆ ಎಂದು ವರ್ತಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕಾಳಗಿ; ರಸ್ತೆ ಮೇಲೆ ತರಕಾರಿ ಮಾರಾಟ

ಕಾಳಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ರಟಕಲ್, ಕೋಡ್ಲಿ ಮತ್ತು ತೆಂಗಳಿಯಲ್ಲಿ ವಾರದ ಸಂತೆ ಜೋರಾಗಿ ನಡೆಯುತ್ತದೆ. ಸೂಗೂರ, ಹೆಬ್ಬಾಳದಲ್ಲಿ ಸಣ್ಣ ಪ್ರಮಾಣದಲ್ಲಿ ಜರುಗುತ್ತದೆ.
ತೆಂಗಳಿ, ಮಂಗಲಗಿ, ಹೆಬ್ಬಾಳ ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಮುಖ್ಯರಸ್ತೆ ಮೇಲೆ ಕುಳಿತು ತರಕಾರಿ ಮಾರಲಾಗುತ್ತದೆ.

ತಾಲ್ಲೂಕಿನಲ್ಲಿ 898 ಹೆಕ್ಟೇರ್ ಪ್ರದೇಶ ತರಕಾರಿ ಹಾಗೂ 145 ಹೆಕ್ಟೇರ್‌ ಜಮೀನಿನಲ್ಲಿ ಹಣ್ಣು ಬೆಳೆಯಲಾಗುತ್ತದೆ. ವಾರ್ಷಿಕ ಅನುಕ್ರಮವಾಗಿ 12,640 ಮತ್ತು 4,723 ಟನ್ ಉತ್ಪನ್ನ ಆಗುತ್ತದೆ.

ಕಾಳಗಿಯಲ್ಲಿ ಗ್ರಾಮೀಣ ಸಂತೆ ಶೆಡ್ ಹಾಳಾಗಿದ್ದು, ಪ್ರತ್ಯೇಕ ಮಾರುಕಟ್ಟೆ ಇಲ್ಲ. ರಸ್ತೆ ಮೇಲೆ ಸಂಚರಿಸುವ ವಾಹನಗಳ ದೂಳಿನ ಕಣಗಳು ಹಣ್ಣು ಮತ್ತು ತರಕಾರಿಗಳ ಮೇಲೆ ಆವರಿಸುತ್ತದೆ. ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ನಿತ್ಯ ಗ್ರಾಹಕ ಮತ್ತು ವ್ಯಾಪಾರಸ್ಥರು ಪರದಾಡುತ್ತಾರೆ. ಈ ಬಗ್ಗೆ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.

*ತೋಟಗಾರಿಕೆ ಬೆಳೆಗಾರರು ಎದುರಿಸುತ್ತಿರುವ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಇ–ಸ್ಯಾಪ್‌ (E-Sap) ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ ಮೂಲಕ ಕೀಟ ಹಾಗೂ ರೋಗಗಳ ಮಾಹಿತಿಯನ್ನು ರೈತರು ಕೃಷಿ ವಿಜ್ಞಾನಿಗಳ ಜತೆಗೆ ಹಂಚಿಕೊಳ್ಳಬಹುದು
– ಪ್ರಭುರಾಜ ಹಿರೇಮಠ, ಜಿಲ್ಲಾ ತೋಟಗಾರಿಕೆ ಡಿಡಿ

*₹30 ಕೋಟಿಯಲ್ಲಿ ಹೈಟೆಕ್ ಕಣ್ಣಿ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ತಾಂತ್ರಿಕ ಒಪ್ಪಿಗೆಗೆ ಕಾಯುತ್ತಿದ್ದು, ಚುನಾವಣೆ ನೀತಿ ಸಂಹಿತಿ ಮುಗಿದ ತಕ್ಷಣ ಟೆಂಡರ್‌ಗೆ ಅನುಮೋದನೆ ನೀಡಲಾಗುವುದು. 18 ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ.

– ದಯಾಘನ ಧಾರವಾಡಕರ್, ‘ಕುಡಾ’ ಅಧ್ಯಕ್ಷ

*ದಲ್ಲಾಳಿಗಳು ನಿಯಮ ಮೀರಿ ಬೆಳೆಗಾರರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಿದರೆ ಅವರ ಲೈಸನ್ಸ್ ರದ್ದುಪಡಿಸುತ್ತೇವೆ. ಇಂತಹ ಘಟನೆಗೆ ಒಳಗಾದ ರೈತರು ಸೂಕ್ತ ದಾಖಲೆಗಳೊಂದಿಗೆ ಎಪಿಎಂಸಿ ಕಚೇರಿ ಸಂಪರ್ಕಿಸಬಹುದು. ನಿತ್ಯ 2–3 ಟ್ರ್ಯಾಕ್ಟರ್ ತ್ಯಾಜ್ಯ ಉತ್ಪತಿ ಆಗುತ್ತಿದೆ. ಕಡಿಮೆ ಸಿಬ್ಬಂದಿಯ ನೆರವಿನಿಂದ ಸ್ವಚ್ಛತೆ ಮಾಡುತ್ತಿದ್ದೇವೆ.

– ಶೈಲಜಾ ಎಂ.ವಿ, ತಾಜಸುಲ್ತಾನಪುರ ಎಪಿಎಂಸಿ ಮೇಲ್ವಿಚಾರಕಿ

*ನಗರದಲ್ಲಿನ 5 ಹಾಪ್‍ಕಾಮ್ಸ್ ಮಳಿಗೆಗಳು ಬೆಳೆಗಾರರಿಂದ ನೇರವಾಗಿ ಮಾಸಿಕ ಸುಮಾರು 180 ಕ್ವಿಂಟಲ್‌ ಆಹಾರ ಮತ್ತು ತರಕಾರಿ ಖರೀದಿಸಿ ಮಾರಾಟ ಮಾಡುತ್ತಿವೆ. ತಾಲ್ಲೂಕು ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಮಳಿಗೆ ತೆರೆಯಲಾಗುವುದು.

– ಪರಮೇಶ್, ಜಿಲ್ಲಾ ಹಾಪ್‌ಕಾಮ್ಸ್ ವ್ಯವಸ್ಥಾಪಕ

*25 ವರ್ಷಗಳಿಂದ ನೂರಾರು ವ್ಯಾಪಾರಿಗಳು ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿದ್ದು, ಸರ್ಕಾರದಿಂದ ಯಾವುದೇ ಸೌಕರ್ಯಗಳು ದೊರೆತಿಲ್ಲ. ಬಿಸಿಲು, ಮಳೆ, ಚಳಿಯಲ್ಲೇ ನಿತ್ಯ ತರಕಾರಿ ಮಾರುತ್ತಿದ್ದೇವೆ.

– ಮೈನುದ್ದೀನ್ ಪಟೇಲ್, ಕಲಬುರಗಿ ಕಣ್ಣಿ ಮಾರ್ಕೆಟ್‌ ಸಂಘದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT